ಬೆಂಗಳೂರು,ಆ.2- ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿ, ಈಗಾಗಲೇ ಬಹುಮತ ಸಾಬೀತು ಪಡಿಸಿದ್ದಾರೆ. ಆದರೆ ಇದುವರೆಗೂ ಸಂಪುಟ ರಚನೆಯಾಗಿಲ್ಲ. ಸಂಪುಟ ರಚನೆಯಲ್ಲಿ ಮುಖ್ಯಮಂತ್ರಿಗಳಿಗೆ ಧರ್ಮ ಸಂಕಟ ಎದುರಾಗಿದ್ದು, ಯಾರಿಗೆ ಸಚಿವ ಸ್ಥಾನ ನೀಡಬೇಕೆಂಬ ಗೊಂದಲದಲ್ಲಿದ್ದಾರೆ.
ಅತೃಪ್ತ ಶಾಸಕರನ್ನು ಸ್ಪೀಕರ್ ಅನರ್ಹಗೊಳಿಸುವ ಮೊದಲು, ಕೆಲವರು ಯಡಿಯೂರಪ್ಪನವರ ಜೊತೆಗೇ ಪ್ರಮಾಣವಚನ ಸ್ವೀಕರಿಸಲಿದ್ದಾರೆಂದು ಹೇಳಲಾಗುತ್ತಿತ್ತು. ವಿಶ್ವಾಸಮತ ಗೆದ್ದ ನಂತರ ಸಿಎಂ ಯಡಿಯೂರಪ್ಪ ದೆಹಲಿಗೆ ಹೋಗಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಭೇಟಿಯಾಗುವ ಕಾರ್ಯಕ್ರಮ ಇಟ್ಟುಕೊಂಡಿದ್ದರು.
ಆದರೆ, ಸಮಯ ನಿಗದಿಯಾಗದ ಹಿನ್ನಲೆಯಲ್ಲಿ ಮುಖ್ಯಮಂತ್ರಿಗಳ ದೆಹಲಿ ಪ್ರವಾಸ ರದ್ದಾಯಿತು. ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಮಾಡುವ ಯಾವುದೇ ಲಕ್ಷಗಳು ಕಾಣಿಸುತ್ತಿಲ್ಲ. ಯಡಿಯೂರಪ್ಪ ಅವರ ಮೇಲೆ ಬಿಜೆಪಿ ಹೈಕಮಾಂಡ್ ಹದ್ದಿನ ಕಣ್ಣಿಟ್ಟು ನಿಯಂತ್ರಣ ಮಾಡುತ್ತಿರುವುದೇ ಇದಕ್ಕೆ ಕಾರಣ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
ಕುಮಾರಸ್ವಾಮಿ ಸರಕಾರ ಬಿದ್ದು ಹೋದ ನಂತರ, ಸರಕಾರ ರಚನೆ ಮಾಡಲು ಅಮಿತ್ ಶಾ ಅನುಮತಿ ಸಿಗಲು ಸಾಕಷ್ಟು ಸಮಯ ಬಿಜೆಪಿ ಮುಖಂಡರು ಕಾಯಬೇಕಾಯಿತು. ಈಗ, ಹೊಸ ಸಚಿವ ಸಂಪುಟ ರಚನೆಗೂ ಅದೇ ಪರಿಸ್ಥಿತಿ ಇದೆ.
ಪ್ರಸ್ತುತ 12 ಮಂದಿ ಸಚಿವ ಸ್ಥಾನದ ರೇಸಿನ ಮುಂಚೂಣಿಯಲ್ಲಿ ಇದ್ದಾರೆ. 12 ಮಂದಿ ಪಟ್ಟಿಯನ್ನು ಯಡಿಯೂರಪ್ಪ ಅವರು ಕನಿಷ್ಠ 5 ಸ್ಥಾನ, ಗರಿಷ್ಠ 7ಕ್ಕೆ ಇಳಿಸಬೇಕಿದೆ. ಒಂದೇ ಸಮುದಾಯದ ಡಜನ್ ಗಟ್ಟಲೆ ಶಾಸಕರನ್ನ ಸಚಿವರನ್ನಾಗಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಯಡಿಯೂರಪ್ಪ ಅವರು ಧರ್ಮಸಂಕಟದಲ್ಲಿ ಸಿಲುಕಿದ್ದಾರೆ.
ಕೆಲವೊಂದು ಮೂಲಗಳ ಪ್ರಕಾರ ಮೊದಲ ಹಂತದಲ್ಲಿ 18-20 ಮುಖಂಡರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಯಿದೆ. ಇವರೆಲ್ಲರ ಪ್ರಮಾಣವಚನ ಸ್ವೀಕಾರ ಮುಗಿದ ನಂತರ, ಮುಂದಿನ ಬೆಳವಣಿಗೆಗಳನ್ನು ಆಧರಿಸಿ, ದೆಹಲಿ ವರಿಷ್ಠರು ಮುಂದಿನ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ಲೋಕಸಭೆ ಅಧಿವೇಶನ ಆ.7ರವರೆಗೆ ನಡೆಯುವುದರಿಂದ, ಇದಾದ ನಂತರವೇ ಅಮಿತ್ಷಾ ಕರ್ನಾಟಕ ಸಚಿವ ಸಂಪುಟ ವಿಸ್ತರಣೆಯ ಬಗ್ಗೆ ಅಂತಿಮ ಷರಾ ಬರೆಯುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಸಂಸತ್ತಿನಲ್ಲಿ ಹಾಜರಾತಿ ಇರಲೇಬೇಕೆಂದು ಪ್ರಧಾನಿ ಮೋದಿ ಸೂಚನೆ ನೀಡಿರುವುದರಿಂದ, ಅಮಿತ್ ಷಾ ಅದಕ್ಕೆ ಮೊದಲು ಆದ್ಯತೆ ನೀಡುತ್ತಿದ್ದಾರೆಂದು ವರದಿಯಾಗಿದೆ.
ವಿಶ್ವಾಸಮತ ಗೆದ್ದದ್ದು, ಸಂಪುಟ ವಿಸ್ತರಣೆ, ಬರ ಪರಿಹಾರದ ಬಗ್ಗೆ ಸವಿಸ್ತಾರವಾಗಿ ಮಾತುಕತೆ ನಡೆಸಲು, ವರಿಷ್ಠರ ಬಳಿ ಆಗಸ್ಟ್ ಐದು ಮತ್ತು ಆರಕ್ಕೆ ದೆಹಲಿಗೆ ಹೋಗಲಿದ್ದೇನೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಹಾಗಾಗಿ, ಅದಕ್ಕೂ ಮೊದಲು, ಹೊಸ ಸಂಪುಟ ರಚನೆಯಾಗುವ ಸಾಧ್ಯತೆಗಳು ಕಡಿಮೆ.
ಸ್ಪೀಕರ್ ಎಲ್ಲಾ ಹದಿನೇಳು ಶಾಸಕರನ್ನು ಅನರ್ಹಗೊಳಿಸಿದ ನಂತರ, ಇವರ ಮುಂದಿನ ಕಾನೂನು ಹೋರಾಟ, ಮುಂಬರುವ ಅವರ ಪ್ರತಿನಿಧಿಸುವ ಕ್ಷೇತ್ರಗಳ ಉಪಚುನಾವಣೆ, ಅಭ್ಯರ್ಥಿಗಳ ಆಯ್ಕೆಯ ಬಗ್ಗೆಯೂ, ಯಡಿಯೂರಪ್ಪ, ವರಿಷ್ಠರ ಬಳಿ ಮಾತುಕತೆ ನಡೆಸುವ ಸಾಧ್ಯತೆಯಿಲ್ಲದಿಲ್ಲ.
ಈ ನಡುವೆ ಈಗಾಗಲೇ ಬಿಜೆಪಿ ಶಾಸಕರು ಜಾತಿ ಅಧಾರದ ಮೇಲೆ ಸಚಿವ ಸಂಪುಟದಲ್ಲಿ ಸ್ಥಾನವನ್ನು ಪಡೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ ಎನ್ನಲಾಗುತ್ತಿದ್ದು, ತಮ್ಮ ಬೆಂಬಲಿಗರ ಮೂಲಕ ಕೆಲವು ಮಂದಿ ಶಾಸಕರು ಬಿಎಸ್ವೈ ಬಳಿ ತೆರಳಿ ಅವರ ಮೇಲೆ ಒತ್ತಡ ಹಾಕುತ್ತಿದ್ದಾರೆ ಎನ್ನಲಾಗಿದೆ.
ಈಗ ಸಚಿವ ಸ್ಥಾನಕ್ಕೆ ಒತ್ತಡ ಹೆಚ್ಚಾಗುತ್ತಿರುವುದರಿಂದ ಬಿಎಸ್ವೈಗೆ ಹೊಸ ತಲೆನೋವು ಶುರುವಾಗಿದ್ದು, ತಮ್ಮ ಬಳಿ ಬಂದವರಿಗೆ ಯಾವುದೇ ವಿಶ್ವಾಸ ನೀಡದೇ ನಾನು ಹೈಕಮಾಂಡ್ಗೆ ಪಟ್ಟಿಯನ್ನು ನೀಡುವೆ. ಆದನ್ನು ಪರಿಗಣನೆ ಮಾಡುವುದು ಹೈಕಮಾಂಡ್ ನಾಯಕರಿಗೆ ಬಿಟ್ಟದ್ದು, ನಾನು ಈ ವಿಷಯದಲ್ಲಿ ಯಾವುದೇ ರೀತಿಯಲ್ಲಿ ಸಹಾಯ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾರೆ ಎನ್ನಲಾಗಿದೆ.
ಈ ನಡುವೆ ನಿನ್ನೆ ತಮ್ಮನ್ನು ಭೇಟಿಯಾದ ಪಂಚಮಸಾಲಿ ಸ್ವಾಮಿಜಿಗಳಿಗೆ ಕೂಡ ಬಿಎಸ್ವೈ ಸ್ಪಷ್ಟ ಸಂದೇಶವನ್ನು ನೀಡಿದ್ದು, ಪಂಚಮಸಾಲಿಯ ಐದರಿಂದ-ಆರು ಮಂದಿಗೆ ಸಚಿವ ಸ್ಥಾನವನ್ನು ನೀಡಿದರೆ, ಬೇರೆಯವರಿಗೆ ಸಚಿವ ಸ್ಥಾನವನ್ನು ನೀಡುವುದಕ್ಕೆ ಕಷ್ಟವಾಗುತ್ತದೆ., ಇದಲ್ಲದೇ ಸಚಿವ ಸಂಪುಟವನ್ನು ಸರಿಯಾಗಿ ನಿಭಾಯಿಸಬೇಕಾಗಿದೆ. ಈ ಕಷ್ಟವನ್ನು ಪ್ರತಿಯೊಬ್ಬರು ಮನಗಾಣಬೇಕು ಅಂತ ಸ್ವಾಮೀಜಿಗಳಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ.
ಸಚಿವ ಸ್ಥಾನ ಆಕಾಂಕ್ಷಿಗಳು:
ಜಗದೀಶ್ ಶೆಟ್ಟರ್, ವಿ.ಸೋಮಣ್ಣ, ಬಸವರಾಜ ಬೊಮ್ಮಾಯಿ, ಸಿ.ಎಂ.ಉದಾಸಿ, ಜೆ.ಸಿ.ಮಾಧುಸ್ವಾಮಿ, ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ರೇಣುಕಾಚಾರ್ಯ, ಬಸನಗೌಡಪಾಟೀಲ್ ಯತ್ನಾಳ್, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ದತ್ತಾತ್ರೇಯ ಪಾಟೀಲ್ ರೇವೂರ್.