ಬೆಂಗಳೂರು: ಐಎಂಎ ಜ್ಯುವೆಲ್ಸ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಎಸ್ಐಟಿ ಹಾಗೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಈಗ ಈ ಪ್ರಕರಣಕ್ಕೆ ಸಂಬಂಧಿಸಿ ಐಪಿಎಸ್ ಅಧಿಕಾರಿ ಅಜಯ್ ಹಿಲೋರಿ ಅವರನ್ನು ಎಸ್ಐಟಿ ವಿಚಾರಣೆ ನಡೆಸಿರುವುದು ಸಾಕಷ್ಟು ಕುತೂಹಲ ಸೃಷ್ಟಿಸಿದೆ.
2018ರಲ್ಲಿ ಬೆಂಗಳೂರು ಪೂರ್ವ ವಿಭಾಗ ಡಿಸಿಪಿಯಾಗಿ ಅಜಯ್ ಹಿಲೋರಿ ಕಾರ್ಯ ನಿರ್ವಹಿಸಿದ್ದರು. ಐಎಂಎ ಜ್ಯುವೆಲ್ಸ್ ಇರುವ ಶಿವಾಜಿನಗರ ಕೂಡ ಇವರ ಪೊಲೀಸ್ ಠಾಣೆಯ ಅಡಿಯಲ್ಲೇ ಇತ್ತು. ಐಎಂಎ ವಂಚನೆ ಬಗ್ಗೆ ಮೊದಲ ಬಾರಿಗೆ ದೂರು ಬಂದರೂ ಅಜಯ್ ಹಿಲೋರಿ ಅದನ್ನು ದಾಖಲಿಸಲು ಹಿಂದೇಟು ಹಾಕಿದ್ದರು ಎನ್ನಲಾಗಿದೆ. ಈ ಹಗರಣದ ಬಗ್ಗೆ ಮೊದಲೇ ಮಾಹಿತಿ ಇದ್ದರೂ ಆ ಬಗ್ಗೆ ಏಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂದು ಅಜಯ್ ಅವರನ್ನು ಪ್ರಶ್ನಿಸಲಾಗಿದೆ.
ಮನ್ಸೂರ್ಗೆ ಕ್ಲೀನ್ ಚಿಟ್ ಕೊಡಿಸಿದ್ದಾರೆ ಎನ್ನುವ ಆರೋಪವನ್ನು ಅಜಯ್ ಹಿಲೋರಿ ಎದುರಿಸುತ್ತಿದ್ದಾರೆ. ಪ್ರಕರಣ ಮುಚ್ಚಿ ಹಾಕಲು ಮನ್ಸೂರ್ನಿಂದ ಅಜಯ್ ಸಾಕಷ್ಟು ಕಿಕ್ ಬ್ಯಾಕ್ ಪಡೆದಿದ್ದಾರೆ ಎಂದು ಶಂಕಿಸಲಾಗಿದೆ. ಅಜಯ್ ಅವರ ದೆಹಲಿ ಮನೆಗೆ ಪೀಠೋಪಕರಣಗಳನ್ನು ಚೀನಾದಿಂದ ತರಿಸಲಾಗಿತ್ತು. ಇದಕ್ಕೆ ಹಣ ನೀಡಿದ್ದು ಇದೇ ಮನ್ಸೂರ್ ಎಂಬ ಮಾತೂ ಕೇಳಿಬಂದಿವೆ.
ಈ ಎಲ್ಲ ಕಾರಣಕ್ಕೆ ಅಜಯ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ ಅವರು ನೀಡುವ ಮಾಹಿತಿಗಳು ಈ ಪ್ರಕರಣದಲ್ಲಿ ತುಂಬಾನೇ ಪ್ರಮುಖ ಪಾತ್ರ ವಹಿಸಲಿದೆ ಎನ್ನಲಾಗಿದೆ.
ಈ ಪ್ರಕರಣದಲ್ಲಿ ಕೆಳಹಂತದ ಪೊಲೀಸರು ಸರಿಯಾಗಿ ತನಿಖೆ ನಡೆಸಿಲ್ಲ ಎನ್ನುವ ಆರೋಪ ಇದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾರುಕಟ್ಟೆ ಮತ್ತು ಗುಪ್ತಚರ ವಿಭಾಗದ ಸೂಚನೆ ಮೇರೆಗೆ ತನಿಖೆ ನಡೆಯುತ್ತಿದೆ. ಡಿಸಿಪಿ ಗಿರೀಶ್, ಡಿಐಜಿ ರವಿಕಾಂತೇಗೌಡ ಅವರು ಅಜಯ್ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ.
2 ಸಾವಿರ ಕೋಟಿ ರೂ. ವಂಚನೆ ಮಾಡಿ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಮನ್ಸೂರ್ ಖಾನ್ನನ್ನು ದೆಹಲಿಗೆ ಬರುತ್ತಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಮನ್ಸೂರ್ ಖಾನ್ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಪ್ರಕರಣವನ್ನು ಸರ್ಕಾರ ಎಸ್ಐಟಿಗೆ ನೀಡಿತ್ತು. ಇದುವರೆಗೂ 40 ಸಾವಿರಕ್ಕೂ ಹೆಚ್ಚು ದೂರುಗಳು ಮನ್ಸೂರ್ ಖಾನ್ ವಿರುದ್ಧ ದಾಖಲಾಗಿವೆ. ಮನ್ಸೂರ್ ಖಾನ್ನನ್ನು 14 ದಿನಗಳ ನ್ಯಾಯಾಂಗ ಬಂಧನ ನೀಡಿ ಆ.1ರಂದು ಸಿಟಿ ಸಿವಿಲ್ ಕೋರ್ಟ್ ಆದೇಶ ಹೊರಡಿಸಿತ್ತು.