
ಬೆಂಗಳೂರು,ಆ.1-ರಾಜ್ಯದಲ್ಲಿ ಮುಂಗಾರು ಮಳೆ ಕೊರತೆಯಿಂದ ಈ ವರ್ಷವೂ ಬರದ ಛಾಯೆ ಆವರಿಸಿದ್ದು, ಆ.15ರ ನಂತರ ಬರಪೀಡಿತ ಪ್ರದೇಶಗಳ ಘೋಷಣೆಗೆ ರಾಜ್ಯ ಸರ್ಕಾರ ಸಿದ್ದತೆ ನಡೆಸಿದೆ.
ಸತತ ಬರ ಪರಿಸ್ಥಿತಿ ರಾಜ್ಯವನ್ನು ಕಾಡುತ್ತಿದೆ. ಕಳೆದ ವರ್ಷ ಹಿಂಗಾರಿನಲ್ಲಿ 156 ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿತ್ತು. ಈ ಬಾರಿಯ ಮುಂಗಾರಿನಲ್ಲೂ ಇದುವರೆಗೂ ಶೇ.19ರಷ್ಟು ಮಳೆ ಕೊರತೆ ಉಂಟಾಗಿದೆ.
ಆ.15ರವರೆಗೂ ಕಾದು ನೋಡಿ ಉತ್ತಮ ಮಳೆಯಾಗದಿದ್ದರೆ ತೀವ್ರ ಮಳೆ ಕೊರತೆ ಎದುರಿಸುವ ತಾಲ್ಲೂಕುಗಳನ್ನು ಬರಪೀಡಿತವೆಂದು ಘೋಷಿಸಲು ಉದ್ದೇಶಿಸಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಶೇ.21, ಉತ್ತರ ಒಳನಾಡಿನಲ್ಲಿ ಶೇ.19 ಹಾಗೂ ಅತಿಹೆಚ್ಚು ಮಳೆಯಾಗುತ್ತಿದ್ದ ಮಲೆನಾಡಿನಲ್ಲಿ ಶೇ.32 ಮತ್ತು ಕರಾವಳಿ ಭಾಗದಲ್ಲಿ ಶೇ.13ರಷ್ಟು ಮಳೆ ಕೊರತೆ ಕಂಡುಬಂದಿದೆ ಎಂದು ಕರ್ನಾಟಕ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎಸ್.ಶ್ರೀನಿವಾಸ್ ರೆಡ್ಡಿ ತಿಳಿಸಿದರು.
ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಇಳಿಮುಖವಾಗುತ್ತಿದೆ. ಉತ್ತರ ಒಳನಾಡಿನಲ್ಲಿ ಅಲ್ಲಲ್ಲಿ ಚದುರಿದಂತೆ ಮಳೆಯಾಗುತ್ತಿದೆ. ಬಹಳಷ್ಟು ಕಡೆಗಳಲ್ಲಿ ಬಿತ್ತನೆಗೆ ಹಿನ್ನಡೆಯಾಗಿದೆ. ನಿರೀಕ್ಷಿತ ಪ್ರಮಾಣದಲ್ಲಿ ಬೆಳೆಯಾಗುತ್ತಿಲ್ಲ. ಕಾವೇರಿ ಜಲಾನಯನ ಭಾಗದ ಜಲಾಶಯಗಳಿಗೂ ನಿರೀಕ್ಷಿತ ಪ್ರಮಾಣದಲ್ಲಿ ಒಳಹರಿವಿಲ್ಲ. ಹೀಗಾಗಿ ರಾಜ್ಯವನ್ನು ನೀರಿನ ಸಂಕಷ್ಟ ಕಾಡುತ್ತಿದೆ ಎಂದು ಅವರು ತಿಳಿಸಿದರು.