ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಇಳಿಕೆ

ನವದೆಹಲಿ, ಆ.1– ಸಬ್ಸಿಡಿ ರಹಿತ ಎಲ್‍ಪಿಜಿ ಸಿಲಿಂಡರ್ ಬಳಕೆದಾರರಿಗೆ ಕೇಂದ್ರ ಸರ್ಕಾರ ಸಿಹಿ ಸುದ್ದಿ ನೀಡಿದೆ.

ಎಲ್‍ಪಿಜಿ ಬೆಲೆ ಇಳಿಕೆ ಹಾಗೂ ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ತುಸು ಏರಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಸಬ್ಸಿಡಿ ರಹಿತ ಎಲ್‍ಪಿಜಿ ಬೆಲೆಯನ್ನು 62.50 ರೂ.ಗಳಿಗೆ ಇಳಿಕೆ ಮಾಡಿದೆ.

ಇದರೊಂದಿಗೆ 14.2 ಕೆ.ಜಿ. ತೂಕದ ಅಡುಗೆ ಅನಿಲ ಸಿಲಿಂಡರ್ ಬೆಲೆ ಹಿಂದಿನ 637 ರೂ.ಗಳಿಂದ 574.50 ರೂ.ಗಳಿಗೆ ಇಳಿಕೆಯಾಗಿದೆ. ಹೊಸ ದರ ಇಂದಿನಿಂದಲೇ ಅನ್ವಯವಾಗುವಂತೆ ಜಾರಿಗೆ ಬರಲಿದೆ ಎಂದು ಇಂಡಿಯನ್ ಆಯಿಲ್ ಕಂಪೆನಿ ಐಒಸಿ ಹೇಳಿಕೆಯನ್ನು ಉಲ್ಲೇಖಿಸಿ ಪೆಟ್ರೋಲಿಯಂ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಕೇಂದ್ರ ಸರ್ಕಾರದ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಈ ದರ ಇಳಿಕೆಯನ್ನು ಅಧಿಕೃತವಾಗಿ ಪ್ರಕಟಿಸಿದೆ.

ಜು.1ರಂದು ಕೇಂದ್ರ ಸರ್ಕಾರ ಎಲ್‍ಪಿಜಿ ಸಿಲಿಂಡರ್ ಬೆಲೆಯನ್ನು 100.50 ರೂ.ಗಳಷ್ಟು ಕಡಿಮೆ ಮಾಡಿತ್ತು.

ಅದಾದ ಒಂದು ತಿಂಗಳಿಗೆ ಸರಿಯಾಗಿ ಅಂದರೆ ಆ.1ರಂದು ಎಲ್‍ಪಿಜಿ ಬೆಲೆಯಲ್ಲಿ ಮತ್ತೆ 62.50ಪೈಸೆಯಷ್ಟು ಇಳಿಕೆ ಮಾಡಲಾಗಿದೆ.

ಬೆಲೆ ಇಳಿಕೆಯಿಂದಾಗಿ ಎಲ್‍ಪಿಜಿ ಸಬ್ಸಿಡಿ ಸಹಿತ ಬೆಲೆ ಪ್ರಸ್ತುತ 494.35 ರೂ.ಗಳಿಗೆ ಇಳಿಕೆಯಾಗಿದೆ.

ಕಳೆದ ಒಂದು ತಿಂಗಳಿನಿಂದ ಎಲ್‍ಪಿಜಿ ದರದಲ್ಲಿ ಇಳಿಕೆಯಾಗಿರುವುದು ಗ್ರಾಹಕರಲ್ಲಿ ಸಮಾಧಾನ ಮೂಡಿಸಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ