ಉತ್ತರ ಕೊರಿಯಾದಿಂದ ಕ್ಷಿಪಣಿಗಳ ಉಡಾವಣೆ ಪರೀಕ್ಷೆ ಹಿನ್ನಲೆ- ಯುಎನ್‍ಎಸ್‍ಸಿ ಸಭೆಯಲ್ಲಿ ಮುಂದಿನ ನಿರ್ಧಾರ

ಸಿಲೋನ್/ ವಿಶ್ವಸಂಸ್ಥೆ, ಆ.1– ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ನಿಷೇಧಕ್ಕೂ ಜಗ್ಗದ ಹಠಮಾರಿ ಉತ್ತರ ಕೊರಿಯಾ ವಾರದಲ್ಲಿ ಎರಡು ಬಾರಿ ಮಾರಕ ಕ್ಷಿಪಣಿಗಳ ಉಡಾವಣೆ ಪರೀಕ್ಷೆ ನಡೆಸಿ ಆತಂಕ ಸೃಷ್ಟಿಸಿರುವ ಬೆನ್ನಲ್ಲೇ ಈ ದೇಶದ ವಿರುದ್ಧ ಸಂಯುಕ್ತ ರಾಷ್ಟ್ರಗಳು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಮಹತ್ವದ ಸಭೆ ಇಂದು ಸಂಜೆ ನಡೆಯಲಿದ್ದು, ಹಠಮಾರಿ ಉತ್ತರಕೊರಿಯಾ ವಿರುದ್ಧ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್ ಮತ್ತು ಜರ್ಮನಿ ಸೇರಿದಂತೆ ಕೆಲ ರಾಷ್ಟ್ರಗಳು ಕೊರಿಯಾ ಒಡ್ಡಿರುವ ಕ್ಷಿಪಣಿ ಆತಂಕವನ್ನು ಗಂಭೀರವಾಗಿ ಪರಿಗಣಿಸಿ ಭದ್ರತಾ ಮಂಡಳಿ ಸಭೆ ನಡೆಸಲು ಆಗ್ರಹಿಸಿವೆ. ಈ ಹಿನ್ನೆಲೆಯಲ್ಲಿ ಯುಎನ್‍ಎಸ್‍ಸಿ ಸಭೆ ನಡೆಯಲಿದ್ದು ಮುಂದಿನ ನಿರ್ಧಾರ ಕುತೂಹಲ ಕೆರಳಿಸಿದೆ.

ಕೊರಿಯಾ ದ್ವೀಪಕಲ್ಪದಲ್ಲಿ ದಕ್ಷಿಣ ಕೊರಿಯಾ ಮತ್ತು ಅಮೆರಿಕಾ ಉದ್ದೇಶಿತ ಜಂಟಿ ಸಮಾರಾಭ್ಯಸಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಉತ್ತರ ಕೊರಿಯಾ. ಈ ಪ್ರಕ್ರಿಯೆ ವಿರುದ್ಧ ಎಚ್ಚರಿಕೆ ನೀಡಲು ನಿನ್ನೆ ಇನ್ನೆರಡು ಕ್ಷಿಪಣಿಗಳನ್ನು ಉಡಾಯಿಸಿತ್ತು.

ಕೊರಿಯಾ ಪರ್ಯಾಯ ದ್ವೀಪದ ಪೂರ್ವ ಕರಾವಳಿ ಓನ್‍ಸ್ಯಾನ್ ಪ್ರದೇಶದಲ್ಲಿ ನಿನ್ನೆ ಬೆಳಕು ಹರಿಯುವ ಮುನ್ನವೇ ಉತ್ತರ ಕೊರಿಯಾ 250ಕಿ.ಮೀ ದೂರ ಚಿಮ್ಮಬಲ್ಲ ಎರಡು ಖಂಡಾಂತರ ಕ್ಷಿಪಣಿಗಳ ಉಡಾವಣೆ ನಡೆಸಿತ್ತು.

ಉತ್ತರ ಕೊರಿಯಾದ ಈ ಮೊಂಡುತನದಿಂದ ಆತಂಕದಿಂದ ದಕ್ಷಿಣ ಕೊರಿಯಾದ ಸೇನಾ ಮುಖ್ಯಸ್ಥರು ಇಂತಹ ಅಪಾಯಕಾರಿ ಕ್ಷಿಪಣಿ ಉಡಾವಣೆ ಪ್ರಯೋಗವನ್ನು ನಿಲ್ಲಿಸುವಂತೆ ಪಯೋಂಗ್‍ಯಾಂಗ್‍ನನ್ನು ಆಗ್ರಹಿಸಿದ್ದಾರೆ.

ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್‍ಜಾಂಗ್‍ವುನ್ ಮತ್ತು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡುವೆ ಇತ್ತೀಚೆಗೆ ನಡೆದ ಅಣ್ವಸ್ತ್ರ ನಿಷೇಧ ಮಾತುಕತೆ ನಂತರ ಕೊರಿಯಾ ಪ್ರಯೋಗಿಸಿದ ಎರಡನೇ ಕ್ಷಿಪಣಿ ಉಡಾವಣೆ ಇದಾಗಿದೆ.

ಕಳೆದ ವಾರ ಕೂಡ ಉತ್ತರ ಕೊರಿಯಾ ಕ್ಷಿಪಣಿಯನ್ನು ಸಮುದ್ರಕ್ಕೆ ಉಡಾಯಿಸುವ ಮೂಲಕ ದಕ್ಷಿಣ ಕೊರಿಯಾ-ಅಮೆರಿಕಾ ನಡುವಣ ಉದ್ದೇಶಿತ ಜಂಟಿ ಯುದ್ಧ ತಾಲೀಮು ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ