ಬೆಂಗಳೂರಿನಲ್ಲಿ ನಡೆದ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಸಭೆ

ಬೆಂಗಳೂರು, ಆ.1- ಕಾವೇರಿ ನದಿನೀರು ಹಂಚಿಕೆ ಸಂಬಂಧ ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ಸಭೆ ಬೆಂಗಳೂರಿನಲ್ಲಿ 2ನೇ ಬಾರಿಗೆ ನಡೆಯಿತು.

ವಿಶ್ವೇಶ್ವರಯ್ಯ ಜಲನಿಗಮದ ಕಚೇರಿಯಲ್ಲಿ ಸಮಿತಿಯ ಅಧ್ಯಕ್ಷ ಹಾಗೂ ಕೇಂದ್ರ ಜಲ ಆಯೋಗದ ಮುಖ್ಯ ಇಂಜಿನಿಯರ್ ನವೀನ್‍ಕುಮಾರ್ ನೇತೃತ್ವದಲ್ಲಿ ಸಭೆ ನಡೆದಿದ್ದು, ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಪುದುಚೇರಿ ರಾಜ್ಯಗಳ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಭೆಯಲ್ಲಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಸಮಾಲೋಚನೆ ನಡೆಸಲಾಗಿದೆ.

ಕಾವೇರಿ ಜಲಾನಯನ ಭಾಗದಲ್ಲಿ ಬಿದ್ದಿರುವ ಮಳೆ ಪ್ರಮಾಣ, ನಾಲ್ಕು ರಾಜ್ಯಗಳ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರಿನ ಪ್ರಮಾಣ, ಕುಡಿಯುವ ನೀರು, ಬೆಳೆಗೆ ಬೇಕಾಗಿರುವ ನೀರು, ಜಲಾಶಯಗಳ ಒಳ ಮತ್ತು ಹೊರ ಹರಿವಿನ ಪ್ರಮಾಣದ ಬಗ್ಗೆ ಮಾಹಿತಿ ಪಡೆದು ಚರ್ಚೆ ನಡೆಸಲಾಗಿದೆ.

ವಾಡಿಕೆಗಿಂತ ಕಡಿಮೆ ಪ್ರಮಾಣದ ನೀರು ಜಲಾಶಯಗಳಲ್ಲಿ ಸಂಗ್ರಹವಾಗಿರುವ ಹಿನ್ನೆಲೆಯಲ್ಲಿ ಮುಂದೆ ಯಾವ ರೀತಿ ನೀರು ಹಂಚಿಕೆಯಾಗಬೇಕು ಎಂಬ ಬಗ್ಗೆ ಸಮಾಲೋಚನೆ ನಡೆಸಲಾಗಿದೆ. ಕರ್ನಾಟಕದಿಂದ ತಮಿಳುನಾಡಿಗೆ ಈಗಾಗಲೇ ಹರಿಸಿರುವ ನೀರಿನ ಬಗ್ಗೆಯೂ ಮಾಹಿತಿಯನ್ನು ಸಭೆಗೆ ಒದಗಿಸಲಾಗಿದೆ. ಈಗಾಗಲೇ ಸಮಿತಿಯ 11 ಸಭೆಗಳು ನಡೆದಿವೆ ಎಂದು ಮೂಲಗಳು ತಿಳಿಸಿವೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ