ಬೆಂಗಳೂರು, ಆ.1- ಕಾಂಗ್ರೆಸ್ ಮತ್ತು ಜೆಡಿಎಸ್ನ 17 ಮಂದಿ ಶಾಸಕರ ಅನರ್ಹತೆಯಿಂದ ತೆರವಾಗಿರುವ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧಪಟ್ಟಂತೆ ಇಂದು ಕಾಂಗ್ರೆಸ್ ನಾಯಕರು ಮಹತ್ವದ ಸಭೆ ನಡೆಸಿದರು.
ಶತಾಯ ಗತಾಯ ಈ 17 ಕ್ಷೇತ್ರಗಳಲ್ಲೂ ಮತ್ತೆ ಗೆಲ್ಲಲೇಬೇಕೆಂದು ಹಠಕ್ಕೆ ಬಿದ್ದಿರುವ ಕಾಂಗ್ರೆಸ್ ತೀವ್ರ ರೀತಿಯ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ.
ಈ 17 ಕ್ಷೇತ್ರಗಳಲ್ಲೂ ಪ್ರಾಥಮಿಕ ಅಧ್ಯಯನ ನಡೆಸಿ ಕ್ಷೇತ್ರದ ಸ್ಥಿತಿಗತಿಯನ್ನು ಅರ್ಥ ಮಾಡಿಕೊಳ್ಳುವುದು, ಅನಂತರ ಪ್ರತೀ ಕ್ಷೇತ್ರಕ್ಕೂ ನಾಲ್ಕು ಮಂದಿ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸುವುದು, ಕ್ಷೇತ್ರಗಳ ಪ್ರಮುಖ ನಾಯಕರ ಜತೆ ಸಭೆ ನಡೆಸಿ ಅಂತಿಮವಾಗಿ ಗೆಲ್ಲುವ ನಾಯಕನಿಗೆ ಟಿಕೆಟ್ ನೀಡುವುದು ಕಾಂಗ್ರೆಸ್ನ ಚಿಂತನೆಯಾಗಿದೆ.
ಮುಂದಿನ ಉಪ ಚುನಾವಣೆಯಲ್ಲಿ ಜೆಡಿಎಸ್ ಜತೆ ಮೈತ್ರಿಗೆ ಕಾಂಗ್ರೆಸ್ ನಿರಾಸಕ್ತಿ ಹೊಂದಿದೆ. ಹೀಗಾಗಿ ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧರಿಸಿದೆ.
ಜೆಡಿಎಸ್ ನಾಯಕರು ಬಯಸಿದ್ದೇ ಆದರೆ ಪರಸ್ಪರ ಹೊಂದಾಣಿಕೆಯ ಸ್ಪರ್ಧೆಗೂ ಕಾಂಗ್ರೆಸ್ ಮುಕ್ತ ಮನಸ್ಸು ಹೊಂದಿದೆ. ಒಂದು ವೇಳೆ ಜೆಡಿಎಸ್ ಕೂಡ ಸ್ವಂತ ಬಲದ ಮೇಲೆ ಚುನಾವಣೆ ನಡೆಸುವುದೇ ಆದರೆ ತ್ರಿಕೋನ ಸ್ಪರ್ಧೆ ಏರ್ಪಡಲಿದ್ದು, ಎಲ್ಲಾ ಪರಿಸ್ಥಿತಿಗೂ ತಕ್ಕಂತೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಕಾಂಗ್ರೆಸ್ ನಾಯಕರು ಚಿಂತನೆ ನಡೆಸಿದ್ದಾರೆ.
ಈಗಾಗಲೇ ಕೆಲವರ ಹೆಸರು ಮಾಧ್ಯಮಗಳಲ್ಲಿ ಕೇಳಿ ಬಂದಿದ್ದು, ಅವುಗಳಲ್ಲಿ ಹುರುಳಿಲ್ಲ ಎಂಬ ಸ್ಪಷ್ಟನೆಗಳು ಸಿಕ್ಕಿವೆ. ಈ ಬಾರಿಯ ಚುನಾವಣೆಯಲ್ಲಿ ಗೆಲ್ಲಲೇಬೇಕಿದ್ದು, ಅದೇ ಸಮಯಕ್ಕೆ ಪಕ್ಷದ ತತ್ವ ಸಿದ್ದಾಂತಗಳನ್ನು ಪಾಲಿಸುವವರನ್ನು ಗುರುತಿಸುವ ಬಗ್ಗೆಯೂ ಚರ್ಚೆಗಳು ನಡೆದಿವೆ.
ಈ ಹಿಂದೆ ಸರ್ಕಾರ ರಚಿಸಬೇಕು ಎಂಬ ಕಾರಣಕ್ಕೆ ಗೆಲ್ಲುವ ಅಭ್ಯರ್ಥಿಗಳಿಗೆ ಮಣೆ ಹಾಕಲಾಗಿತ್ತು. ಅದರಲ್ಲಿ ತತ್ವ ಸಿದ್ಧಾಂತಗಳನ್ನು ಮೀರಿ ವ್ಯಾಪರೋದ್ಯಮವನ್ನೇ ಪ್ರಮುಖವಾಗಿಟ್ಟುಕೊಂಡವರಿಗೆ ಅವಕಾಶ ನೀಡಲಾಗಿತ್ತು. ಅದರ ಪರಿಣಾಮ ಇತ್ತೀಚೆಗೆ ಸಮ್ಮಿಶ್ರ ಸರ್ಕಾರ ಪತನಗೊಳ್ಳುವ ಹಂತದಲ್ಲಿ 17 ಮಂದಿ ಶಾಸಕರ ನಡವಳಿಕೆಗಳು ಪಕ್ಷಕ್ಕೆ ತೀವ್ರ ಮುಜುಗರ ಉಂಟು ಮಾಡಿದೆ. ಇನ್ನು ಮುಂದಾದರೂ ಈ ರೀತಿಯ ಅವಘಡಗಳು ನಡೆಯದಂತೆ ಎಚ್ಚೆತ್ತುಕೊಳ್ಳಲು ಕಾಂಗ್ರೆಸ್ ನಿರ್ಧರಿಸಿದೆ.
ಇಂದು ನಡೆದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ಗುಂಡೂರಾವ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮುಖಂಡರಾದ ಎಚ್.ಕೆ.ಪಾಟೀಲ್, ಯು.ಟಿ.ಖಾದರ್, ರಮೇಶ್ಕುಮಾರ್, ಶಿವಾನಂದಪಾಟೀಲ್, ಎಚ್.ಸಿ.ಮಹದೇವಪ್ಪ, ಆರ್.ವಿ.ದೇಶಪಾಂಡೆ, ಕೃಷ್ಣಬೈರೇಗೌಡ, ತುಕರಾಂ, ಎಂ.ಕೃಷ್ಣಪ್ಪ, ಚೆಲುವರಾಯಸ್ವಾಮಿ, ರಾಮಲಿಂಗಾರೆಡ್ಡಿ, ಮಾಜಿ ಸಂಸದರಾದ ವೀರಪ್ಪಮೊಯ್ಲಿ, ಕೆ.ಎಚ್.ಮುನಿಯಪ್ಪ, ರೆಹಮಾನ್ಖಾನ್, ಸಿ.ಎಂ.ಇಬ್ರಾಹಿಂ ಮತ್ತಿತರರು ಸಭೆಯಲ್ಲಿ ಭಾಗವಹಿಸಿದ್ದರು.