ಸಿಎಂ ಯಡಿಯೂರಪ್ಪನವರಿಂದ ಅಧಿಕಾರಿಗಳ ಜೊತೆ ಮಹತ್ವದ ಸಭೆ

ಬೆಂಗಳೂರು, ಆ.1- ರೈತರ ಸಾಲ ಮನ್ನಾ, ವಸತಿ ಇಲಾಖೆ ಯೋಜನೆಯಡಿ ಕೈಗೊಂಡಿರುವ ಯೋಜನೆಗಳು, ರಾಜ್ಯದ ಆರ್ಥಿಕ ಪರಿಸ್ಥಿತಿ, ಋಣಮುಕ್ತ ಕಾಯ್ದೆ ಪರಿಣಾಮಕಾರಿ ಅನುಷ್ಠಾನ ಸೇರಿದಂತೆ ಕೆಲವು ಮಹತ್ವದ ವಿಷಯಗಳ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದು ಅಧಿಕಾರಿಗಳ ಜತೆ ಸಭೆ ನಡೆಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ನಡೆದ ಸಭೆಯಲ್ಲಿ ಹಣಕಾಸು ಹಾಗೂ ವಸತಿ ಇಲಾಖೆಯ ಅಧಿಕಾರಿಗಳ ಜತೆ ಸಭೆ ನಡೆಸಿ ಆರ್ಥಿಕ ಪರಿಸ್ಥಿತಿ, ರೈತರ ಸಾಲ ಮನ್ನಾ ಯೋಜನೆ, ವಸತಿ ಇಲಾಖೆಯಿಂದ ಕೈಗೊಂಡಿರುವ ಯೋಜನೆಗಳ ಬಗ್ಗೆ ಹಿರಿಯ ಅಧಿಕಾರಿಗಳಾದ ಐ.ಎನ್.ಎಸ್.ಪ್ರಸಾದ್, ಏಕ್‍ರೂಪ್‍ಕೌರ್, ಮುಖ್ಯಮಂತ್ರಿಗಳ ಸಲಹೆಗಾರ ಲಕ್ಷ್ಮೀನಾರಾಯಣ ಸೇರಿದಂತೆ ಮತ್ತಿತರ ಅಧಿಕಾರಿಗಳ ಜತೆ ಚರ್ಚೆ ನಡೆಸಿದರು.

ಮೊದಲು ಆರ್ಥಿಕ ಇಲಾಖೆ ಅಧಿಕಾರಿಗಳ ಜತೆ ಸಭೆ ನಡೆಸಿದ ಸಿಎಂ, ಹಿಂದಿನ ಕಾಂಗ್ರೆಸ್-ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ ಘೋಷಣೆ ಮಾಡಿದ್ದ ಸಾಲ ಮನ್ನಾ ಯೋಜನೆಯಲ್ಲಿ ಎಷ್ಟು ಹಣವನ್ನು ಬಿಡುಗಡೆ ಮಾಡಲಾಗಿದೆ, ಫಲಾನುಭವಿಗಳಿಗೆ ಪರಿಣಾಮಕಾರಿಯಾಗಿ ತಲುಪಿದೆಯೇ ಹಾಗೂ ಬಾಕಿ ಇರುವ ಸಾಲದ ಮೊತ್ತದ ಬಗ್ಗೆ ಮಾಹಿತಿ ಪಡೆದರು.

ಸಹಕಾರಿ ಹಾಗೂ ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರು ಪಡೆದಿರುವ 45 ಸಾವಿರ ಕೋಟಿ ಸಾಲ ಮನ್ನಾ ಮಾಡಿರುವುದಾಗಿ ಕುಮಾರಸ್ವಾಮಿ ಘೋಷಣೆ ಮಾಡಿದ್ದರು. ಇದರಲ್ಲಿ ಸರಿಸುಮಾರು 18 ಸಾವಿರ ಕೋಟಿ ಸಾಲ ಮನ್ನವಾಗಿದ್ದು, 25ರಿಂದ 26 ಸಾವಿರ ಕೋಟಿಯಷ್ಟು ಸಾಲ ಮನ್ನ ಬಾಕಿ ಇದೆ. ಹಿಂದಿನ ರೈತರ ಸಾಲ ಮನ್ನಾ ಯೋಜನೆಯಲ್ಲಿ ಕೆಲವು ಲೋಪದೋಷಗಳು ಕಂಡು ಬಂದಿದ್ದು, ಇದನ್ನು ಸರಿಪಡಿಸಲು ಅಧಿಕಾರಿಗಳಿಗೆ ಯಡಿಯೂರಪ್ಪ ಸೂಚನೆ ಕೊಟ್ಟಿದ್ದಾರೆ.

ಸಾಲಮನ್ನಾ ಯೋಜನೆಯಿಂದಾಗಿ ವಿವಿಧ ಇಲಾಖೆಗಳಿಗೆ ಮೀಸಲಿಟ್ಟಿದ್ದ ಅನುದಾನವು ಕಡಿತವಾಗಿದೆ. ಅಲ್ಲದೆ ಆರ್ಥಿಕ ಪರಿಸ್ಥಿತಿ ಕೂಡ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ದಲ್ಲಾಳಿಗಳ ಕಡಿವಾಣಕ್ಕೆ ನೋಡೆಲ್ ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುವಂತೆ ಸೂಚನೆ ಕೊಟ್ಟರು.

ಸಾಲ ಮನ್ನಾಕ್ಕೆ ಬಜೆಟ್‍ನಲ್ಲಿ ಎಷ್ಟು ಹಣವನ್ನು ಮೀಸಲಿಡಲಾಗಿತ್ತು. ಪ್ರತಿ ತಿಂಗಳು ಸಹಕಾರ ಬ್ಯಾಂಕುಗಳಿಗೆ ಸರ್ಕಾರದ ವತಿಯಿಂದ ನೀಡುತ್ತಿದ್ದ ಹಣ ಸೇರಿದಂತೆ ಸಂಪನ್ಮೂಲಗಳ ಕ್ರೂಢೀಕರಣಕ್ಕೆ ಒತ್ತು ಕೊಡಬೇಕೆಂದು ಸೂಚಿಸಿದ್ದಾರೆ.

ಹಿಂದಿನ ಕೆಲವು ಯೋಜನೆಗಳಿಗೆ ಮೀಸಲಿಟ್ಟ ಅನುದಾನದ ಬಗ್ಗೆಯೂ ಮಾಹಿತಿ ಪಡೆದಿರುವ ಮುಖ್ಯಮಂತ್ರಿಯವರು, ಕೆಲವು ಇಲಾಖೆಗಳಿಗೆ ಸಮರ್ಪಕವಾಗಿ ಅನುದಾನ ಸಿಗುತ್ತಿರಲಿಲ್ಲ ಎಂಬ ಅಸಮಾಧಾನವಿದೆ.ಬಜೆಟ್‍ನಲ್ಲಿ ಘೋಷಣೆ ಮಾಡಿರುವ ಕಾರ್ಯಕ್ರಮಗಳು ಹಾಗೂ ಅನುಷ್ಠಾನಕ್ಕೆ ಎದುರಾಗಿರುವ ತೊಡಕುಗಳನ್ನು ನಿವಾರಣೆ ಮಾಡಬೇಕು. ಯಾವ ಯಾವ ಕಾರ್ಯಕ್ರಮಗಳಿಗೆ ಹಣದ ಸಮಸ್ಯೆಗಳಿವೆಯೂ ಅಂತಹದ್ದನ್ನು ಪಟ್ಟಿ ಮಾಡಿ ನನಗೆ ನೀಡಬೇಕು. ಆದ್ಯತೆ ಮೇರೆಗೆ ಹಣವನ್ನು ಒದಗಿಸಲಾಗುವುದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯಕ್ರಮಗಳನ್ನು ರೂಪಿಸಬೇಕೆಂದು ತಾಕೀತು ಮಾಡಿದರು.

ಕುಮಾರಸ್ವಾಮಿ ಅವರು ಅಧಿಕಾರದಿಂದ ಇಳಿಯುವ ಮುನ್ನ ಋಣಮುಕ್ತ ಕಾಯ್ದೆಯನ್ನು ಜಾರಿಮಾಡಿದ್ದಾರೆ. ಇದು ಏಕಪಕ್ಷೀಯ ನಿರ್ಧಾರವಾಗಿದ್ದು, ಇದನ್ನು ತಕ್ಷಣವೇ ಸರಿಪಡಿಸಬೇಕು. ನೋಡೆಲ್ ಅಧಿಕಾರಿಗಳ ಕೆಲಸವೇನೆಂಬುದೇ ಸರಿಯಾಗಿ ತಿಳಿಸಿಲ್ಲ. ಸಾರ್ವಜನಿಕರಿಗೆ ಯಾವ ರೀತಿ ತಿಳುವಳಿಕೆ ನೀಡಬೇಕು ಎಂಬುದರ ಬಗ್ಗೆಯೂ ಸೂಚಿಸಿಲ್ಲ. ಕಾಯ್ದೆಯಲ್ಲಿ ಸಾಕಷ್ಟು ಲೋಪದೋಷಗಳಿದ್ದು, ಕೂಡಲೇ ಅವುಗಳನ್ನು ಸರಿಪಡಿಸಬೇಕು. ಖಾಸಗಿ ಲೇವಾದೇವಿದಾರರು ಸಾರ್ವಜನಿಕರಿಗೆ ಕಿರುಕುಳ ನೀಡದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕು. ರೈತರಿಗೆ ತೊಂದರೆ ನೀಡದಂತೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ.

ಇನ್ನು ವಸತಿ ಇಲಾಖೆಯಲ್ಲಿ ಅನುದಾನ ಬಿಡುಗಡೆ ಮಾಡದಿರುವ ಕಾರಣ ಅನೇಕ ಕಡೆ ಮನೆಗಳ ನಿರ್ಮಾಣವನ್ನು ಅರ್ಧಕ್ಕೆ ನಿಲ್ಲಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಹಿಂದಿನ ಸರ್ಕಾರಗಳು ಯಾವ ರೀತಿ ಕೆಲಸ ನಿರ್ವಹಿಸಿದೆ ಎಂಬುದು ಮುಖ್ಯವಲ್ಲ. ನನ್ನ ಅಧಿಕಾರಾವಧಿಯಲ್ಲಿ ಎಲ್ಲಾ ಇಲಾಖೆಗಳಿಗೂ ಸಮಾನವಾಗಿ ಅನುದಾನ ನೀಡುತ್ತೇನೆ. ಇದನ್ನು ಕಾಲ ಮಿತಿಯೊಳಗೆ ಖರ್ಚು ಮಾಡಬೇಕು. ಯಾವ ಯಾವ ಭಾಗದಲ್ಲಿ ತುರ್ತಾಗಿ ಮನೆಗಳನ್ನು ನಿರ್ಮಿಸಬೇಕೋ ಅಂತಹ ಕಡೆ ಆದ್ಯತೆ ನೀಡಬೇಕು. ಅರ್ಧಕ್ಕೆ ನಿಂತಿರುವ ಮನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಸಂಬಂಧಪಟ್ಟವರಿಗೆ ಸೂಚನೆ ಕೊಡಿ. ಅನುದಾನವನ್ನು ಲಭ್ಯತೆ ಆಧಾರದ ಮೇಲೆ ಬಿಡುಗಡೆ ಮಾಡಬೇಕು. ಯಾವುದೇ ಕಾರಣಕ್ಕೂ ಫಲಾನುಭವಿಗಳು ವಂಚಿತರಾಗದಂತೆ ನೋಡಿಕೊಳ್ಳಿ ಎಂದು ಸೂಚಿಸಿದ್ದಾರೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ