ಬೆಂಗಳೂರು, ಆ.1- ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ಸಚಿವ ಸಂಪುಟ ಆಗಸ್ಟ್ 9 ಇಲ್ಲವೇ 11 ರಂದು ವಿಸ್ತರಣೆಯಾಗಲಿದೆ. ಸಚಿವ ಸಂಪುಟ ವಿಸ್ತರಣೆ ಸಂಬಂಧ ಸಿಎಂ ಯಡಿಯೂರಪ್ಪ ಮತ್ತಿತರ ನಾಯಕರು ಆ.5ರಂದು ದೆಹಲಿಗೆ ತೆರಳಲಿದ್ದು, ವರಿಷ್ಠರೊಂದಿಗೆ ಚರ್ಚಿಸಿದ ನಂತರ ಮೊದಲ ಕಂತಿನ ಸಂಪುಟ ವಿಸ್ತರಣೆ ನಡೆಯಲಿದೆ.
ಮೊದಲ ಕಂತಿನಲ್ಲಿ ಹತ್ತು ಮಂದಿಯನ್ನು ಸೇರ್ಪಡೆ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು, ರಾಜೀನಾಮೆ ನೀಡಿ ಅನರ್ಹಗೊಂಡಿರುವ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಇತ್ಯರ್ಥವಾದರೆ ಮೊದಲ ಕಂತಿನಲ್ಲಿ ಇಪ್ಪತ್ತು ಮಂದಿ ಸಚಿವರಾಗಲಿದ್ದಾರೆ.
ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದವರನ್ನು ಸೇರಿಸಿಕೊಳ್ಳಬೇಕು ಎಂದು ಯಡಿಯೂರಪ್ಪ ಪಟ್ಟು ಹಿಡಿದಿದ್ದು ಈ ಹಿನ್ನೆಲೆಯಲ್ಲಿ ಇಂದು ದೆಹಲಿಗೆ ಹೋಗುವ ಪೂರ್ವ ನಿಯೋಜಿತ ಕಾರ್ಯಕ್ರಮವನ್ನು ರದ್ದುಪಡಿಸಿದ್ದಾರೆ.
ಹೈಕಮಾಂಡ್ಗೂ ಈ ಕುರಿತು ಅಧಿಕೃತ ಸಂದೇಶ ರವಾನೆ:
ರಾಜೀನಾಮೆ ನೀಡಿ ಅನರ್ಹತೆಯ ಶಿಕ್ಷೆಗೊಳಗಾಗಿರುವ ಶಾಸಕರನ್ನು ಕೈ ಬಿಟ್ಟು ಮಂತ್ರಿ ಮಂಡಲ ವಿಸ್ತರಣೆ ಮಾಡಿದರೆ ನಾವೂ ವಚನ ಭ್ರಷ್ಟತೆಯ ಆರೋಪ ಹೊರಬೇಕಾಗುತ್ತದೆ ಎಂದು ಹೇಳಿದ್ದಾರೆ.
ಅನರ್ಹಗೊಂಡಿರುವ ಶಾಸಕರ ಬಗ್ಗೆ ಯಾರೇನೇ ಹೇಳಿದರೂ ಅವರನ್ನು ಕೈ ಬಿಟ್ಟು ಸಚಿವ ಸಂಪುಟ ವಿಸ್ತರಿಸಿದರೆ ಬಿಜೆಪಿಯನ್ನು ಯಾರೂ ನಂಬುವುದಿಲ್ಲ.ಇದು ರಾಜ್ಯ ರಾಜಕಾರಣದಲ್ಲಿ ಮಾತ್ರವಲ್ಲ, ರಾಷ್ಟ್ರ ರಾಜಕಾರಣಕ್ಕೂ ಅನ್ವಯವಾಗುತ್ತದೆ ಎಂಬುದು ಯಡಿಯೂರಪ್ಪನವರ ವಾದ.
ಈ ಹಿನ್ನೆಲೆಯಲ್ಲಿಯೇ ನಾಳೆ ಇಲ್ಲವೇ ಆ.5 ರ ಸೋಮವಾರ ಸಚಿವ ಸಂಪುಟ ವಿಸ್ತರಿಸಲು ಹಾಕಿದ್ದ ಲೆಕ್ಕಾಚಾರವನ್ನು ಮುಂದೂಡಲು ಹೈಕಮಾಂಡ್ ಒಪ್ಪಿಗೆ ಸೂಚಿಸಿದ್ದು ಆ.6ರಂದು ಸಂಸತ್ ಅಧಿವೇಶನ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ಆ.5ರಂದೇ ದೆಹಲಿಗೆ ಬನ್ನಿ ಎಂದು ಸೂಚಿಸಿದೆ.
ವರಿಷ್ಠರ ಸೂಚನೆಯ ಹಿನ್ನೆಲೆಯಲ್ಲಿ ಆ.5ರಂದು ನವದೆಹಲಿಗೆ ತೆರಳಲಿರುವ ಯಡಿಯೂರಪ್ಪ ಅನರ್ಹ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ತ್ವರಿತವಾಗಿ ಇತ್ಯರ್ಥವಾಗಲಿದೆ ಎಂದು ನಂಬಿದ್ದಾರೆ.
ಶಾಸಕರನ್ನುಅನರ್ಹಗೊಳಿಸಿದ ಸ್ಪೀಕರ್ ಕ್ರಮದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ತ್ವರಿತವಾಗಿ ಯಾವುದೇ ನಿರ್ಧಾರ ಕೈಗೊಳ್ಳದೆ ಹೋದರೆ ಕೇವಲ ಹತ್ತು ಮಂದಿಯನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಸಂಘ ಪರಿವಾರದ ನಾಯಕರು ವರಿಷ್ಠರಿಗೆ ಹೇಳಿದ್ದಾರೆ.
ಬಿಜೆಪಿ ಅಧಿಕಾರಕ್ಕೆ ಬರಲು ಕಾರಣರಾದ ಶಾಸಕರನ್ನು ಕೈ ಬಿಡುವ ಅಗತ್ಯವೇ ಇಲ್ಲ. ಅದು ಒಳ್ಳೆಯದೂ ಅಲ್ಲ. ಆದರೆ ಸರ್ಕಾರ ಎಂದರೆ ಕೇವಲ ಸಿಎಂ ಎಂಬ ವಾತಾವರಣವನ್ನು ಬದಲಿಸಬೇಕು.ಜನರ ಕೆಲಸ ಮಾಡಲು ಬೇರೆಯವರಿದ್ದಾರೆ ಎಂಬ ನಂಬಿಕೆ ಬರಬೇಕು.
ಹಾಗೆ ಮಾಡದೆ ಸುಧೀರ್ಘ ಕಾಲ ಮುಖ್ಯಮಂತ್ರಿಗಳು ಮಾತ್ರವೇ ಸರ್ಕಾರವೆಂದಾದರೆ ಬಹುಬೇಗ ಅಸಮಾಧಾನ ಶುರುವಾಗುತ್ತದೆ. ಹಾಗಾಗುವುದು ಬೇಡ. ಅನರ್ಹಗೊಂಡ ಶಾಸಕರ ಪ್ರಕರಣ ಸುಪ್ರೀಂಕೋರ್ಟ್ನಲ್ಲಿ ಇತ್ಯರ್ಥವಾದ ಮರುದಿನವೇ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಿ.
ಆದರೆ ಸುಪ್ರೀಂಕೋರ್ಟ್ ಈ ವಿಷಯದಲ್ಲಿ ತ್ವರಿತ ನಿರ್ಣಯ ಕೈಗೊಳ್ಳದೆ ಹೋದರೆ ಇನ್ನಷ್ಟು ಕಾಲ ಕಾಯುತ್ತಾ ಕೂರುವುದು ಬೇಡ ಎಂದು ಸಂಘಪರಿವಾರದ ನಾಯಕರು ಹೈಕಮಾಂಡ್ ವರಿಷ್ಟರಿಗೆ ವಿವರಿಸಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಮಧ್ಯೆ ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಮಂತ್ರಿಗಿರಿಗಾಗಿ ಲಾಬಿ ತೀವ್ರವಾಗಿದ್ದು ರಾಜಧಾನಿ ಬೆಂಗಳೂರಿನಲ್ಲಿ ಪಕ್ಷದ ಯಾರ್ಯಾರಿಗೆ ಅವಕಾಶ ನೀಡಬೇಕು ಎಂಬುದು ತಲೆನೋವಾಗಿ ಪರಿಣಮಿಸಿದೆ.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಹಾಗೂ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರನ್ನು ಮಂತ್ರಿಗಳನ್ನಾಗಿ ಮಾಡಿದರೆ ಉಳಿದಂತೆ ಕಾಂಗ್ರೆಸ್ ಹಾಗೂ ಜೆಡಿಎಸ್ ತೊರೆದು ಬಂದಿರುವ ಶಾಸಕರ ಪೈಕಿ ನಾಲ್ಕು ಮಂದಿಗೆ ಮಂತ್ರಿಗಿರಿ ನೀಡಲೇಬೇಕಾಗಿದೆ.
ಆದರೆ ಪೈಪೋಟಿಯಲ್ಲಿ ಈ ಹಿಂದೆ ಸಚಿವರಾದವರ ಹೆಸರುಗಳು ಇದ್ದು ಇದೇ ರೀತಿ ವಿವಿಧ ಜಿಲ್ಲೆಗಳಲ್ಲಿ ಯಾರ್ಯಾರನ್ನು ಮಂತ್ರಿ ಮಾಡಬೇಕು ಎಂಬ ವಿಷಯದಲ್ಲಿ ತಲೆನೋವು ಶುರುವಾಗಿದೆ.
ಮೈಸೂರು ಜಿಲ್ಲೆಯ ವಿಷಯದಲ್ಲಿ ದೊಡ್ಡ ತಲೆನೋವೇನೂ ಇಲ್ಲ ಎಂದಿರುವ ಮೂಲಗಳು ಜೆಡಿಎಸ್ ತೊರೆದು ಬಂದಿರುವ ಹೆಚ್.ವಿಶ್ವನಾಥ್ ಹಾಗೂ ಕೃಷ್ಣರಾಜ ಕ್ಷೇತ್ರದ ಶಾಸಕ ಎ.ರಾಮದಾಸ್ ಅವರಿಗೆ ಮಂತ್ರಿಗಿರಿ ಲಭ್ಯವಾಗಲಿದೆ ಎಂದಿವೆ.