![bsy](http://kannada.vartamitra.com/wp-content/uploads/2019/08/bsy-676x381.jpg)
ಬೆಂಗಳೂರು, ಆ.1- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ನಾಳೆ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಸಭೆ ನಡೆಸಲಿದ್ದಾರೆ.
ಮುಖ್ಯಮಂತ್ರಿಯಾದ ನಂತರ ನಡೆಸುತ್ತಿರುವ ಮೊದಲ ಸಭೆ ಇದಾಗಿದ್ದು, ನಾಳೆ ಬೆಳಗ್ಗೆ 10 ಗಂಟೆಗೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿ ಮತ್ತು ಸಿಇಒಗಳ ಸಭೆ ನಡೆಸಲಾಗುತ್ತದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಮುಂಗಾರು ವೈಫಲ್ಯದ ಹಿನ್ನೆಲೆಯಲ್ಲಿ ಈ ಬಾರಿಯೂ ಬರದ ಛಾಯೆ ರಾಜ್ಯದಲ್ಲಿ ಆವರಿಸಿದೆ.80ಕ್ಕೂ ಹೆಚ್ಚು ತಾಲೂಕುಗಳು ಮಳೆ ಕೊರತೆ ಎದುರಿಸುತ್ತಿವೆ. ಅಲ್ಲದೆ, ಕೆಲವೆಡೆ ನೆರೆ ಹಾವಳಿಯೂ ಉಂಟಾಗಿದೆ.ಈ ಸಂದರ್ಭದಲ್ಲಿ ಜಿಲ್ಲಾಡಳಿತ ನೆರೆ ಬರ ನಿರ್ವಹಣೆಗೆ ಇದುವರೆಗೂ ಕೈಗೊಂಡಿರುವ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಮಾಹಿತಿ ಪಡೆಯಲಿದ್ದಾರೆ.
ಕುಡಿಯುವ ನೀರು, ಜಾನುವಾರುಗಳ ಮೇವು, ಬಿತ್ತನೆ ಬೀಜ, ರಸಗೊಬ್ಬರ, ಜನರು ಗುಳೆ ಹೋಗದಂತೆ ಉದ್ಯೋಗ ಸೃಷ್ಟಿ ಮೊದಲಾದ ವಿಚಾರಗಳ ಬಗ್ಗೆ ಡಿಸಿ ಮತ್ತು ಸಿಇಒಗಳಿಂದ ಜಿಲ್ಲಾವಾರು ಮಾಹಿತಿ ಪಡೆದು ಸೂಕ್ತ ನಿರ್ದೇಶನ ನೀಡಲಿದ್ದಾರೆ.
ಮುಂಗಾರು ಕೊರತೆಯಿಂದಾಗಿ ರಾಜ್ಯದಲ್ಲಿ ಬಿತ್ತನೆ ಪ್ರಮಾಣ ನಿರೀಕ್ಷಿತ ಪ್ರಮಾಣದಲ್ಲಿ ಆಗಿಲ್ಲ. ಕೃಷಿ ಚಟುವಟಿಕೆ ಕುಂಠಿತವಾಗಿದೆ. ಈ ಸಂದರ್ಭದಲ್ಲಿ ರೈತರಿಗೆ ಪರ್ಯಾಯ ಬೆಳೆಗಳ ಬಗ್ಗೆ ಮಾಹಿತಿ ನೀಡುವುದು ಸೇರಿದಂತೆ ತುರ್ತು ಕ್ರಮಗಳನ್ನು ಕೈಗೊಳ್ಳಲು ಜಿಲ್ಲಾಡಳಿತಕ್ಕೆ ಸೂಚನೆ ನೀಡುವ ಸಾಧ್ಯತೆಗಳಿವೆ.
ಮಳೆಗಾಲದಲ್ಲೂ ಕುಡಿಯುವ ನೀರಿನ ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸುವುದನ್ನು ಆಗಸ್ಟ್ ಅಂತ್ಯದವರೆಗೂ ಮುಂದುವರಿಸುವಂತೆ ಈಗಾಗಲೇ ಸರ್ಕಾರ ನಿರ್ದೇಶನ ನೀಡಿದೆ.
ಅಗತ್ಯವಿರುವ ಕಡೆಗಳಲ್ಲಿ ಗೋಶಾಲೆ ತೆರೆಯುವುದು, ತುರ್ತುಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿರುವ ಹಣ ಬಳಕೆ ಮಾಡಿಕೊಳ್ಳುವುದು, ಜನರು ಗುಳೆ ಹೋಗದಂತೆ ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಉದ್ಯೋಗ ಸೃಷ್ಟಿಸಲು ಆದ್ಯತೆ ನೀಡುವುದು ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಚರ್ಚಿಸಿ ಸಲಹೆ-ಸೂಚನೆಗಳನ್ನು ಮುಖ್ಯಮಂತ್ರಿ ನೀಡಲಿದ್ದಾರೆ.
ಡಿಸಿ ಮತ್ತು ಸಿಇಒಗಳಲ್ಲದೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ಅವರು ಸಭೆಯಲ್ಲಿ ಭಾಗವಹಿಸಲಿದ್ದಾರೆ.