ಬೆಂಗಳೂರು, ಆ.1- ನಿಗದಿತ ಸಮಯಕ್ಕೆ ಕಚೇರಿಗಳಿಗೆ ಆಗಮಿಸದ ಅಧಿಕಾರಿ ಹಾಗೂ ಸಿಬ್ಬಂದಿ ವಿರುದ್ಧ ನಿರ್ಧಾಕ್ಷಿಣ್ಯ ಶಿಸ್ತುಕ್ರಮ ಜರುಗಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ವಿವಿಧ ಇಲಾಖೆಯ ಅಧಿಕಾರಿಗಳ ಜೊತೆಗಿನ ಸಭೆಗೂ ಮುನ್ನ ನೆಲಮಹಡಿಯಲ್ಲಿರುವ ಸ್ವೀಕೃತಿ ಹಾಗೂ ರವಾನೆ ಶಾಖೆಗೆ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಈ ಹಂತದಲ್ಲಿ ಕೆಲವು ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವುದನ್ನು ಗಮನಿಸಿದ ಯಡಿಯೂರಪ್ಪ, ಸರ್ಕಾರಿ ಕೆಲಸದ ವೇಳೆಯಲ್ಲಿ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಕಚೇರಿಯಲ್ಲಿ ಹಾಜರಿರಬೇಕು, ಅಶಿಸ್ತು ತೋರುವ ಅಧಿಕಾರಿಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸಿಬ್ಬಂದಿಗಳಲ್ಲಿ ಸಮಯ ಪಾಲನೆ ಇಲ್ಲದಿದ್ದರೆ ಹೇಗೆ ಕರ್ತವ್ಯ ನಿರ್ವಹಿಸುತ್ತೀರಿ, ಹಿಂದಿನ ಮುಖ್ಯಮಂತ್ರಿಗಳು ಯಾವ ಸಮಯ ಕೊಟ್ಟಿದ್ದರೊ ಗೊತ್ತಿಲ್ಲ. ನಾನು ಮುಖ್ಯಮಂತ್ರಿಯಾಗಿರುವಾಗ ನೀವು ನಿಗದಿತ ಸಮಯಕ್ಕೆ ಬರಬೇಕು. ಇಲ್ಲದಿದ್ದರೆ ನಾನೇ ಸಮಯ ನಿಗದಿಪಡಿಸುತ್ತೇನೆ ಎಂದರು.
ಅಧಿಕಾರಿಗಳು ಸೇರಿದಂತೆ ಕೆಳಹಂತದ ಸಿಬ್ಬಂದಿ ಶಿಸ್ತು ಪಾಲಿಸುವುದು ಕಡ್ಡಾಯ.ನಿಮ್ಮಲ್ಲೇ ಶಿಸ್ತು ಇಲ್ಲದಿದ್ದರೆ ಬೇರೆಯವರು ಪಾಲನೆ ಮಾಡುತ್ತಾರೆಯೇ ಎಂದು ಪ್ರಶ್ನಿಸಿದರು.
ನಾನು ಪದೇ ಪದೇ ದಿಢೀರ್ ಭೇಟಿ ನೀಡುತ್ತಲೇ ಇರುತ್ತೇನೆ. ನೀವು ಯಾರ ಕಾಲದಲ್ಲಿ ಹೇಗೆ ಕೆಲಸ ಮಾಡಿದ್ದೀರಿ ಎಂಬುದು ಬೇಕಾಗಿಲ್ಲ. ನನ್ನ ಅವಧಿಯಲ್ಲಿ ಸರಿಯಾಗಿ ಸಮಯ ಪಾಲನೆ ಮಾಡಿ ಎಂದು ಹೇಳಿದರು.
ಮುಂದೆ ಇಂತಹ ಪ್ರಮಾದಗಳು ಆಗದಂತೆ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವಂತೆಯೂ ಮಾಡಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ದಿಢೀರ್ ಭೇಟಿ ಕೊಟ್ಟಿದ್ದರಿಂದ ಸಿಬ್ಬಂದಿಗಳಲ್ಲಿ ನಡುಕ ಉಂಟಾಗಿತ್ತು. ಒಂದು ಹಂತದಲ್ಲಿ ಸಿಬ್ಬಂದಿಯ ವರ್ತನೆಯಿಂದ ಮುಖ್ಯಮಂತ್ರಿಗಳು ಕೆಂಡಾಮಂಡಲರಾದರು. ತಕ್ಷಣವೇ ಮುಂದೆ ಈ ರೀತಿ ಆಗದಂತೆ ಸೂಚನೆ ನೀಡಿ ಅಲ್ಲಿಂದ ನಿರ್ಗಮಿಸಿದರು.