ಏರ್‍ಸೇಲ್ ಮ್ಯಾಕ್ಸಿಸ್ ಲಂಚ ಹಗರಣ-ಪಿ.ಚಿದಂಬರಂ ಮತ್ತು ಪುತ್ರನ ಮಧ್ಯಂತರ ರಕ್ಷಣಾ ಅವಧಿಯ ವಿಸ್ತರಣೆ

ನವದೆಹಲಿ, ಆ.1-ಏರ್‍ಸೇಲ್ ಮ್ಯಾಕ್ಸಿಸ್ ಲಂಚ ಹಗರಣದಲ್ಲಿ ಆರೋಪಿಗಳಾಗಿರುವ ಕೇಂದ್ರ ಮಾಜಿ ಸಚಿವ ಪಿ.ಚಿದಂಬರಂ ಮತ್ತು ಅವರ ಪುತ್ರ ಉದ್ಯಮಿ ಕಾರ್ತಿ ಚಿದಂಬರಂ ಅವರ ಮಧ್ಯಂತರ ರಕ್ಷಣಾ ಅವಧಿಯನ್ನು ದೆಹಲಿಯ ನ್ಯಾಯಾಲಯೊಂದು ಆಗಸ್ಟ್ 9ರವರೆಗೆ ವಿಸ್ತರಿಸಿದೆ.

ವಿಶೇಷ ನ್ಯಾಯಾಧೀಶರಾದ ಯು.ಪಿ.ಸೈನಿ ತಂದೆ ಮತ್ತು ಮಗನ ನಿರೀಕ್ಷಣಾ ಜಾಮೀನು ಅರ್ಜಿ ವಿರೋಧಿಸಿ ಕೇಂದ್ರಿಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯ (ಇಡಿ) ಸಲ್ಲಿಸಿದ್ದ ಮೇಲ್ಮನವಿಗಳ ವಿಚಾರಣೆ ನಡೆಸಿದರು.

ಈ ಕುರಿತು ವಾದಗಳನ್ನು ಮಂಡಿಸಲು ಮತ್ತಷ್ಟು ಸಮಯಬೇಕೆಂದು ಸಿಬಿ ಐ, ಇಡಿ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ವಿಚಾರಣೆ ಅಪೂರ್ಣಗೊಂಡ ಹಿನ್ನೆಲೆಯಲ್ಲಿ ನ್ಯಾಯಾಧೀಶರು ಚಿದು ಮತ್ತು ಕಾರ್ತಿ ಅವರ ಮಧ್ಯಂತರ (ಬಂಧನದಿಂದ ರಕ್ಷಣೆ) ರಕ್ಷಣೆ ಅವಧಿಯನ್ನು ಮುಂದಿನ ಶ್ರುಕವಾರದವರೆಗೆ ವಿಸ್ತರಿಸಿದರು.

ಇದಕ್ಕೂ ಮುನ್ನ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಚಿದಂಬರಂ ತಾವು ಮತ್ತು ತಮ್ಮ ಪುತ್ರ ನಿರೀಕ್ಷಣಾ ಜಾಮೀನು ಪಡೆಯುವ ಹಕ್ಕು ಹೊಂದಿದ್ದೇವೆ ಎಂದು ಮನವಿ ಮಾಡಿದರು.

ಏರ್‍ಸೇಲ್ ಮ್ಯಾಕ್ಸಿಸ್ ಕಂಪನಿ ವ್ಯವಹಾರಗಳಿಗೆ ವಿದೇಶಿ ಬಂಡವಾಳ ಹೂಡಲು ರಫ್ತು ಉತ್ತೇಜನ ಮಂಡಳಿಯಿಂದ ಅನುವು ಮಾಡಿಕೊಡಲು ಲಂಚ ಪಡೆದಿದ್ದ ಪ್ರಕರಣ ಇದಾಗಿದೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ