ಬೆಂಗಳೂರು, ಜು.31- ಇಡೀ ದೇಶ ನಮ್ಮ ವಿಧಾನಸಭೆ ಕಡೆ ತಿರುಗಿ ನೋಡುವಂತೆ ಸಂವಿಧಾನ ನಿಷ್ಟರಾಗಿ ಕಾರ್ಯ ನಿರ್ವಹಿಸಬೇಕೆಂದು ನೂತನ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಮಾಜಿ ಸ್ಪೀಕರ್ ರಮೇಶ್ಕುಮಾರ್ ಸಲಹೆ ನೀಡಿದರು.
ವಿಧಾನಸಭೆಯಲ್ಲಿ ಅವಿರೋಧವಾಗಿ ಸಭಾಧ್ಯಕ್ಷರಾಗಿ ಆಯ್ಕೆಯಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಸಭಾಧ್ಯಕ್ಷರ ಸ್ಥಾನದ ಗೌರವ ಹೆಚ್ಚುವ ರೀತಿಯಲ್ಲಿ ಜನರ ವಿಚಾರಗಳು ಹೆಚ್ಚು ಚೆರ್ಚೆಯಾಗಬೇಕು ಎಂದು ಹೇಳಿದರು.
ಧ್ವನಿ ಇಲ್ಲದವರ ಹಾಗೂ ಜನರ ವಿಚಾರದ ಬಗ್ಗೆ ಹೆಚ್ಚು ಅವಕಾಶ ದೊರೆಯಬೇಕು. ಸಂಸದೀಯ ವೇದಿಕೆಗಳಲ್ಲಿ ರಜೆಯ ವಿಚಾರ ಚರ್ಚೆಯಾಗುವುದಿಲ್ಲ ಎಂಬುದನ್ನು ದೂರ ಮಾಡಬೇಕು. ಜನರ ವಿಶ್ವಾಸ ಈ ವ್ಯವಸ್ಥೆಯಲ್ಲಿ ನಶಿಸಲು ಅವಕಾಶ ಇರಬಾರದು. ನೀವು ಆರ್ಎಸ್ಎಸ್ ಹಿನ್ನೆಲೆಯಿಂದ ಬಂದವರು.
ಅದರಿಂದ ಹೊರ ಬಂದು ಸಂವಿಧಾನಕ್ಕೆ ಮಾತ್ರ ನಿಷ್ಟರಾಗಿ ಇರಬೇಕು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ವಾದ, ಮನುವಾದ ಪರಸ್ಪರ ವಿರುದ್ಧ ದಿಕ್ಕಿನಲ್ಲಿವೆ. ನಿಮ್ಮ ಮೇಲೆ ತಕ್ಕಡಿ ಇದೆ. ಭಗತ್ಸಿಂಗ್ ಅವರನ್ನು ನೇಣಿಗೆ ಹಾಕಿದಾಗ ಅವರ ಕಾಲಿಗೆ ಮರಳು ಮೂಟೆ ಕಟ್ಟಲಾಗಿತ್ತು. ಆ ಮೂಟೆ ಕೆಳಗೆ ಪ್ರಜಾಪ್ರಭುತ್ವ ರೂಪಿಸಲಾಗಿದೆ.
ಜಲಿಯನ್ ವಾಲಾಬಾಗ್ ಹತ್ಯಾಕಾಂಡದ ರಕ್ತದ ಕಲೆಯನ್ನು ನಿಮ್ಮ ಹಣೆಗೆ ತಿಲಕವಾಗಿ ಇಟ್ಟಿದ್ದಾರೆ. ಇತಿಹಾಸ ಮರೆಯುವವರು ದೇಶಕಟ್ಟಲು ಸಾಧ್ಯವಿಲ್ಲ. ಸವಿಂಧಾನ ಅನುಷ್ಠಾನಗೊಂಡ ಮೇಲೆ ಅಸಮಾನತೆ ಹೋಗಬೇಕು. ಆದರೆ, ಈ ದೇಶದಲ್ಲಿ ಅಸಮಾನತೆ ವಿಜೃಂಭಿಸುತ್ತಿದೆ ಎಂದು ವಿಷಾದಿಸಿದರು.
ಮನುವಾದದಲ್ಲಿ ಚಾತುವರ್ಣದ ಪ್ರಸ್ತಾಪವಿದೆ. ಆದರೆ, ಪಂಚಮನನ್ನು ಲೆಕ್ಕಕ್ಕೆ ತೆಗೆದುಕೊಂಡಿಲ್ಲ. ಆರ್ಎಸ್ಎಸ್ ಸಂಸ್ಥಾಪಕರು ಇದ್ದದ್ದು ನಾಗಪುರದಲ್ಲೇ.
ಅಂಬೇಡ್ಕರ್ ಅವರು ಬೌದ್ಧ ಧರ್ಮಕ್ಕೆ ಸೇರ್ಪಡೆಯಾಗಿದ್ದು ನಾಗಪುರದಲ್ಲೇ. ಅಂಬೇಡ್ಕರ್ ಅವರು ಸಮಾನತೆ ಆಧಾರದ ಮೇಲೆ ಅಖಂಡ ಭಾರತ ಇರಬೇಕು ಎಂದು ಪ್ರತಿಪಾದಿಸಿದವರು.ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಶಾಸನ ಸಭೆ ಆರಂಭಗೊಂಡಿದ್ದು ಎಂದು ಅದರ ಇತಿಹಾಸವನ್ನು ಮೆಲುಕು ಹಾಕಿದರು.
ನೂತನ ಸಭಾಧ್ಯಕ್ಷರಾದವರನ್ನು ಅಭಿನಂದಿಸುವುದು ಸಂಪ್ರದಾಯ. ಸಭಾಧ್ಯಕ್ಷರ ಪೀಠಕ್ಕೆ ಅದರದೇ ಆದ ಇತಿಹಾಸವಿದೆ. ಮಂತ್ರಿ ಮಾಡಲು ಆಗದಿದ್ದ ಅನಿವಾರ್ಯ ಸಂದರ್ಭ, ನಿವೃತ್ತಿಯ ಅಂಚಿನಲ್ಲಿದ್ದವರನ್ನು ಸಭಾಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎಂದಾಗ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ನಿಮ್ಮ ಅನುಭವದ ಮಾತು ಹೇಗೆ ಎಂದರು.
ಆಗ ಮಾತು ಮುಂದುವರೆಸಿದ ರಮೇಶ್ಕುಮಾರ್, ಅನುಭವದ ಆಧಾರದ ಮೇಲೆ ಹೇಳುತ್ತಿರುವುದಾಗಿ ನುಡಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.
ನಿಮ್ಮ ಬಗ್ಗೆ ಕೆಟ್ಟದು ಹೇಳಲು ಸಾಧ್ಯವಿಲ್ಲ. ನೀವು ಸಚಿವರಾಗಿದ್ದಾಗ ತಮ್ಮ ಮನವಿಯೊಂದನ್ನು ಪರಿಗಣಿಸಿದ್ದೀರಿ. ಹಣಕಾಸಿನ ವಿಚಾರದಲ್ಲೂ ಕೂಡ ಎಚ್ಚರಿಕೆಯಿಂದ ಇದ್ದವರು. ಪ್ರಾಮಾಣಿಕರಾಗಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಾರ್ವಜನಿಕರ ಹಿತದೃಷ್ಟಿಯಿಂದ ನಿಮ್ಮ ನೋವು ಹಂಚಿಕೊಳ್ಳಲು ನಿಮ್ಮೊಂದಿಗೆ ಇರುವುದಾಗಿ ಹೇಳಿ ರಮೇಶ್ಕುಮಾರ್ ನೂತನ ಸ್ಪೀಕರ್ ಅವರನ್ನು ಅಭಿನಂದಿಸಿದರು.