ಬೆಂಗಳೂರು, ಜು.31- ಸೋಮವಾರ ರಾತ್ರಿ ಮಂಗಳೂರಿನ ನೇತ್ರಾವತಿ ನದಿ ಸೇತುವೆ ಬಳಿಯಿಂದ ನಿಗೂಢವಾಗಿ ಕಾಣೆಯಾಗಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ, ಕಾಫಿ ಡೇ ಮಾಲೀಕ, ಉದ್ಯಮಿ ಸಿದ್ಧಾರ್ಥ್ ಅವರ ಮೃತದೇಹ ನೇತ್ರಾವತಿ ನದಿಯ ಹಿನ್ನೀರಿನಲ್ಲಿ ಇಂದು ಮುಂಜಾನೆ ಪತ್ತೆಯಾಗಿದೆ.
ಬೆಳಗಿನ ಜಾವ 6.15ರ ಸಮಯದಲ್ಲಿ ಸ್ಥಳೀಯ ಮೀನುಗಾರರು ಮೀನು ಹಿಡಿಯಲು ನದಿಗಿಳಿದಾಗ ಹಿನ್ನೀರಿನಲ್ಲಿ ಶವವೊಂದು ತೇಲುತ್ತಿರುವುದು ಕಂಡುಬಂದಿದೆ. ತಕ್ಷಣ ಮೀನುಗಾರರು ದೋಣಿಯಲ್ಲಿ ಅಲ್ಲಿಗೆ ತೆರಳಿ ಶವವನ್ನು ದಡಕ್ಕೆ ತಂದಿದ್ದಾರೆ.
ಶೋಧಕಾರ್ಯದಲ್ಲಿ ತೊಡಗಿದ್ದ ಪೊಲೀಸ್ ಅಧಿಕಾರಿಗಳು ದಡಕ್ಕೆ ದಾವಿಸಿ ಬಂದು ಮೀನುಗಾರರು ದೋಣಿಯಲ್ಲಿ ತಂದಿದ್ದ ಶವವನ್ನು ನೋಡಿ ಉದ್ಯಮಿ ಸಿದ್ಧಾರ್ಥ್ ಅವರ ಮೃತದೇಹವೆಂದು ಗುರುತಿಸಿ ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಕಳುಹಿಸಿದ್ದಾರೆ.
ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ ನಂತರ ಪಾರ್ಥೀವ ಶರೀರವನ್ನು ಅವರ ಹುಟ್ಟೂರಾದ ಚೇತನಹಳ್ಳಿಗೆ ಅಂತ್ಯ ಸಂಸ್ಕಾರಕ್ಕಾಗಿ ಕೊಂಡೊಯ್ಯಲಾಯಿತು.
ಉದ್ಯಮಿ ಸಿದ್ಧಾರ್ಥ್ ಅವರು ಮಂಗಳೂರು- ಕೇರಳ ರಸ್ತೆಯಲ್ಲಿನ ನೇತ್ರಾವತಿ ನದಿ ಸೇತುವೆ ಮೇಲಿನಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಮೃತದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಇಲ್ಲದಿರುವುದರಿಂದ ಮತ್ತು ಅವರ ಚಾಲಕನ ಹೇಳಿಕೆಯಿಂದ, ಪ್ರಾಥಮಿಕ ವೈದ್ಯಕೀಯ ಪರೀಕ್ಷೆಯಿಂದ ಕಂಡುಬಂದಿರುವ ಅಂಶಗಳಿಂದ ಇದು ಆತ್ಮಹತ್ಯೆ ಎಂದು ಶಂಕಿಸಲಾಗಿದೆ.
ಅಂತಿಮವಾಗಿ ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸತ್ಯಾಂಶ ಗೊತ್ತಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಿದ್ಧಾರ್ಥ್ ಅವರ ನಾಪತ್ತೆ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಮಂಗಳೂರು ನಗರದ ಕಂಕನಾಡಿ ಠಾಣೆ ಪೊಲೀಸರು ಈ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದಾರೆ.
36 ಗಂಟೆಗಳ ಸತತ ಪ್ರಯತ್ನ: ನಾಪತ್ತೆಯಾಗಿದ್ದ ಸಿದ್ಧಾರ್ಥ್ ಅವರಿಗಾಗಿ ಸೋಮವಾರ ರಾತ್ರಿಯಿಂದ ಇಂದು ಮುಂಜಾನೆವರೆಗೂ ಸತತ 36 ಗಂಟೆಗಳ ಶೋಧಕಾರ್ಯ ನಡೆಯಿತು.
200ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳು, ಅಧಿಕಾರಿಗಳು ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ, ನುರಿತ ಈಜುಗಾರರು, ಕೋಸ್ಟಲ್ ಗಾರ್ಡ್ಗಳು ಶೋಧಕಾರ್ಯದಲ್ಲಿ ತೊಡಗಿದ್ದರು.
ಜಿಲ್ಲಾಧಿಕಾರಿಗಳು, ಮಂಗಳೂರು ನಗರದ ಇಬ್ಬರು ಡಿಸಿಪಿಗಳು ಹಾಗೂ ಇನ್ನಿತರ ಅಧಿಕಾರಿಗಳು ಸೋಮವಾರ ರಾತ್ರಿಯಿಂದಲೇ ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ಸಿದ್ಧಾರ್ಥ್ ಅವರ ಸಾವಿಗೆ ಸದ್ಯಕ್ಕೆ ನಿಖರವಾದ ಕಾರಣ ತಿಳಿದುಬಂದಿಲ್ಲ. ಮೇಲ್ನೋಟಕ್ಕೆ ಆರ್ಥಿಕ ಸಂಕಷ್ಟ ಮತ್ತು ಸಾಲ ಎಂದು ಹೇಳಲಾಗುತ್ತಿದೆ. ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ ನಂತರವೇ ಸಾವಿಗೆ ಕಾರಣ ತಿಳಿದುಬರಲಿದೆ.
ಸೋಮವಾರ ಬೆಳಗ್ಗೆ ಊರಿಗೆ ಹೋಗುವುದಾಗಿ ತಮ್ಮ ಚಾಲಕನಿಗೆ ಹೇಳಿ ಇನೋವಾ ಕಾರಿನಲ್ಲಿ ಬೆಂಗಳೂರಿನಿಂದ ಪ್ರಯಾಣಿಸಿದರು. ಚಿಕ್ಕಮಗಳೂರು ತಲುಪಿದ ನಂತರ ಮಂಗಳೂರಿಗೆ ತೆರಳುವಂತೆ ಚಾಲಕನಿಗೆ ತಿಳಿಸಿ ತೆರಳಿದರು. ಕಾರು ಕೇರಳ-ಮಂಗಳೂರು ರಸ್ತೆಯ ಜಪ್ಪಿನಮಗರು ಪ್ರದೇಶದ ನೇತ್ರಾವತಿ ಸೇತುವೆ ಮೇಲೆ ಹೋಗುತ್ತಿದ್ದಾಗ ಚಾಲಕನಿಗೆ ಕಾರು ನಿಲ್ಲಿಸುವಂತೆ ಹೇಳಿ ಕಾರಿನಿಂದ ಇಳಿದರು.
ಮೊಬೈಲ್ ಪೋನ್ನಲ್ಲಿ ಮಾತನಾಡುತ್ತಿದ್ದ ಅವರು ಕಾರನ್ನು ವಾಪಸ್ ತಿರುಗಿಸಿಕೊಂಡು ಬರುವಂತೆ ಹೇಳಿ ಅಲ್ಲಿಂದ ನಾಪತ್ತೆಯಾಗಿದ್ದರು. ಈ ಬಗ್ಗೆ ಅವರ ಚಾಲಕ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು.