ಬೆಂಗಳೂರು,ಜು.31- ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಹಾಗೂ ಕಾಫಿ ಡೇ ಸಂಸ್ಥಾಪಕ ವಿ.ಜಿ.ಸಿದ್ದಾರ್ಥ್ ಅವರ ನಿಧನಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಸಿದ್ದಾರ್ಥ್ ಅವರ ನಿಧನ ತೀವ್ರ ಆಘಾತ ಹಾಗೂ ದುಃಖ ತಂದಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಸಂತಾಪ ವ್ಯಕ್ತಪಡಿಸಿದ್ದಾರೆ.
ಅತ್ಯಂತ ಸಭ್ಯ, ಸುಸಂಸ್ಕøತ ವ್ಯಕ್ತಿ ಕಾಫಿ ಕಿಂಗ್ ಎಂದೇ ಪ್ರಖ್ಯಾತರಾಗಿದ್ದ ಕಾಫಿ ಡೇ ಸಂಸ್ಥಾಪಕ, ಯುವ ಉದ್ಯಮಿ ಚಿಕ್ಕಮಗಳೂರು ಮೂಲದ ಸಿದ್ದಾರ್ಥ್ ಅವರ ಜೀವನ ಈ ರೀತಿ ಅಂತ್ಯವಾದದ್ದು ಅಘಾತಕರ ಹಾಗೂ ನಂಬಲು ಅಸಾಧ್ಯ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಸಂತಾಪ ವ್ಯಕ್ತಪಡಿಸಿದ್ದಾರೆ.
ಉದ್ಯಮಿ ಹಾಗೂ ಆತ್ಮೀಯ ಗೆಳೆಯ ಸಿದ್ದಾರ್ಥ್ ಅವರ ನಿಧನದ ಸುದ್ದಿ ತಿಳಿದು ಆಘಾತವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಂತಾಪ ಸೂಚಿಸಿದ್ದಾರೆ.
ಕಳೆದ 25 ವರ್ಷಗಳಿಂದ ಸ್ನೇಹಿತರಾಗಿದ್ದ ಸಿದ್ದಾರ್ಥ್ ಅವರು ಕರ್ನಾಟಕದ ಕಾಫಿ ಉದ್ಯಮವನ್ನು ವಿಶ್ವಮಟ್ಟಕ್ಕೆ ಪರಿಚಯಿಸಿದ್ದರು. ಸಾಕಷ್ಟು ಜನರಿಗೆ ಉದ್ಯೋಗವಕಾಶ ಕಲ್ಪಿಸಿದ್ದರು. ಅವರ ನಿಧನದಿಂದ ಕರ್ನಾಟಕ ಶ್ರೇಷ್ಠ ಉದ್ಯಮಿ ಅವರನ್ನು ಕಳೆದುಕೊಂಡಿದೆ ಎಂದು ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.