ಬೆಂಗಳೂರು: ಕೆಫೆ ಕಾಫಿ ಡೇಸ್ಥಾಪಕ ಹಾಗೂ ಹಿರಿಯ ರಾಜಕಾರಣಿ ಎಸ್ಎಂ ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಹೆಗಡೆ ಮೃತದೇಹ ಮಂಗಳೂರಿನ ನೇತ್ರಾವತಿ ನದಿ ಹಿನ್ನೀರಿನಲ್ಲಿ ಬುಧವಾರ ಬೆಳಗ್ಗೆ ದೊರೆತಿದೆ. ಸೋಮವಾರ ಕಾಣೆಯಾಗಿದ್ದ ಅವರು ಶವವಾಗಿ ಪತ್ತೆಯಾಗಿರುವುದು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.
ಉದ್ಯಮಕ್ಕೆ ಸಂಬಂಧಿಸಿದ ಕೆಲಸ ಎಂದು ಹೇಳಿ ಡ್ರೈವರ್ ಬಸವರಾಜು ಜೊತೆ ಸಿದ್ಧಾರ್ಥ್ ಮಂಗಳೂರಿಗೆ ತೆರಳುತ್ತಿದ್ದರು. ಕಾರಿನಲ್ಲಿ ತೆರಳುವಾಗ ಸಿದ್ಧಾರ್ಥ್ ಮೊಬೈಲ್ನಲ್ಲಿ ಮಾತನಾಡುತ್ತಲೇ ಇದ್ದರಂತೆ. ಮಂಗಳೂರಿನ ಉಳ್ಳಾಲ ಸಮೀಪ ಇರುವ ಒಂದು ಕಿ.ಮೀ ಉದ್ದದ ಬ್ರಿಡ್ಜ್ ಮೇಲೆ ಅವರು ಇಳಿದಿದ್ದರು.
ಚಾಲಕನ ಬಳಿ ಕಾರಿನಲ್ಲೇ ಇರುವಂತೆ ಸೂಚಿಸಿದ ಸಿದ್ಧಾರ್ಥ್ ಮೊಬೈಲ್ನಲ್ಲಿ ಮಾತನಾಡುತ್ತಾ ಸಾಗಿದ್ದರು. ಬ್ರಿಡ್ಜ್ನ ಮತ್ತೊಂದು ತುದಿಯಿಂದ ಬರುವಾಗ ಅವರು ಕಾಣೆಯಾಗಿದ್ದರು. ಇದು ಸಾಕಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.
ಸಿದ್ಧಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಕೆಲವರ ವಾದ. ಸಾಯುವುದಕ್ಕೂ ಮೊದಲು ‘ನಾನು ಎಲ್ಲವನ್ನೂ ಕೈ ಚಲ್ಲಿದ್ದೇನೆ’ ಎಂದು ಬರೆದಿರುವ ಪತ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಕ್ಕೆ ಪುಷ್ಠಿ ನೀಡುತ್ತದೆ. ಕಟ್ಟಿ ಬೆಳೆಸಿದ ಸಂಸ್ಥೆ ನಷ್ಟದಲ್ಲಿರುವುದರಿಂದ ನೊಂದ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಕೆಲವರು ಊಹಿಸುತ್ತಾರೆ.
ಇನ್ನು ಈ ಸಾವು ಆಕಸ್ಮಿಕವೂ ಆಗಿರಬಹುದು ಎನ್ನುವ ಮಾತು ಕೇಳಿ ಬಂದಿದೆ. ಮೊಬೈಲ್ನಲ್ಲಿ ಮಾತನಾಡುವಾಗ ನೀರು ಎಷ್ಟು ಹರಿಯುತ್ತಿದೆ ಎಂಬುದನ್ನು ನೋಡಲು ಅವರು ಸೇತುವೆಯಿಂದ ಬಗ್ಗಿರಬಹುದು. ಈ ವೇಳೆ ಆಯತಪ್ಪಿ ಬಿದ್ದಿರುವುದನ್ನೂ ಅಲ್ಲಗಳೆಯುವಂತಿಲ್ಲ.
ಇನ್ನು, ಸಿದ್ಧಾರ್ಥ್ ಮಂಗಳೂರಿಗೆ ಹೋಗುವ ವಿಚಾರವನ್ನು ತಿಳಿದುಕೊಂಡ ಕೆಲವರು ಅವರನ್ನು ನದಿಗೆ ತಳ್ಳಿರಬಹುದು ಎನ್ನುವ ಶಂಕೆಯೂ ಇದೆ. ಇದೆಲ್ಲದಕ್ಕೂ ಪೊಲೀಸರ ತನಿಖೆಯಲ್ಲಿ ಉತ್ತರ ದೊರೆಯಬೇಕಿದೆ.