ರಿಯೊ ಡಿ ಜನೈರೊ, ಜು.30 – ಬ್ರೆಜಿಲ್ ಬಂದೀಖಾನೆಗಳು ಮೃತ್ಯುಕೂಪಗಳಾಗುತ್ತಿದ್ದು, ಕಾರಾಗೃಹವೊಂದರಲ್ಲಿ ಭುಗಿಲೆದ್ದ ಭೀಕರ ಘರ್ಷಣೆಯಲ್ಲಿ 57 ಕೈದಿಗಳು ಹತರಾಗಿದ್ದು, ಅನೇಕರು ಗಾಯಗೊಂಡಿದ್ದಾರೆ.
ಉತ್ತರ ಬ್ರೆಜಿಲ್ನ ಆಲ್ಟಾಮಿರಾ ಜೈಲಿನಲ್ಲಿ ಸಂಘಟಿಕ ಅಪರಾಧಿಗಳ ಎರಡು ಕುಖ್ಯಾತ ಗುಂಪುಗಳ ನಡುವೆ ಭುಗಿಲೆದ್ದ ಭೀಕರ ಘರ್ಷಣೆಯಲ್ಲಿ ಕನಿಷ್ಟ 57 ಮಂದಿ ಸೆರೆಯಾಳುಗಳು ಹತರಾಗಿದ್ದಾರೆ. ಇವರಲ್ಲಿ 16 ಕೈದಿಗಳ ರುಂಡ ಚೆಂಡಾಡಿರುವ ಭೀಭತ್ಸ ಕೃತ್ಯವೂ ನಡೆದಿದೆ.
ರಿಯೊ ಡಿ ಜನೈರೋ ಮೂಲದ ಕಮ್ಯಾಂಡೋ ವೆರ್ಮಲ್ಹೋ ಮತ್ತು ಕಮ್ಯಾಂಡೋ ಕ್ಲಾಸ್ ಎ ಎಂಬ ಸ್ಥಳೀಯ ಕ್ರಿಮಿನಲ್ ಗ್ಯಾಂಗ್ಗಳ ನಡುವೆ ಬೆಳಗ್ಗೆ 7 ಗಂಟೆಗೆ ಕ್ಷುಲ್ಲಕ ವಿಚಾರಕ್ಕೆ ಆರಂಭವಾದ ಗಲಭೆ ವಿಕೋಪಕ್ಕೆ ಹೋಗಿ 57 ಬಂಧಿಯಾಳುಗಳು ಹತರಾಗಿ, ಅನೇಕರು ಗಾಯಗೊಂಡರು.
ಕಮ್ಯಾಂಡೋ ಕ್ಲಾಸ್-ಎ ಗ್ಯಾಂಗ್ನ ಮುಖಂಡರು, ಕಮ್ಯಾಂಡೋ ವೆರ್ಮಲ್ಹೋ ಕೈದಿಗಳು ಇದ್ದ ಜೈಲಿನ ಕೊಠಡಿಗೆ ಬೆಂಕಿ ಹಚ್ಚಿದರು ಎಂದು ಸೆರೆಮನೆಯ ಮುಖ್ಯಸ್ಥ ಜರ್ಬಾಸ್ ವ್ಯಾಸ್ಕೋನ್ಸೆಲೋಸ್ ತಿಳಿಸಿದ್ಧಾರೆ.
ಕೊಠಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂತರ ಸುತ್ತಮುತ್ತಲ ಪ್ರದೇಶಗಳಿಗೂ ಹಬ್ಬಿ ಕಟ್ಟಡವನ್ನು ಆವರಿಸಿತು. ಬೆಂಕಿ ಜ್ವಾಲೆಗಳು ಧಗಧಗಿಸುತ್ತಿದ್ದ ಕಾರಣ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರಿಗೆ ಕಷ್ಟವಾಯಿತು ಎಂದು ಅವರು ವಿಷಾದದಿಂದ ಹೇಳಿದ್ಧಾರೆ.
ಇದೇ ಸಂದರ್ಭದಲ್ಲಿ ಕುಖ್ಯಾತ ಕೈದಿಗಳು ಜೈಲಿನ ಸಿಬ್ಬಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡರು. ನಂತರ ಎರಡು ಗುಂಪುಗಳ ನಡುವೆ ಭೀಕರ ಹೊಡೆದಾಟಗಳು ನಡೆದವು. ಈ ಭೀಭತ್ಸ ಘಟನೆಯಲ್ಲಿ ಎರಡೂ ಕುಖ್ಯಾತ ಕ್ರಿಮಿನಲ್ ಗ್ಯಾಂಗ್ನ 57 ಕೈದಿಗಳು ಹತರಾದರು. ಇವರಲ್ಲಿ 16 ಸೆರೆಯಾಳುಗಳ ರುಂಡ ಕತ್ತರಿಸಲಾಗಿದೆ ಎಂದು ಬಂದೀಖಾನೆ ಮುಖ್ಯಸ್ಥರು ತಿಳಿಸಿದ್ದಾರೆ.
ಈ ಭೀಕರ ಘರ್ಷಣೆಯಲ್ಲಿ ಯಾವುದೇ ರಿವಾಲ್ವರ್, ಪಿಸ್ತೂಲ್ ಮತ್ತು ಗನ್ಗಳನ್ನು ಬಳಸಿಲ್ಲ. ಹರಿತವಾದ ಆಯುಧಗಳು ಮತ್ತು ಚಾಕುಗಳಿಂದ ಹತ್ಯೆಗಳನ್ನು ನಡೆಸಲಾಗಿದೆ.
ಗಲಭೆ ನಂತರ 46 ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇವರಲ್ಲಿ ಅತ್ಯಂತ ಅಪಾಯಕಾರಿಯಾದ 10 ಕೈದಿಗಳನ್ನು ಅತ್ಯಂತ ಬಿಗಿ ಭದ್ರತೆಯ ಬ್ಯಾರಕ್ಗಳಿಗೆ ವರ್ಗಾವಣೆ ಮಾಡಲಾಗಿದೆ.
ಕಳೆದ 15 ದಿನಗಳ ಹಿಂದಷ್ಟೇ ಬ್ರೆಜಿಲ್ನ ಎರಡು ಕಾರಾಗೃಹಗಳಲ್ಲಿ ಕೈದಿಗಳ ನಡುವೆ ಭುಗಿಲೆದ್ದ ಘರ್ಷಣೆಯಲ್ಲಿ ಅನೇಕರು ಹತರಾಗಿದ್ದರು.