ಬೆಂಗಳೂರು,ಜು.30-ಬಿಜೆಪಿ ಹಿರಿಯ ಮುಖಂಡ, ಮಾಜಿ ಸಚಿವ ಶಿರಸಿ ವಿಧಾನಸಭಾ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧಾನಸಭೆಯ ಸ್ಪೀಕರ್ ಆಗುವುದು ಖಚಿತವಾಗಿದೆ.
ಕೊನೆ ಕ್ಷಣದಲ್ಲಿ ಕೆ.ಜೆ.ಬೋಪಯ್ಯ ಅವರು ಸ್ಪೀಕರ್ ಆಗಲು ಹಿಂದೇಟು ಹಾಕಿದ ಕಾರಣ ಬಿಜೆಪಿ ವರಿಷ್ಠರು ಕಾಗೇರಿ ಅವರನ್ನು ಸಭಾಧ್ಯಕ್ಷರನ್ನಾಗಿ ಮಾಡಲು ತೀರ್ಮಾನಿಸಿದರು.
ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಬೆಳಗ್ಗೆ 11.30ಕ್ಕೆ ವಿಧಾನಸಭೆಯ ಕಾರ್ಯದರ್ಶಿ ವಿಶಾಲಾಕ್ಷಿ ಅವರಿಗೆ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ ಮಾಡಿದರು.
ಈ ವೇಳೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ , ಮುಖಂಡರಾದ ಜೆ.ಸಿ.ಮಾಧುಸ್ವಾಮಿ, ಗೋವಿಂದ ಕಾರಜೋಳ, ಬಸವರಾಜ್ ಬೊಮ್ಮಾಯಿ, ಆರ್.ಅಶೋಕ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ನಾಮಪತ್ರ ಸಲ್ಲಿಸಲು ಇಂದು ಮಧ್ಯಾಹ್ನ 12 ಗಂಟೆ ಕಡೆಯ ದಿನವಾಗಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ನಿಂದ ಸ್ಪೀಕರ್ ಸ್ಥಾನಕ್ಕೆ ಯಾರೊಬ್ಬರು ನಾಮಪತ್ರ ಸಲ್ಲಿಸದ ಕಾರಣ ಕಾಗೇರಿ ಅವರು ಅವಿರೋಧವಾಗಿ ಆಯ್ಕೆಯಾಗುವುದು ಖಚಿತವಾಗಿದೆ.
ನಾಳೆ ವಿಧಾನಸಭೆಯಲ್ಲಿ ಹಾಲಿ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರು ಅಧಿಕೃತವಾಗಿ ಕಾಗೇರಿ ಹೆಸರನ್ನು ಪ್ರಕಟಿಸಲಿದ್ದಾರೆ.
ರಾಜಕೀಯ ಹಿನ್ನೆಲೆ: ಆರ್ಎಸ್ಎಸ್ನ ನಿಷ್ಠಾವಂತ ಕಾರ್ಯಕರ್ತನಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಸತತ ಆರು ಬಾರಿ ಗೆದ್ದು ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದಾರೆ.
ಈ ಮೊದಲು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಅವರು, 2008ರ ಕ್ಷೇತ್ರ ಮರುವಿಂಗಡಣೆಯಾದ ನಂತರ ಶಿರಸಿಯಿಂದ ಗೆದ್ದಿದ್ದರು.
1994ರಿಂದ ಸತತವಾಗಿ ಗೆದ್ದು ಬಂದಿರುವ ಕಾಗೇರಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನೆಂದೇ ಗುರುತಿಸಿಕೊಂಡಿದ್ದಾರೆ. ಮಿತವಾದ ಭಾಷೆ, ಸಂಸದೀಯ ವ್ಯವಸ್ಥೆ ಬಗ್ಗೆ ಹೊಂದಿರುವ ಜ್ಞಾನ, ಭಾಷೆಯ ಮೇಲೆ ಹಿಡಿತ,ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣಗಳೇ ಇಂದು ಸ್ಪೀಕರ್ ಹುದ್ದೆಗೆ ತಂದುಕೂರಿಸಿದೆ.
ಈ ಹಿಂದೆಯೂ ಕಾಗೇರಿಯವರು ಕೆಲವು ವಿಶೇಷ ಸಂದರ್ಭಗಳಲ್ಲಿ ಸ್ಪೀಕರ್ ಅವರ ಅನುಪಸ್ಥಿತಿಯಲ್ಲಿ ಕಲಾಪವನ್ನು ಮುನ್ನೆಡೆಸಿದ ಕೀರ್ತಿಗೆ ಭಾಜನರಾಗಿದ್ದರು.
ನಾಮಪತ್ರ ಸಲ್ಲಿಸಿದ ನಂತರ ಮಾತನಾಡಿದ ಕಾಗೇರಿ ಅವರು, ಪಕ್ಷ ಜವಾಬ್ದಾರಿಯನ್ನು ನೀಡಿದೆ. ಅದನ್ನು ಸಮರ್ಥವಾಗಿ ಮತ್ತು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಸ್ಪೀಕರ್ ಸ್ಥಾನದ ಘನತೆಗೆ ಮತ್ತಷ್ಟು ಗೌರವ ತರುತ್ತೇನೆ ಎಂದು ಹೇಳಿದರು.
ಆರ್.ಅಶೋಕ್ ಮತ್ತು ಕೆ.ಎಸ್.ಈಶ್ವರಪ್ಪ ಮಾತನಾಡಿ, ಆರ್ಎಸ್ಎಸ್ ಹಿನ್ನೆಲೆಯಿಂದ ಬಂದಂತಹ ಪ್ರಾಮಾಣಿಕ ರಾಜಕಾರಣಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈಗ ಸ್ಪೀಕರ್ ಆಗಲಿದ್ದಾರೆ. ಅವರು ಅತ್ಯಂತ ಯಶಸ್ವಿಯಾಗಿ ಆ ಸ್ಥಾನವನ್ನು ನಿಭಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಬೋಪಯ್ಯ ಅಸಮಾಧಾನ:
ನಾನೇನು ಸ್ಪೀಕರ್ ಹುದ್ದೆ ನೀಡಿ ಎಂದು ಕೇಳಿರಲಿಲ್ಲ. ಅವರಾಗಿಯೇ ನಾಮೀನೆಷನ್ ಹಾಕೋಕೆ ಹೇಳಿ ಸಹಿ ಕೂಡ ಮಾಡಿಸಿಕೊಂಡಿದ್ದರು. ಆದರೆ, ರಾತ್ರಿ ಮುಖ್ಯಮಂತ್ರಿ ಬಿಎಸ್ವೈ ಕರೆ ಮಾಡಿ ಕಾಗೇರಿಗೆ ಸ್ಪೀಕರ್ ಸ್ಥಾನ ಎಂದು ಮಾಹಿತಿ ನೀಡಿದರು. ಊರಿನ ಜನರೆಲ್ಲಾ ಸ್ಪೀಕರ್ ಸ್ಥಾನ ಫಿಕ್ಸ್ ಆಗಿದ್ದಕ್ಕೆ ಕರೆ ಮಾಡಿ ವಿಶ್ ಮಾಡ್ತಾ ಇದ್ದರು.ಈಗ ನೋಡಿದರೆ ಏಕಾಎಕಿ ಬದಲಾಗಿದೆ ಎಂದು ತಮ್ಮ ಆಪ್ತರ ಬಳಿ ಬೋಪಯ್ಯ ಬೇಸರ ಹೊರ ಹಾಕಿದ್ದಾರೆ ಎಂದು ತಿಳಿದುಬಂದಿದೆ.