ಬೆಂಗಳೂರು, ಜು.30- ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ನಿಗೂಢವಾಗಿ ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ.ಪಾಟೀಲ್, ಬಿ.ಎಲ್.ಶಂಕರ್ ಸೇರಿದಂತೆ ಹಲವು ಗಣ್ಯರು ಕೃಷ್ಣ ಅವರ ನಿವಾಸಕ್ಕೆ ತೆರಳಿ ಧೈರ್ಯ ಹೇಳಿದರು.
ಕೆಫೆ ಕಾಫಿ ಡೇ, ಎಬಿಸಿ ಕಂಪೆನಿ ಸೇರಿದಂತೆ ಹಲವು ಕಂಪೆನಿಗಳನ್ನು ಮುನ್ನಡೆಸುತ್ತಿದ್ದ ಸಿದ್ಧಾರ್ಥ್ ಅವರು ನಿನ್ನೆ ಮಂಗಳೂರು ಬಳಿಯ ಪಂಪ್ವೆಲ್ ಸೇತುವೆ ಬಳಿ ನಿಗೂಢವಾಗಿ ನಾಪತ್ತೆಯಾಗಿದ್ದು, ಎಸ್.ಎಂ.ಕೃಷ್ಣ ಕುಟುಂಬದವರು ತೀವ್ರ ಆತಂಕಕ್ಕೊಳಗಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ಹಲವು ಮುಖಂಡರು ಇಂದು ಅವರ ನಿವಾಸಕ್ಕೆ ತೆರಳಿ ಕುಟುಂಬ ಸದಸ್ಯರಿಗೆ ಧೈರ್ಯ ಹೇಳಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯ ಪೊಲೀಸ್ ಮಹಾನಿರ್ದೇಶಕರೊಂದಿಗೆ ಮಾತನಾಡಿ, ಸಿದ್ಧಾರ್ಥ್ ಅವರ ಪತ್ತೆಗಾಗಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಯಾವುದೇ ತುರ್ತು ಅಗತ್ಯ ನೆರವು ನೀಡುವುದಾಗಿಯೂ ಕೂಡ ಕೃಷ್ಣ ಅವರ ಕುಟುಂಬದವರಿಗೆ ಭರವಸೆ ನೀಡಿದರು.
ಬಿ.ಎಲ್.ಶಂಕರ್, ಆರ್.ವಿ.ದೇಶಪಾಂಡೆ, ಡಾ.ಜಿ.ಪರಮೇಶ್ವರ್, ಜಗದೀಶ್ ಶೆಟ್ಟರ್, ರಾಮಲಿಂಗಾರೆಡ್ಡಿ, ವೀರಣ್ಣ ಮತ್ತಿಕಟ್ಟಿ, ಎನ್.ಎ.ಹ್ಯಾರಿಸ್, ಆರ್.ಮಂಜುನಾಥ್, ಬಿಜೆಪಿ ಮುಖಂಡ ಆರ್.ಅಶೋಕ್, ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ಕುಮಾರ್, ಪುನೀತ್ ರಾಜ್ಕುಮಾರ್ ಸೇರಿದಂತೆ ಹಲವು ಮುಖಂಡರು ಇಂದು ಅವರ ನಿವಾಸಕ್ಕೆ ತೆರಳಿ ಕೃಷ್ಣ ಅವರ ಕುಟುಂಬದವರಿಗೆ ಧೈರ್ಯ ಹೇಳಿದರು.