ಬೆಂಗಳೂರು,ಜು.30- ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಮಗೆ ಅದೃಷ್ಟದ ಮನೆಯೆಂದೇ ಪರಿಗಣಿಸಿರುವ ರೇಸ್ಕೋರ್ಸ್ ರಸ್ತೆಯ ಸರ್ಕಾರಿ ನಿವಾಸಕ್ಕೆ ಶೀಘ್ರದಲ್ಲೇ ತೆರಳಲಿದ್ದಾರೆ.
ಈಗಾಗಲೇ ಮನೆಯ ನವೀಕರಣ ಕಾರ್ಯ ಭರದಿಂದ ಸಾಗಿದ್ದು, ಸುಣ್ಣಬಣ್ಣ ಬಳಿಯಲಾಗುತ್ತಿದೆ.ನಿನ್ನೆಯಿಂದಲೇ ರಸ್ತೆಗಳ ಡಾಂಬರೀಕರಣವೂ ಜೋರಾಗಿ ಸಾಗಿದೆ.
ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ರೇಸ್ ವ್ಯೂ ಕಾಟೇಜ್ ನಿವಾಸದಲ್ಲಿ ವಾಸ್ತವ್ಯ ಹೂಡಿದ್ದರು. ವಿರೋಧ ಪಕ್ಷದ ನಾಯಕರಾದ ತಮಗೆ ಇದೇ ಮನೆಯನ್ನು ನೀಡುವಂತೆ ಕುಮಾರಸ್ವಾಮಿ ಅವರಿಗೆ ಮನವಿ ಮಾಡಿಕೊಂಡಿದ್ದರು. ಆದರೆ ಈ ನಿವಾಸವನ್ನು ಸಚಿವ ಸಾ.ರಾ.ಮಹೇಶ್ ಇಟ್ಟುಕೊಂಡಿದ್ದರಿಂದ ಬಿಎಸ್ವೈ ಡಾಲರ್ಸ್ ಕಾಲೋನಿಯ ತಮ್ಮ ನಿವಾಸದಲ್ಲೇ ವಾಸ್ತವ್ಯ ಹೂಡಿದ್ದರು.
ನಾಲ್ಕನೇ ಬಾರಿ ಮುಖ್ಯಮಂತ್ರಿಯಾದರೂ ಸಹ ಆ ಮನೆಯನ್ನು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ. 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದಾಗಲೂ ಇದೇ ನಿವಾಸದಲ್ಲಿ ವಾಸವಾಗಿದ್ದರು. ಇದೇ ಮನೆಯಲ್ಲಿಯೇ ಇದ್ದಾಗ ಬಿಎಸ್ವೈ ಉಪ ಮುಖ್ಯಮಂತ್ರಿ ಮತ್ತು ಮುಖ್ಯಮಂತ್ರಿ ಗದ್ದುಗೆಯನ್ನು ಏರಿದ್ದರು. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪರಿಗೆ ರೇಸ್ ವ್ಯೂ ಕಾಟೇಜ್ ಅದೃಷ್ಟದ ಮನೆ ಎಂದೇ ಹೇಳಲಾಗುತ್ತಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವಿದ್ದಾಗ ಮಾಜಿ ಸಚಿವ ರಮಾನಾಥ್ ರೈ ಬಂಗಲೆಯಲ್ಲಿ ವಾಸವಾಗಿದ್ದರು. ಶುಭ ಸಂದರ್ಭದಲ್ಲಿ ಯಡಿಯೂರಪ್ಪನವರು ಈ ಮನೆಗೆ ಪ್ರವೇಶ ಮಾಡಲಿದ್ದಾರೆ.