ಬೆಂಗಳೂರು, ಜು.30-ನಿಗೂಢವಾಗಿ ಕಣ್ಮರೆಯಾಗಿರುವ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಅಳಿಯ ಸಿದ್ಧಾರ್ಥ್ ಪ್ರಕರಣವನ್ನು ಅವರ ಕುಟುಂಬದವರು ಬಯಸಿದರೆ ಯಾವುದೇ ರೀತಿಯ ತನಿಖೆಗೆ ಒಳಪಡಿಸಲು ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಬಿಜೆಪಿ ಮುಖಂಡ ಹಾಗೂ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ಧಾರ್ಥ್ ಅವರು ನಿಗೂಢವಾಗಿ ನಾಪತ್ತೆಯಾಗಿರುವುದು ತಿಳಿದು ನಾನು ಆಘಾತಕ್ಕೊಳಗಾದೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆದಿದೆ ಎಂಬುದು ಜನತೆಗೆ ತಿಳಿಯಬೇಕು. ಕುಟುಂಬದವರು ಬಯಸಿದರೆ ಯಾವುದೇ ತನಿಖೆಗೆ ಶಿಫಾರಸು ಮಾಡುವ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಲಾಗುವುದು ಎಂದರು.
ಈ ಘಟನೆಯಿಂದ ಅವರ ಕುಟುಂಬದವರು ಆಘಾತಕ್ಕೆ ಒಳಗಾಗಿದ್ದಾರೆ. ನನಗೂ ತುಂಬಾ ನೋವಾಗಿದೆ ಎಂದರು.
ನನಗೆ ಹಲವಾರು ವರ್ಷಗಳಿಂದ ಸಿದ್ಧಾರ್ಥ್ ಆತ್ಮೀಯ ಸ್ನೇಹಿತರಾಗಿದ್ದು. ಕಾಫಿ ಕುಡಿಯುವ ಸಂದರ್ಭದಲ್ಲಿ ನಾನು ಅವರ ಕಾಫಿ ಡೇಗೆ ಹೋಗುತ್ತಿದ್ದೆ. ಎಲ್ಲೇ ಇದ್ದರೂ ಬಂದು ನನ್ನನ್ನು ಆತ್ಮೀಯವಾಗಿ ಮಾತನಾಡಿಸುತ್ತಿದ್ದರು. ಈ ಘಟನೆ ನನಗೂ ಆಘಾತವಾಗಿದೆ ಎಂದು ಹೇಳಿದರು.
ಅವರಿಗಿರುವ ಆಸ್ತಿ ಲೆಕ್ಕ ಹಾಕಿದರೆ ಸಾಲವು ಲೆಕ್ಕಕ್ಕೇ ಬರುವುದಿಲ್ಲ. ಉದ್ಯಮಿಯಾಗಿ ಸಾಕಷ್ಟು ಯಶಸ್ವಿಯಾಗಿದ್ದರು. ಯಾವ ಕಾರಣಕ್ಕಾಗಿ ಇಂತಹ ಘಟನೆ ನಡೆದಿದೆ ಎಂಬುದು ಗೊತ್ತಿಲ್ಲ. ಸುರಕ್ಷಿತವಾಗಿ ಅವರು ಹಿಂತಿರುಗಲಿ ಎಂದು ಭಗವಂತ ನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಸ್ಪೀಕರ್ ಅವಿರೋಧ ಆಯ್ಕೆ ಖಚಿತ: ವಿಧಾನಸಭೆಯ ಸ್ಪೀಕರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತ. ಈ ಹಿಂದೆಯೂ ಅವರು ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಎಬಿವಿಪಿ ಆರ್ಎಸ್ಎಸ್ ಹಿನ್ನೆಲೆಯಿಂದ ಬಂದಿರುವ ಕಾಗೇರಿ ಅವರು ಉತ್ತಮ ವಾಗ್ಮಿಗಳು ಹಾಗೂ ಸಂಭಾವಿತರು ಹೌದು ಎಂದರು.
ಸಿದ್ಧಾರ್ಥ್ ಆತ್ಮೀಯ ಸ್ನೇಹಿತರು: ಶಾಸಕ ಸಿ.ಟಿ.ರವಿ ಮಾತನಾಡಿ, ಸಿದ್ಧಾರ್ಥ್ ಅವರು ನನಗೆ ಕಳೆದ 30 ವರ್ಷಗಳಿಂದ ಆತ್ಮೀಯ ಸ್ನೇಹಿತರು. ನಮ್ಮ ಜಿಲ್ಲೆಯಲ್ಲಿ ಅವರನ್ನು ಮಾದರಿ ವ್ಯಕ್ತಿ ಎಂದೇ ಕರೆಯುತ್ತಿದ್ದರು. ಯಾರಾದರೂ ಉದ್ಯಮದಲ್ಲಿ ಯಶಸ್ವಿಯಾಗಬೇಕಾದರೆ ಸಿದ್ಧಾರ್ಥ್ ಅವರನ್ನು ನೋಡಿ ಕಲಿಯಿರಿ ಎನ್ನುತ್ತಿದ್ದರು. ಆದರೆ ಇಂದು ಅವರು ನಿಗೂಢವಾಗಿ ಕಣ್ಮರೆಯಾಗಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಒಂದು ವೇಳೆ ಅವರು ಸಾಲ ಮಾಡಿಕೊಂಡಿದ್ದರೆ ಅವರಿಗಿರುವ ಆಸ್ತಿಗೆ ಅದು ಏನೇನೂ ಅಲ್ಲ. ಈ ಘಟನೆಯಿಂದಾಗಿ ಅವರ ಕುಟುಂಬ ಆಘಾತಕ್ಕೆ ಒಳಗಾಗಿದೆ. ಎಲ್ಲೇ ಇದ್ದರೂ ಸುರಕ್ಷಿತವಾಗಿ ಹಿಂತಿರುಗಲಿ ಎಂದು ಪ್ರಾರ್ಥಿಸಿದರು.