ಬೆಂಗಳೂರು, ಜು.29- ಜಾಹಿರಾತು 2018ರ ಬೈಲಾ, ಸಮಿತಿ ರಚನೆ ಸಂಬಂಧ ಸದಸ್ಯರ ಗಮನಕ್ಕೆ ತರದೆ ಸರ್ಕಾರ ನಿರ್ಧಾರಗಳನ್ನು ಕೈಗೊಂಡಿದೆ ಎಂದು ಬಿಬಿಎಂಪಿ ಸದಸ್ಯರು ಇಂದು ಆರೋಪ ವ್ಯಕ್ತಪಡಿಸಿದರು.
ಜಾಹಿರಾತು ನೀತಿ ಬಗ್ಗೆ ಪ್ರಸ್ತಾಪಿಸಿದ ಹಲವು ಸದಸ್ಯರು ಸಮ್ಮಿಶ್ರ ಸರ್ಕಾರ ಈ ಸಂಬಂಧ ಕೈಗೊಂಡ ತೀರ್ಮಾನಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು.
ಜಾಹಿರಾತು ನೀತಿ ಮಾಡಿ ಪಾಲಿಕೆಗೆ ಸೂಚನೆ ಕೊಟ್ಟಿದೆ. ನಮ್ಮ ಗಮನಕ್ಕೆ ತರದೆ ಬೈಲಾ ತಿದ್ದುಪಡಿ ಮಾಡಿ ಸರ್ಕಾರ ಸ್ಥಳೀಯ ಆಡಳಿತವನ್ನು ತುಳಿಯುವ ಪ್ರಯತ್ನ ಮಾಡುತ್ತಿದೆ. ಜಾಹಿರಾತು ನೀತಿ ಮಾಡಲಿಕ್ಕೆ ಸಾಧ್ಯವಾಗದಿದ್ದರೆ ವಾರ್ತಾ ಇಲಾಖೆಗೆ ಕೊಡಲಿ ಎಂದು ಸರ್ಕಾರದ ವಿರುದ್ಧ ಆಡಳಿತ ಪಕ್ಷದ ಸದಸ್ಯ ಗುಣಶೇಖರ್ ತಿರುಗಿ ಬಿದ್ದರು.
ವಿಪಕ್ಷದ ನಾಯಕ ಪದ್ಮನಾಭ ರೆಡ್ಡಿ ಮಾತನಾಡಿ, ಈ ನೀತಿ ಸಂಬಂಧ ಡೀಮ್ಡ್ ಅಪ್ರೂವಲ್ ಆಗಿದ್ದು, ಕೂಡಲೇ ಇದನ್ನು ಕೈ ಬಿಡಬೇಕು. ಪಾಲಿಕೆಯ ಗಮನಕ್ಕೆ ತಾರದೆ ನೋಟಿಫಿಕೇಷನ್ ಹೊರಡಿಸಲಾಗಿದೆ. ಇದರಲ್ಲಿ ಕಾಣದ ಕೈಗಳ ಕೈವಾಡವಿದೆ. ನಮಗೂ ಶಕ್ತಿ ಇದೆ. ಅವಕಾಶ ಮಾಡಿಕೊಡಿ ಎಂದು ಹೇಳಿದರು.
ಕಬ್ಬನ್ ಪಾರ್ಕ್ನಲ್ಲಿ ಹೇಗೆ ಎಲ್ಇಡಿ ಜಾಹಿರಾತಿಗೆ ಅವಕಾಶ ಕೊಟ್ಟಿದ್ದೀರಿ. ಕಸ ಎತ್ತಲು ಪಲ್ಯೂಷನ್ ಕಂಟ್ರೋಲ್ ಮಾಡಲು ನಮಗೆ ತಾಕತ್ತಿಲ್ವಾ ಎಂದು ಹರಿಹಾಯ್ದರು.
ಆಡಳಿತ ಪಕ್ಷದ ಮಾಜಿ ನಾಯಕ ಮಹಮದ್ ರಿಜ್ವಾನ್ ಮಾತನಾಡಿ, ಜಾಹಿರಾತು ನಿಷೇಧ ಮಾಡಿದ್ದರೂ ಹಾಕಲಾಗಿದೆ. ಟಾಯ್ಲೆಟ್ ಮೇಲೆ ಎಲ್ಇಡಿ ಜಾಹಿರಾತು ಹಾಕಲು ಅನುಮತಿ ನೀಡಲಾಗಿದೆ. ನಿಷೇಧ ಆದ ಮೇಲೆ ಜಾಹಿರಾತು ಹಾಕಲು ಏಕೆ ಬಿಡಬೇಕು. 100 ಕೋಟಿ ಬಂಡವಾಳವಿದ್ದರೂ ಮಾತ್ರ ಜಾಹಿರಾತು ಹಾಕಬೇಕು ಎಂದು ಬೈಲಾದಲ್ಲಿ ಹೇಳಲಾಗಿದೆ.
1,500 ಜಾಗದಲ್ಲಿ ಎಲ್ಇಡಿ ಜಾಹಿರಾತು ಹಾಕಲು ಯಾರು ಅನುಮತಿ ನೀಡಿದ್ದರು. ತೆರಿಗೆ ಬರಲಿಲ್ಲ ಅಂತೀರಾ ಯಾಕೆ ತೆರಿಗೆ ಸಂಗ್ರಹ ಮಾಡಿಲ್ಲ. ಇದರಲ್ಲಿ ಆಡಳಿತ ನಡೆಸುವವರು , ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಸರ್ಕಾರದ ಮೇಲೆಯೇ ಹರಿಹಾಯ್ದರು.
ಜಾಹಿರಾತು ನೀತಿಯಲ್ಲಿ ನಿಯಮಾವಳಿ ಬದಲಾಯಿಸಲಾಗಿದೆ. ಇದರಲ್ಲಿ ಮಾಜಿ ಡಿಸಿಎಂ ಕೈವಾಡವಿದೆ ಎಂದು ಆರೋಪಿಸಿದರು.
ಹೋರ್ಡಿಂಗ್ಸ್ಗಳನ್ನು ಸ್ಥಗಿತಗೊಳಿಸಿರುವುದರಿಂದ ಬಿಬಿಎಂಪಿ ಬೊಕ್ಕಸಕ್ಕಾಗಿರುವ ನಷ್ಟದ ಬಗ್ಗೆ ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್ ಸಭೆಯ ಗಮನಕ್ಕೆ ತಂದರು.
ಬೆಂಗಳೂರು ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಾಹಿರಾತು ನಿಷೇಧ ಮಾಡಲಾಗಿದೆ. 198 ವಾರ್ಡ್ಗಳಲ್ಲಿ ಇದರಿಂದ 2,000 ಕೋಟಿ ಆದಾಯ ಬರಲಿದೆ ಎಂದು ಮಥಾಯ್ ಅವರು ವರದಿ ನೀಡಿದ್ದರು.
2016ರಲ್ಲಿ 331 ಕೋಟಿ ತೆರಿಗೆ ಬರಬೇಕು ಎಂದು ಅಧಿಕಾರಿ ರಶ್ಮಿ ಅವರು ವರದಿ ಸಲ್ಲಿಸಿದ್ದರು. ಇದರಿಂದ ಜಾಹಿರಾತುದಾರರು ನ್ಯಾಯಾಲಯದ ಮೊರೆ ಹೋದರು. ಬಳಿಕ ಪಾಲಿಕೆಯ ಬೊಕ್ಕಸಕ್ಕೆ 44 ಕೋಟಿ ಆದಾಯ ಬಂತು. ಈಗ ಪ್ರತಿ ವರ್ಷ 30 ರಿಂದ 40 ಕೋಟಿ ಆದಾಯ ಬರುತ್ತಿದೆ.
ಆದರೆ ಮೇ 2018ರಲ್ಲಿ ಆಯುಕ್ತರು ಯಾವುದೇ ಜಾಹಿರಾತಿಗೆ ಅನುಮತಿ ನೀಡದಂತೆ ಆದೇಶ ಹೊರಡಿಸಿದ್ದಾರೆ. ಹೈಕೋರ್ಟ್ ಕೂಡ ನ್ಯಾಯಾಲಯಕ್ಕೆ ಛೀಮಾರಿ ಹಾಕಿದೆ.