ಬೆಂಗಳೂರು, ಜು.29-ಚುನಾವಣೆ ವ್ಯವಸ್ಥೆ ಸುಧಾರಣೆಗೆ ಸದನದಲ್ಲಿ ನಿರ್ಣಯ ಮಾಡಲು ವಿಧಾನಸಭಾಧ್ಯಕ್ಷರು ಮನವಿ ಮಾಡಿದರು.
ವಿಧಾನಸಭೆಯಲ್ಲಿ ಸಭಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಮುನ್ನ ಮಾತನಾಡಿದ ರಮೇಶ್‍ಕುಮಾರ್ ಅವರು, ಈ ದೇಶದ ಸಾರ್ವಜನಿಕ ಜೀವನದ ಭ್ರಷ್ಟಾಚಾರದ ಮೂಲ ಚುನಾವಣೆ. ಚುನಾವಣೆ ಸುಧಾರಣೆಯಾಗದೆ ಭ್ರಷ್ಟಾಚಾರದ ಬಗ್ಗೆ ಮಾತನಾಡಿದರೆ ಜಾಣತನದ ಮಾತಾಗಲಿದೆ. ಶ್ರೀಸಾಮಾನ್ಯನೂ ಸ್ಪರ್ಧಿಸಿ ಸಾಮಾನ್ಯ, ಬಡವ ಜನರ ವಿಶ್ವಾಸಗಳಿಸಿ ಚುನಾವಣೆಯಲ್ಲಿ ಆಯ್ಕೆಯಾಗುವ ರೀತಿಯಲ್ಲಿ ಚುನಾವಣಾ ಸುಧಾರಣೆ ತರಲು ಸದನದಲ್ಲಿ ನಿರ್ಣಯ ಮಾಡಬೇಕು.
ರಾಜಕೀಯ ಪಕ್ಷಗಳ ನಡವಳಿಕೆಗಳ ಬಗ್ಗೆಯೂ ಮಾತನಾಡಬೇಕಿದೆ. ಸಂಸದೀಯ ಪ್ರಜಾಪ್ರಭುತ್ವಕ್ಕೆ ವಿಕೃತ ದಾರಿಯೇ ರಹದಾರಿಯಲ್ಲ. ಸಂವಿಧಾನದ 10ನೇ ಷೆಡ್ಯೂಲ್ ಬಗ್ಗೆ ಎಲ್ಲರೂ ವಿಶ್ವಾಸ ವ್ಯಕ್ತಪಡಿಸಿ ಮಾತನಾಡಿದ್ದೀರಿ. ಆತ್ಮ ನಿರೀಕ್ಷೆಗೆ ಅನುಗುಣವಾಗಿ ಕರ್ತವ್ಯ ನಿರ್ವಹಿಸಿದ್ದೇನೆ. ಯಾವ ಇತಿಹಾಸವನ್ನೂ ಸೃಷ್ಟಿಸಿಲ್ಲ. ಒತ್ತಡಕ್ಕೂ ಮಣಿದಿಲ್ಲ. ವಿಮರ್ಶೆ ಮಾಡುವುದನ್ನು ಸ್ವಾಗತಿಸುತ್ತೇನೆ. ಸಂವಿಧಾನದ 10ನೇ ಷೆಡ್ಯೂಲ್ ರೀ ಲುಕ್ ಮಾಡಿ ಹೇಳುವ ಅಧಿಕಾರವಿದೆ.
ಪ್ರಜಾಪ್ರತಿನಿಧಿ ಕಾಯ್ದೆಯನ್ನೂ ಕೂಡ ಪರಾಮರ್ಶಿಸಬೇಕಿದೆ. ಅಲ್ಲೂ ಕೂಡ ಲೋಪದೋಷಗಳಿವೆ. ಸಾರ್ವಜನಿಕ ಜೀವನದಲ್ಲಿರುವವರು ಜೂ.30ರೊಳಗೆ ಲೋಕಾಯುಕ್ತಕ್ಕೆ ಆಸ್ತಿ ವಿವರ ಸಲ್ಲಿಸಬೇಕು. ಒಂದು ವೇಳೆ ವಿವರ ಕೊಡ ದಿದ್ದರೆ ಏನು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ಆಸ್ತಿ ವಿವರದಲ್ಲಿ ಪ್ರಸ್ತಾಪಿಸಿದ ಹಣ, ಆಸ್ತಿ ಎಲ್ಲಿಂದ ಬಂತು ಎಂಬ ವಿಚಾರಣೆ ಮಾಡದಿದ್ದರೆ ಉದ್ಧೇಶವೇ ಸಾರ್ಥಕವಾಗುವುದಿಲ್ಲ. ಜನರಿಗೆ ವಂಚನೆ ಮಾಡುವ ಅವಕಾಶ ಇರಬಾರದು. ಇಂತಹ ಕಾಯ್ದೆಗಳನ್ನು ಬಲಗೊಳಿಸಬೇಕೆಂದು ಸಲಹೆ ಮಾಡಿದರು.