ಬೆಂಗಳೂರು, ಜು.29-ಅನರ್ಹಗೊಂಡ ಅತೃಪ್ತ ಶಾಸಕರು ಕಾಂಗ್ರೆಸ್ ನಾಯಕರ ವಿರುದ್ಧ ಮುಗಿಬಿದ್ದಿದ್ದಾರೆ. ನಿನ್ನೆ ಸ್ಪೀಕರ್ ರಮೇಶ್ಕುಮಾರ್ ಅವರು 14 ಶಾಸಕರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಮುಂಬೈನಿಂದ ಹಿಂದಿರುಗಿರುವ ಎಸ್.ಟಿ.ಸೋಮಶೇಖರ್, ಭೈರತಿ ಬಸವರಾಜ್, ಎಂ.ಟಿ.ಬಿ.ನಾಗರಾಜ್, ಮುನಿರತ್ನ ಮತ್ತಿತರರು ನಾವ್ಯಾರು ಹಣದ ಆಸೆಗಾಗಿ ರಾಜೀನಾಮೆ ಕೊಟ್ಟಿರಲಿಲ್ಲ. ಕ್ಷೇತ್ರದ ಅಭಿವೃದ್ಧಿ ಕಡೆಗಣಿಸಿದ್ದಕ್ಕಾಗಿ ರಾಜೀನಾಮೆ ನೀಡಿದ್ದೆವು. ಆದರೆ ರಾಜೀನಾಮೆ ಅಂಗೀಕರಿಸುವುದರ ಬದಲು ಅನರ್ಹಗೊಳಿಸಿರುವುದು ಕಾನೂನು ಬಾಹಿರ. ಇದರ ವಿರುದ್ಧ ಸುಪ್ರೀಂಕೋರ್ಟ್ನ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.
ಎಸ್.ಟಿ.ಸೋಮಶೇಖರ್ ಮಾತನಾಡಿ, ರಾಜಕೀಯ ಮೇಲಾಟ ಸಾಕಾಗಿ ಹೋಗಿದೆ. ತಮ್ಮ ಕ್ಷೇತ್ರದಲ್ಲಿ ಬೆಂಬಲಿಗರು, ಕಾರ್ಯಕರ್ತರ ಸಭೆ ಕರೆದು ಚರ್ಚಿಸಿದ ಬಳಿಕ ರಾಜಕೀಯ ನಿವೃತ್ತಿ ಘೋಷಿಸುವುದಾಗಿ ತಿಳಿಸಿದರು.
ಮೈತ್ರಿ ಸರ್ಕಾರ ಪತನವಾಗಬೇಕೆಂಬುದು ಕಾಂಗ್ರೆಸ್ ಪಕ್ಷದ ಬಹುತೇಕ ನಾಯಕರ ಇಚ್ಛೆಯಾಗಿತ್ತು. ಆದರೂ ಆ ನಾಯಕರೇ ವಿಧಾನಸಭೆಯಲ್ಲಿ ಸರ್ಕಾರ ಉಳಿಸುವ ಪ್ರಯತ್ನ ಮಾಡುವ ಗೋಸುಂಬೆತನ ತೋರಿದ್ದಾರೆ ಎಂದು ಆರೋಪಿಸಿದರು.
ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ಪ್ರಳಯವಾದರೂ ನಮ್ಮನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ಬಳ್ಳಾರಿ ಪಾದಯಾತ್ರೆ ಸಂದರ್ಭ ಮರೆತು ತಮ್ಮ ಪಟಾಲಂ ಮಾತು ಕೇಳುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮನ್ನು ಬೆದರಿಸುವಂತೆ ಕೆಲವು ಕಾಂಗ್ರೆಸ್ ನಾಯಕರು ವಿಧಾನಸಭೆಯಲ್ಲಿ ರಣಧೀರರಂತೆ ಮಾತನಾಡಿದ್ದಾರೆ. ಚುನಾವಣೆ ರಣರಂಗದಲ್ಲಿ ಭೇಟಿ ಮಾಡುವುದಾಗಿ ಹೇಳಿದ್ದಾರೆ, ಅವರನ್ನು ರಣರಂಗದಲ್ಲೇ ಸ್ವಾಗತಿಸುತ್ತೇವೆ ಎಂದರು.
ಕಾಂಗ್ರೆಸ್ ಪಕ್ಷದ ಋಣ ತೀರಿಸಲು ನಮ್ಮನ್ನು ಅನರ್ಹಗೊಳಿಸಲಾಗಿದೆ. ಈ ತೀರ್ಪನ್ನು ಮೊದಲೇ ಊಹಿಸಿದ್ದೆವು. ಈಗಾಗಲೇ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಕಾನೂನು ಹೋರಾಟ ಮಾಡುತ್ತೇವೆ. ನಂಬಿಕೆ ದ್ರೋಹಕ್ಕೆ ಮತ್ತೊಂದು ಹೆಸರೇ ಮಾಜಿ ಸಚಿವ ಕೃಷ್ಣಭೆರೇಗೌಡ. ಸದನದಲ್ಲಿ ನಮ್ಮನ್ನು ಕುರಿತು ಅವರು ಮಾತನಾಡಿರುವುದನ್ನು ಗಮನಿಸಿದ್ದೇನೆ. ಅವರು ಜೆಡಿಎಸ್ ಬೆನ್ನಿಗೆ ಚೂರಿ ಹಾಕಿ ಕಾಂಗ್ರೆಸ್ಗೆ ಬಂದಿದ್ದರು ಎಂದು ಆರೋಪಿಸಿದರು.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಮಾತಿನಂತೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದಾರೆಯೇ ಹೊರತು ಅವರ ಸೋಲಿಗೆ ನಾವು ಕಾರಣರಲ್ಲ ಎಂದು ಸ್ಪಷ್ಟಪಡಿಸಿದರು.
ಎಂ.ಟಿ.ಬಿ.ನಾಗರಾಜ್ ಮಾತನಾಡಿ, ಹಣ ಪಡೆದು ಪಕ್ಷಕ್ಕೆ ದ್ರೋಹ ಬಗೆದಿದ್ದಾರೆ ಎಂಬ ಮಾತು ಸತ್ಯಕ್ಕೆ ದೂರವಾದ ವಿಷಯ. ರಾಜೀನಾಮೆ ನೀಡಿರುವವರು ಯಾರೂ ಬಡವರಲ್ಲ. ಕ್ಷೇತ್ರಕ್ಕೆ ಅನುದಾನಗಳು ಸರಿಯಾಗಿ ಹಣ ಹಂಚಿಕೆಯಾಗಿಲ್ಲ. ಹೀಗಾಗಿ ಬೇಸರಗೊಂಡು ರಾಜೀನಾಮೆ ನೀಡಿದ್ದೆಯೇ ಹೊರತು ಯಾವುದೇ ಆಮಿಷಗಳಿಗೆ ಬಲಿಯಾಗಿಲ್ಲ. ಸಿದ್ದರಾಮಯ್ಯನವರ ಒತ್ತಡದ ಮೇಲೆ ನಮ್ಮನ್ನು ಅನರ್ಹಗೊಳಿಸಿರಬಹುದು. ನಾವು ಕಾನೂನು ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಕ್ಷೇತ್ರದ ಅಭಿವೃದ್ಧಿ , ಶಾಶ್ವತ ಕುಡಿಯುವ ನೀರಿನ ಯೋಜನೆ, ಕೆರೆ ನೀರು ತುಂಬುವ ಯೋಜನೆಗಳ ಬಗ್ಗೆ ಸಾಕಷ್ಟು ಮನವಿಗಳನ್ನು ಸಲ್ಲಿಸಿದ್ದೆ. ಆದರೆ ಮುಖ್ಯಮಂತ್ರಿಗಳು ಯಾವುದಕ್ಕೂ ಸ್ಪಂದಿಸಲಿಲ್ಲ ಎಂದು ಆರೋಪಿಸಿದರು.
ತಮ್ಮ ಮಗನ ಭವಿಷ್ಯಕ್ಕೆ ತಾವು ರಾಜೀನಾಮೆ ನೀಡಿದ್ದೀರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನನ್ನ ಮಗ ಸ್ವತಂತ್ರನಿದ್ದಾನೆ. ಅವರು ಯಾವುದೇ ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದರು.
ಡಿಕೆಶಿ ರಣರಂಗದಲ್ಲಿ ನೋಡಿಕೊಳ್ಳುವುದಾಗಿ ಸವಾಲು ಹಾಕಿದ್ದಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಸವಾಲನ್ನು ಸಂತೋಷವಾಗಿ ಸ್ವೀಕರಿಸುತ್ತೇನೆ ಎಂದರು.
ನಿಮ್ಮ ಮಗ ಬಿಜೆಪಿಯಿಂದ ಸ್ಪರ್ಧಿಸಲಿದ್ದಾರೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿಯೋ, ಜೆಡಿಎಸ್ ಅಥವಾ ಸ್ವತಂತ್ರವಾಗಿಯೋ ಮುಂದೆ ನೋಡೋಣ ಎಂದು ಹೇಳಿದರು.
ಮುನಿರತ್ನ ಮಾತನಾಡಿ ನಾನು ಯಾವುದೇ ಆಪರೇಷನ್ ಕಮಲಕ್ಕೆ ಒಳಗಾಗಿರಲಿಲ್ಲ. ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ಕೊಡುವಂತೆ ಸಾಕಷ್ಟು ಬಾರಿ ಮನವಿ ಮಾಡಿದ್ದೆವು. ಆದರೆ ಇದಕ್ಕೆ ಯಾರೂ ಕಿವಿಗೊಡಲಿಲ್ಲ. ಸಮ್ಮಿಶ್ರ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಲಿಲ್ಲ. ಹಾಗಾಗಿ ರಾಜೀನಾಮೆ ನೀಡಿದ್ದೇವೆ. ನಮ್ಮನ್ನು ಅನರ್ಹಗೊಳಿಸಲಾಗಿದೆ. ನಮಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದರು.
ನಾವು ಸತ್ತ ಮೇಲೆ ಯಾರು ಪಲ್ಲಕ್ಕಿ ಹೊರುತ್ತಾರೋ ನೋಡಬೇಕು, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಸದ್ಯದಲ್ಲೆ ಬಹಿರಂಗಪಡಿಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಅವರಿಗೆ ಟಾಂಗ್ ನೀಡಿದರು.