ಬೆಂಗಳೂರು, ಜು.29-ವಿಧಾನಸಭಾಧ್ಯಕ್ಷ ರಮೇಶ್ಕುಮಾರ್ ಅವರು ಶಾಸಕರನ್ನು ಅನರ್ಹಗೊಳಿಸಿ ನೀಡಿರುವ ತೀರ್ಪನ್ನು ಬಿಜೆಪಿ ವಿರೋಧಿಸುತ್ತಿರುವುದು ಸರಿಯಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭಾಧ್ಯಕ್ಷರ ತೀರ್ಪಿನಿಂದ ಪಕ್ಷಾಂತರಿಗಳಿಗೆ ತಕ್ಕ ಶಾಸ್ತಿಯಾಗಿದೆ. ಸಭಾಧ್ಯಕ್ಷರ ಈ ತೀರ್ಪನ್ನು ಶ್ಲಾಘನೆ ಮಾಡಬೇಕಿತ್ತು. ಅದನ್ನು ಬಿಟ್ಟು ವಿರೋಧಿಸುತ್ತಿದ್ದಾರೆ. ಬಿಜೆಪಿಯವರು ಏಕೆ ಅಷ್ಟು ಕಾಳಜಿ ವಹಿಸುತ್ತಿದ್ದಾರೆ ಎಂಬುದು ತಿಳಿಯಲಿಲ್ಲ ಎಂದು ಟೀಕಿಸಿದರು.
ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಆಗಿನ ಸಭಾಧ್ಯಕ್ಷರು ಕಾನೂನು ಬಾಹಿರ ಕ್ರಮಕೈಗೊಂಡಿದ್ದರು. ಈಗ ಬಿಜೆಪಿಯವರಿಗೆ ಯಾವ ನೈತಿಕತೆಯೂ ಉಳಿದಿಲ್ಲ. ವಿಧಾನಸಭೆ ಅಧಿವೇಶನದಲ್ಲಿ ವಿಪ್ ಬಗ್ಗೆ ಪ್ರಸ್ತಾಪ ಮಾಡುತ್ತಾರೆ. ಆದರೆ ಅವರೇ ಈಗ ತಮ್ಮ ಶಾಸಕರಿಗೆ ವಿಪ್ ನೀಡಿದ್ದಾರೆ. ಕಾಂಗ್ರೆಸ್ ವಿಪ್ನ್ನು ಪ್ರಶ್ನಿಸುತ್ತಿದ್ದರು. ಅವರಿಗೆ ಯಾವ ನಿಯಮವೂ ಬೇಕಿಲ್ಲ. ಕುರ್ಚಿಯಾಸೆ ಅಷ್ಟೇ ಎಂದರು.
ವಿಪ್ ಬಗ್ಗೆ ಚರ್ಚಿಸುತ್ತಿದ್ದ ಬಿಜೆಪಿಯವರು ಈಗ ಏಕೆ ತಮ್ಮ ಶಾಸಕರಿಗೆ ವಿಪ್ ನೀಡಿದ್ದಾರೆ ಎಂದು ಪ್ರಶ್ನಿಸಿದರು.
ಕೇವಲ ಮುಖ್ಯಮಂತ್ರಿಯಾಗುವುದೊಂದೇ ಆಸೆಯಲ್ಲ, ನಿಯಮಾವಳಿಗಳನ್ನು ಪಾಲನೆ ಮಾಡಬೇಕು. ಕೇಂದ್ರ ಸಚಿವ ಸದಾನಂದಗೌಡರು ವಿಧಾನಸಭಾಧ್ಯಕ್ಷರ ತೀರ್ಪಿನ ಬಗ್ಗೆ ನೀಡಿರುವ ಹೇಳಿಕೆಯನ್ನು ಸ್ವಾಗತಿಸುವುದಾಗಿ ಹೇಳಿದರು.