ಹುಬ್ಬಳ್ಳಿ: ನಾರದರು ಸುದ್ದಿಯನ್ನು ಸಪ್ತ ಲೋಕಕ್ಕೆ ತಲುಪಿಸುವ ಮೂಲಕ ಲೋಕಹಿತ ಹಾಗೂ ಸಮಾಜವನ್ನು ತಿದ್ದುವ ಕಾರ್ಯವನ್ನು ಮಾಡುವ ಮೂಲಕ ಪ್ರಪಂಚದ ಮೊದಲ ಪತ್ರಕರ್ತರಾಗಿದ್ದಾರೆ ಎಂದು ಹಿರಿಯ ಪತ್ರಕರ್ತರು, ಅಂಕಣಕಾರರಾದ ದು ಗು ಲಕ್ಷ್ಮಣ ಹೇಳಿದರು.
ನಗರದ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಂಗಣದಲ್ಲಿ ಲೋಕಹಿತ ಟ್ರಸ್ಟ್ (ರಿ) ಹುಬ್ಬಳ್ಳಿ ವತಿಯಿಂದ ಆಯೋಜಿಸಲಾಗಿದ್ದ ಆದ್ಯ ಪತ್ರಕರ್ತ ನಾರದರ ಜಯಂತಿ ಮತ್ತು ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಸುವರ್ಣ ನ್ಯೂಸ್ ವಾಹಿನಿಯ ನಿರೂಪಕರಾದ ಅಜಿತ್ ಹನುಮಕ್ಕನವರ, ಹಾಗೂ ಹಿರಿಯ ಪತ್ರಕರ್ತರಾದ ನಾರಾಯಣ ಘಳಗಿ ಅವರಿಗೆ ಲೋಕಹಿತ ಟ್ರಸ್ಟ್, ಹುಬ್ಬಳ್ಳಿಯ ವತಿಯಿಂದ ಇಂದು ನಾರದ ಜಯಂತಿಯ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಹಿರಿಯ ಪತ್ರಕರ್ತರಾದ ದು ಗು ಲಕ್ಷ್ಮಣ ಮಾತನಾಡುತ್ತಿದ್ದರು.
ಆರಂಭಿಸಿದ ಹರ್ಮನ್ ಮೊಗ್ಲಿಂಗ್ ಜುಲೈ 1ರಂದು 1843 ರಲ್ಲಿ ಮಂಗಳೂರು ಸಮಾಚಾರ ಪತ್ರಿಕೆಯನ್ನು ಆರಂಭಿಸಿದ ದಿನವನ್ನು ಪತ್ರಿಕಾ ದಿನಾಚರಣೆಯಾಗಿ ಆಚರಿಸಲಾಗುತ್ತಿದೆ. ಬದಲಾಗಿ ಆದ್ಯ ಪತ್ರಕರ್ತ ನಾರದರ ಜಯಂತಿಯನ್ನು ಪತ್ರಿಕಾ ದಿನಾಚರಣೆಯಾಗಿ ಆಚರಿಸುವುದು ಹೆಚ್ಚು ಸೂಕ್ತ ಎಂದು ದು ಗು ಲಕ್ಷ್ಮಣ ಅಭಿಪ್ರಾಯಪಟ್ಟರು. ಕನ್ನಡದ ಪತ್ರಿಕಾರಂಗದಲ್ಲಿ ಹಲವಾರು ಹೆಸರಾಂತ ಪತ್ರಕರ್ತರು ತಮ್ಮ ಜೀವನವನ್ನೇ ಮುಡಿಪಾಗಿಟ್ಟು ಸೇವೆ ಸಲ್ಲಿಸಿದ್ದಾರೆ. ಡಿ.ವಿ.ಜಿ., ಕೆ.ಶಾಮರಾಯರು ,ಮೊಹರೇ ಹನಮಂತರಾಯರಂಥ ಮಹಾನ್ ಪತ್ರಿಕಾ ಮೇಧಾವಿಗಳನ್ನು ನೆನೆಯುವುದರ ಮೂಲಕ ಪತ್ರಿಕಾ ದಿನಾಚರಣೆ ಆಚರಿಸಲು ಮುಂದಾಗಬೇಕು ಎಂದರು.ದೇಶವನ್ನು ಸನ್ಮಾರ್ಗದತ್ತ ನಡೆಸುವ ಕಾರ್ಯ ಪತ್ರಿಕೆಗಳ ಕಾರ್ಯವಾಗಿದ್ದು ಕೇವಲ ಟೀಕೆ ಟಿಪ್ಪಣಿಗಳನ್ನು ಮಾಡದೆ ಸದಾ ಕಾಲ ಲೋಕಹಿತಕ್ಕಾಗಿ ಪತ್ರಕರ್ತರು ಕಾರ್ಯನಿರ್ವಹಿಸಬೇಕಾಗಿದೆ. ಪತ್ರಿಕೆಗಳು ಇರುವುದು ಸತ್ಯದ ಪ್ರತಿಪಾದನೆಗಾಗಿಯೇ ಹೊರತು ಸುಳ್ಳು ಸುದ್ಧಿಗಳನ್ನು ಹಬ್ಬಿಸುವುದಕ್ಕಲ್ಲ ಎಂದರು.
ಲೋಕಹಿತ ಟ್ರಸ್ಟ್ ನ ಕಾರ್ಯದರ್ಶಿಗಳಾದ ಶ್ರೀಧರ್ ನಾಡಗೀರ್ ಮಾತನಾಡಿ 2004 ರಲ್ಲಿ ಆರಂಭವಾದ ಟ್ರಸ್ಟ್ ಹತ್ತು ಹಲವು ಸಾಮಾಜಿಕ,ಶೈಕ್ಷಣಿಕ, ಆರೋಗ್ಯ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಅವರನ್ನು ಸತ್ಕರಿಸುತ್ತ ಬಂದಿದೆ.ಸೇವೆಗೆ ಅರ್ಹರಾದ ವ್ಯಕ್ತಿಗಳು ಅಧಿಕವಾಗಿದ್ದು ಮಾನವ ಸೇವೆಯೇ ಮಾಧವ ಸೇವೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸುವರ್ಣ ನ್ಯೂಸ್ ನಿರೂಪಕರಾದ ಅಜಿತ್ ಹನುಮಕ್ಕನವರ್ ಮಾತನಾಡಿ ಇಂದಿನ ಆಧುನಿಕ ದಿನಗಳಲ್ಲಿ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮ ವಿಸ್ತಾರವಾಗಿದ್ದು,ಯುವಕ ಯುವತಿಯರು ಪತ್ರಿಕೋದ್ಯಮ ಶಿಕ್ಷಣ ಪೂರೈಸಿ ಅದಕ್ಕೆ ಪೂರಕವಾದ ವಿಚಾರ ವಿಷಯಗಳನ್ನು ಅಭ್ಯಸಿಸಿದ್ದಾದರೆ ಯಶಸ್ಸು ಕಾಣಬಹುದು.ಹಾಗೆ ಇಂದಿನ ದಿನಗಳಲ್ಲಿ ವೃತ್ತಿ ಹಾಗೂ ಪ್ರವೃತ್ತಿ ಒಂದೇ ಆದರೆ ಬದುಕು ಕೂಡ ಸುಲಭ ಹಾಗೂ ನೆಮ್ಮದಿಯ ಬದುಕನ್ನು ನಡೆಸಲು ಸಾಧ್ಯ ಎಂದರು.ಹಾಗೆ ಹುಬ್ಬಳ್ಳಿಯಲ್ಲಿನ ತಮ್ಮ ಬಾಲ್ಯದ ದಿನಗಳನ್ನು ಕೂಡ ಮೆಲುಕು ಹಾಕಿಕೊಂಡರು.
ತೆರಿಗೆ ಇಲಾಖೆಯ ನಿವೃತ್ತ ಉಪ ಆಯುಕ್ತರಾದ ಗೋವಿಂದಪ್ಪ ಗೌಡಪ್ಪಗೋಳ ಅಧ್ಯಕ್ಷೀಯ ಭಾಷಣ ಮಾಡಿದರು.ನಗರದ ಪತ್ರಿಕೋದ್ಯಮ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.