ಬೆಂಗಳೂರು: ಈಗಾಗಲೇ ಮೂವರು ಅತೃಪ್ತ ಶಾಸಕರನ್ನು ಅನರ್ಹಗೊಳಿಸಿ ಸ್ಪೀಕರ್ ರಮೇಶ್ ಕುಮಾರ್ ತೀರ್ಪು ನೀಡಿದ್ದಾರೆ. ಇದೀಗ ಉಳಿದ ಅತೃಪ್ತ ಶಾಸಕರನ್ನೂ ಅನರ್ಹಗೊಳಿಸುವ ಮೂಲಕ ರೆಬೆಲ್ಸ್ಗೆ ಶಾಕ್ ನೀಡಿದ್ದಾರೆ.
ಈಗಾಗಲೇ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಶಾಸಕರನ್ನು ಅನರ್ಹಗೊಳಿಸುವಂತೆ ಮನವಿ ಮಾಡಿದ್ದಾರೆ. ಆ ದೂರನ್ನು ಪರಿಶೀಲಿಸಿ ಈಗಾಗಲೇ ಮೂವರನ್ನು ಅನರ್ಹಗೊಳಿಸಲಾಗಿದೆ. ಉಳಿದ ಎಲ್ಲ ಶಾಸಕರನ್ನೂ ಇಂದಿನಿಂದ ಈ ವಿಧಾನಸಭಾ ಅವಧಿ ಮುಗಿಯುವವರೆಗೆ ಅನರ್ಹಗೊಳಿಸಲಾಗಿದೆ ಎಂದು ಆದೇಶ ನೀಡುವ ಮೂಲಕ ಶಾಕ್ ನೀಡಿದ್ದಾರೆ.
ಪ್ರತಾಪ್ ಗೌಡ ಪಾಟೀಲ್, ಶಿವರಾಮ್ ಹೆಬ್ಬಾರ್, ಡಾ. ಸುಧಾಕರ್, ಎಂಟಿಬಿ ನಾಗರಾಜ್, ಭೈರತಿ ಬಸವರಾಜ್, ಬಿ.ಸಿ. ಪಾಟೀಲ್ ಸೇರಿದಂತೆ ರಾಜೀನಾಮೆ ನೀಡಿರುವ ಎಲ್ಲ ಶಾಸಕರನ್ನೂ ಅನರ್ಹಗೊಳಿಸಿರುವುದಾಗಿ ಸ್ಪೀಕರ್ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಸ್ಪೀಕರ್ ರಮೇಶ್ ಕುಮಾರ್, ಜುಲೈ 31ರೊಳಗೆ ಧನವಿಯೋಗ ಮಸೂದೆ ಪಾಸಾಗಬೇಕು. ಬಹುಮತ ಯಾಚನೆ ಮಾಡಲು ಸೋಮವಾರ ಸದನ ನಡೆಸಬೇಕು ಎಂದು ನೂತನ ಸಿಎಂ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ. ನಾಳೆ ಧನವಿನಿಯೋಗ ಮಸೂದೆ ಮೇಲೆ ಚರ್ಚೆ, ಪರಿಶೀಲನೆ ಹಾಗೂ ವಿಶ್ವಾಸ ಮತಯಾಚನೆ ಕೂಡ ನಡೆಯಲಿದೆ. ನಮ್ಮ ಕಾರ್ಯಾಲಯದ ಸಿಬ್ಬಂದಿ ಇಂದು ಹಾಗೂ ನಿನ್ನೆಯೂ ಕೆಲಸ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.
ಇಂದು ಮುಂಜಾನೆ ಕೊನೆಯುಸಿರೆಳೆದ ಕೇಂದ್ರದ ಮಾಜಿ ಸಚಿವ ಜೈಪಾಲ್ ರೆಡ್ಡಿ ಅವರನ್ನು ನೆನೆದು ಸ್ಪೀಕರ್ ರಮೇಶ್ ಕುಮಾರ್ ಭಾವುಕರಾಗಿದರು. ನನ್ನ ವೈಯಕ್ತಿಕ ಜೀವನದಲ್ಲಿ ಜೈಪಾಲ್ ರೆಡ್ಡಿ ಅವರ ಪ್ರಭಾವ ಅತ್ಯಂತ ಹೆಚ್ಚಾಗಿದೆ. ನನ್ನ ರಾಜಕೀಯ ಜೀವನಕ್ಕೆ ಅವರ ಕೊಡುಗೆ ಅಪಾರ. ಅವರಂತಹ ವ್ಯಕ್ತಿ ಈ ದೇಶದಲ್ಲಿದ್ದರಾ? ಎಂಬ ಆಶ್ಚರ್ಯ ಉಂಟಾಗುತ್ತದೆ ಎಂದಿದ್ದಾರೆ.