ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಪೀಡಿತ ಮಕ್ಕಳನ್ನು ಅಭಿನಂದಿಸಿದ ಪ್ರಧಾನಿ ಮೋದಿ;ಅಭಿವೃದ್ಧಿಯೂ ಬುಲೆಟ್ ಮತ್ತು ಬಾಂಬ್‍ಗಳಿಗಿಂತ ಶಕ್ತಿಯುತ-ಪ್ರಧಾನಿ ಮೋದಿ

ನವದೆಹಲಿ, ಜು.28- ಜಲಸಂರಕ್ಷಣೆ ಮತ್ತು ಸ್ವಚ್ಛ ಭಾರತ ಅಭಿಯಾನವನ್ನು ಮತ್ತಷ್ಟು ಯಶಸ್ವಿಗೊಳಿಸಲು ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.

ಪ್ರತಿ ತಿಂಗಳ ಕೊನೆಯ ಭಾನುವಾರ ಆಕಾಶವಾಣಿಯಲ್ಲಿ ಪ್ರಸಾರವಾಗುವ ಜನಪ್ರಿಯ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ರಧಾನಿಯವರು ಹತ್ತು ಹಲವು ವಿಷಯಗಳನ್ನು ಪ್ರಸ್ತಾಪಿಸಿದರು.

ಜಲಸಂರಕ್ಷಣೆ ಬಗ್ಗೆ ದೇಶದ ಜನರಲ್ಲಿ ಜಾಗೃತಿ ಮೂಡಿದೆ. ಇದನ್ನು ಮತ್ತಷ್ಟು ಯಶಸ್ವಿಗೊಳಿಸಲು ಬೀದಿ ನಾಟಕಗಳು, ಗ್ರಾಮ ಮತ್ತು ಪಟ್ಟಣ ಪ್ರದೇಶಗಳನ್ನು ನಡೆಯುವ ಜಾತ್ರೆ, ಇತರ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲೂ ಈ ಬಗ್ಗೆ ಅರಿವು ಮೂಡಿಸಬೇಕು ಎಂದು ಮನವಿ ಮಾಡಿದರು.

ಸ್ವಚ್ಛ ಭಾರತ ಆಂದೋಲನಕ್ಕೆ 130 ಕೋಟಿ ಜನ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಆದರೆ ಇಷ್ಟಕ್ಕೆ ತೃಪ್ತಿಪಟ್ಟು ಕೊಳ್ಳದೆ ಈ ಅಭಿಯಾನವನ್ನು ಮುಂದುವರೆಸಬೇಕೆಂದು ಅವರು ದೇಶದ ಜನರಲ್ಲಿ ಮನವಿ ಮಾಡಿದರು.

ಮಾಸ್ಕೋದಲ್ಲಿ ಇತ್ತೀಚೆಗೆ ನಡೆದ ಮಕ್ಕಳ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಕ್ಯಾನ್ಸರ್ ಪೀಡಿತ ಮಕ್ಕಳು ಅತ್ಯುತ್ತಮ ಪ್ರದರ್ಶನ ನೀಡಿ ಹಲವು ಪದಕಗಳನ್ನು ಗೆದ್ದು ಸಾಧನೆ ಮಾಡಿದ್ದಾರೆ. ಅವರೆಲ್ಲರನ್ನು ನಾನು ತುಂಬು ಹೃದಯದಿಂದ ಅಭಿನಂದಿಸುತ್ತೇನೆ ಎಂದು ಪ್ರಧಾನಿ ಹೇಳಿದರು.

ಕ್ಯಾನ್ಸರ್ ಎಂದರೆ ವಿಶ್ವವೇ ಹೆದರುತ್ತದೆ.ಆದರೆ ಈ ಮಕ್ಕಳು ಈ ಮಹಾ ಮಾರಿಗೆ ಹೆದರದೆ ಅದರ ವಿರುದ್ಧ ಹೋರಾಡುವ ಜತೆಗೆ ವಿಶ್ವ ಮಟ್ಟದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ವಿವಿಧ ಸ್ಪರ್ಧೆಗಳಲ್ಲಿ ಪದಕಗಳನ್ನು ಗಳಿಸಿದ್ದಾರೆ ಎಂದು ಮೋದಿ ಮೆಚ್ಚುಗೆ ಸೂಚಿಸಿದರು.

ವಿದ್ಯಾರ್ಥಿ ಸಮುದಾಯವನ್ನು ಉದ್ದೇಶಿಸಿ ಮಾತನಾಡಿದ ಮೋದಿ ತಮ್ಮ ನಮೋ ಆ್ಯಪ್ ಮೂಲಕ ಬಾಹ್ಯಾಕಾಶ, ವಿಜ್ಞಾನ-ತಂತ್ರಜ್ಞಾನ ಮತ್ತು ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಲು ಉದ್ದೇಶಿಸಲಾಗಿದೆ. ಈ ಬಗ್ಗೆ ಆ.1ರಂದು ಅಧಿಕೃತ ಪ್ರಕಟಣೆ ಹೊರಡಿಸಲಾಗುವುದು. ವಿಜೇತ ವಿದ್ಯಾರ್ಥಿಗಳನ್ನು ಶ್ರೀಹರಿ ಕೋಟಾದ ಬಾಹ್ಯಾಕಾಶ ಕೇಂದ್ರಕ್ಕೆ ಉಚಿತವಾಗಿ ಕರೆದೊಯ್ಯಲಾಗುವುದು ಎಂದರು.

ಅದೇ ರೀತಿ ನಮೋ ಆ್ಯಪ್‍ನಲ್ಲಿ ಬುಕ್ ಕಾರ್ನರ್ ಎಂಬ ಹೊಸ ಅಂಕಣದ ಮೂಲಕ ಪುಸ್ತಕ ಓದುವ ಹವ್ಯಾಸ ಹೆಚ್ಚಿಸಲು ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮೋದಿ ಹೇಳಿದರು.

ಚಂದ್ರಯಾನ-2 ಯಶಸ್ವಿಯಾದ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಮೋದಿ ನಮ್ಮ ಸಾಧನೆ ಬಗ್ಗೆ ವಿವಿಧ ದೇಶಗಳಿಗೆ ಅನುಮಾನವಿತ್ತು.ಇಸ್ರೋ ವಿಜ್ಞಾನಿಗಳು ಎಲ್ಲಾ ಸವಾಲುಗಳನ್ನು ಮೆಟ್ಟಿ ಚಂದ್ರಯಾನ-2ನಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಶಂಸಿಸಿದರು.

ದೇಶದ ಕೆಲವೆಡೆ ಭಾರೀ ಮಳೆ , ಪ್ರವಾಹದಿಂದ ಜಲ ಸಂಕಷ್ಟ ಎದುರಾಗಿದೆ. ನಮ್ಮ ಯೋಧರು ಮತ್ತು ವಿಪತ್ತು ನಿರ್ವಹಣಾ ಕಾರ್ಯ ಪಡೆಗಳು ಸಮರ್ಥ ರೀತಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರವಾಹ ಸಂತ್ರಸ್ತರಿಗೆ ಅಗತ್ಯವಾದ ಎಲ್ಲಾ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧ ಎಂದು ಅವರು ತಿಳಿಸಿದರು.

ಈ ಬಾರಿ ಸ್ವಾತಂತ್ರ್ಯೋತ್ಸವವನ್ನು ಅತ್ಯಂತ ವಿಶೇಷ ರೀತಿಯಲ್ಲಿ ಆಚರಿಸಲು ಕೇಂದ್ರ ಸರ್ಕಾರ ಬಯಸಿದೆ. ಆ.15ರ ಭಾಷಣದಲ್ಲಿ ನಾನು ಪ್ರಸ್ತಾಪಿಸಬಹುದಾದ ಮಹತ್ವದ ಸಂಗತಿ ಮತ್ತು ವಿಷಯಗಳ ಬಗ್ಗೆ ದೇಶದ ಜನರಿಂದ ಅದರಲ್ಲೂ ವಿದ್ಯಾರ್ಥಿಗಳಿಂದ ನಾನು ಸಲಹೆ ಮತ್ತು ಅಭಿಪ್ರಾಯವನ್ನು ಕೋರುತ್ತಿದ್ದೇನೆ. ನನ್ನ ಆ್ಯಪ್ ಮೂಲಕ ಅವರು ಇದನ್ನು ಹಂಚಿಕೊಳ್ಳಬಹುದು ಎಂದು ಮೋದಿ ಹೇಳಿದರು.

ಅಮರನಾಥ ಯಾತ್ರೆ ಹಿಂದೆಂದಿಗಿಂತಲೂ ಈ ಬಾರಿ ಅತ್ಯಂತ ಯಶಸ್ವಿಯಾಗಿದೆ.ಮೂರು ಲಕ್ಷಕ್ಕೂ ಹೆಚ್ಚು ಯಾತ್ರಿಕರು ಗುಹಾಂತರ ದೇವಾಲಯಕ್ಕೆ ಭೇಟಿ ನೀಡಿ ಹಿಮಲಿಂಗ ದರ್ಶನ ಪಡೆದಿದ್ದಾರೆ. ಯಾತ್ರಿಕರಿಗೆ ನಮ್ಮ ಯೋಧರು ಭಾರೀ ರಕ್ಷಣೆ ನೀಡಿ ಅವರ ಸುರಕ್ಷತೆ , ಸೌಖ್ಯತೆಗೆ ಆದ್ಯತೆ ನೀಡಿದ್ದಾರೆ ಎಂದು ಮೋದಿ ಮೆಚ್ಚುಗೆ ಸೂಚಿಸಿದರು.

ಅಭಿವೃದ್ಧಿಯೂ ಬುಲೆಟ್ ಮತ್ತು ಬಾಂಬ್‍ಗಳಿಗಿಂತ ಶಕ್ತಿಯುತ-ಪ್ರಧಾನಿ ಮೋದಿ

ನವದೆಹಲಿ, ಜು.28-ಜಮ್ಮು ಮತ್ತು ಕಾಶ್ಮೀರದಲ್ಲಿ ದ್ವೇಷಕ್ಕೆ ಪ್ರಚೋದನೆ ನೀಡುತ್ತಾ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುತ್ತಿರುವ ಮಂದಿ ಎಂದಿಗೂ ಸಫಲರಾಗುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಅಭಿವೃದ್ಧಿಯೂ ಬುಲೆಟ್ ಮತ್ತು ಬಾಂಬ್‍ಗಳಿಗಿಂತ ಶಕ್ತಿಯುತ ಎಂಬುದನ್ನು ನಾವು ಸಾಬೀತು ಮಾಡಲಿದ್ದೇವೆ ಎಂದು ಮೋದಿ ಮನ್ ಕೀ ಬಾತ್ ಬಾನುಲಿ ಭಾಷಣದಲ್ಲಿ ಸಾರಿದ್ದಾರೆ.

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಮರಳಿ ಗ್ರಾಮಕ್ಕೆ ಎಂಬ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರ ಯಶಸ್ವಿಯಾಗಿ ಅನುಷ್ಟಾನಗೊಳಿಸುತ್ತಿದೆ. ಈ ರಾಜ್ಯದ ಕುಗ್ರಾಮ ಮತ್ತು ದೂರದ ಪ್ರದೇಶಗಳಿಗೆ ಅಧಿಕಾರಿಗಳು ತೆರಳಿ ಹಲವು ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಇದಕ್ಕೆ ಗ್ರಾಮಸ್ಥರಿಂದ ಅದ್ಭುತ ಪ್ರತಿಕ್ರಿಯೆ ಲಭಿಸುತ್ತಿದೆ ಎಂದು ಮೋದಿ ಹೇಳಿದರು.

ಕಾಶ್ಮೀರ ಜನತೆ ಹಿಂಸಾಚಾರ, ರಕ್ತಪಾತ ಬಯಸುವುದಿಲ್ಲ. ಅವರೆಲ್ಲರೂ ಅಭಿವೃದ್ಧಿ ಪತದತ್ತ ಸಾಗುವ ಮನಸು ಮಾಡಿದ್ದಾರೆ. ಇದಕ್ಕೆ ಅವರು ಸ್ಪಂದಿಸುತ್ತಿರುವ ರೀತಿಯೇ ಸಾಕ್ಷಿಯಾಗಿದೆ.

ಸರ್ಕಾರದ ಪ್ರಗತಿ ಕಾರ್ಯಕ್ರಮಗಳು ಉಗ್ರರ ಬುಲೆಟ್ ಮತ್ತು ಬಾಂಬ್‍ಗಳಿಗಿಂತಲೂ ಬಲಿಷ್ಠವಾಗಿದೆ ಎಂದು ಪ್ರಧಾನಿ ವ್ಯಾಖ್ಯಾನಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ