ಧನವಿನಿಯೋಗ ವಿಧೇಯಕವನ್ನು ಅಂಗೀಕಾರಗೊಳಿಸುವುದು ನನ್ನ ಕರ್ತವ್ಯ-ಸ್ಪೀಕರ್ ರಮೇಶ್‍ಕುಮಾರ್

ಬೆಂಗಳೂರು, ಜು.28- ರಾಜ್ಯ ಧನವಿನಿಯೋಗ ವಿಧೇಯಕವನ್ನು ಅಂಗೀಕಾರಗೊಳಿಸುವುದು ವಿಧಾನಸಭಾಧ್ಯಕ್ಷನಾದ ನನ್ನ ಕರ್ತವ್ಯ.ಹಾಗಾಗಿ ನಾಳೆ ನಡೆಯುವ ಕಲಾಪದಲ್ಲಿ ನಾನು ಸ್ಪೀಕರ್ ಸ್ಥಾನದಲ್ಲಿ ಕೂರುತ್ತೇನೆ ಎಂದು ಕೆ.ಆರ್.ರಮೇಶ್‍ಕುಮಾರ್ ಅವರು ಸ್ಪಷ್ಟಪಡಿಸಿದ್ದಾರೆ.

ಶಾಸಕರ ಭವನದಲ್ಲಿ ನಡೆದ ತುರ್ತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ವಿಧಾನಸಭೆಯಲ್ಲಿ ಸರ್ವಾನುಮತದಿಂದ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ಹಾಗಾಗಿ ಹಣಕಾಸು ಮಸೂದೆಯನ್ನು ಅಂಗೀಕಾರ ಮಾಡುವುದು ನನ್ನ ಕರ್ತವ್ಯ.ನಾಳೆ ಸಭೆಯ ಅಧ್ಯಕ್ಷತೆ ವಹಿಸುತ್ತೇನೆ. ಆನಂತರದ ಬೆಳವಣಿಗೆಗಳನ್ನು ನೀವೇ ಖುದ್ದು ನೋಡುತ್ತೀರಾ.ನಾಳೆ ನಾನು ಅಧಿವೇಶನದಲ್ಲಿ ಮಾತನಾಡುವುದು ತುಂಬಾ ಇದೆ ಎಂದು ಹೇಳಿದರು.

ಕಳೆದ ಜುಲೈ 23ರಂದು ನಾನು ರಾಜೀನಾಮೆ ಪತ್ರವನ್ನು ಜೇಬಿನಲ್ಲಿ ಇಟ್ಟುಕೊಂಡಿದ್ದು ನಿಜ. ಏಕೆಂದರೆ ವಿಶ್ವಾಸಮತಯಾಚನೆ ವಿಳಂಬವಾಗುತ್ತಿದೆ ಎಂಬ ಕಾರಣಕ್ಕಾಗಿ ಜನ ನನ್ನ ಬಗ್ಗೆ ತಪ್ಪಾಗಿ ತಿಳಿದಿದ್ದರು. ಅದರ ನೋವು ನನಗೆ ಗೊತ್ತು. ಹಾಗಾಗಿ ರಾಜೀನಾಮೆ ನೀಡಲು ಮುಂದಾಗಿದ್ದೆ. ಅದರಲ್ಲಿ ಯಾವುದೇ ನಾಟಕ ಇರಲಿಲ್ಲ ಎಂದು ಆಕ್ರೋಶಿತರಾಗಿ ನುಡಿದರು.

ಕಾಂಗ್ರೆಸ್‍ನ ಹಿರಿಯ ನಾಯಕ ಜೈಪಾಲ್‍ರೆಡ್ಡಿ ಅವರ ನಿಧನಕ್ಕೆ ಇದೇ ಸಂದರ್ಭದಲ್ಲಿ ದುಃಖ ವ್ಯಕ್ತಪಡಿಸಿ ಒಂದು ಹಂತದಲ್ಲಿ ಕಣ್ಣೀರು ಹಾಕಿದರು.

ಅತ್ಯಂತ ಪ್ರಾಮಾಣಿಕ ರಾಜಕಾರಣಿ, ಉತ್ತಮ ಸಂಸದೀಯ ಪಟು ಮತ್ತು ವಿಶ್ವಾಸಾರ್ಹ ವ್ಯಕ್ತಿಯಾಗಿದ್ದ ಜೈಪಾಲರೆಡ್ಡಿ ಅವರು ನನಗೆ ಹಿರಿಯಣ್ಣನಂತೆ ಮಾರ್ಗದರ್ಶನ ಮಾಡುತ್ತಿದ್ದರು.ಪಕ್ಷಾಂತರ ನಿಷೇಧ ಕಾಯ್ದೆ ಜಾರಿ ಸಂದರ್ಭದಲ್ಲಿ ಸದನದಲ್ಲಿ ಭಾಗವಹಿಸಿ ಮಾತನಾಡಿದ್ದರು ಎಂದು ಸ್ಮರಿಸಿದರು.

ನಾಳೆ ಅಧಿವೇಶನ:
ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಯಡಿಯೂರಪ್ಪ ಅವರ ವಿಶ್ವಾಸಮತಯಾಚನೆ ಮತ್ತು ಹಣಕಾಸು ಮಸೂದೆ ಅಂಗೀಕಾರಕ್ಕೆ ನಾಳೆ ಅಧಿವೇಶನ ಕರೆಯಲಾಗಿದೆ. ಕಡಿಮೆ ಅವಧಿಯಲ್ಲಿ ಅಧಿವೇಶನದ ತಯಾರಿ ಮಾಡಬೇಕಿರುವುದರಿಂದ ವಿಧಾನಮಂಡಲದ ಸಚಿವಾಲಯದ ಸಿಬ್ಬಂದಿಗಳು ಶನಿವಾರ ಮತ್ತು ಭಾನುವಾರದ ರಜಾ ದಿನಗಳಲ್ಲೂ ಕೆಲಸ ಮಾಡಿದ್ದಾರೆ.ಎಲ್ಲಾ ಶಾಸಕರಿಗೂ ಅಧಿವೇಶನದ ಮಾಹಿತಿಯ ಸೂಚನಾ ಪತ್ರವನ್ನು ರವಾನಿಸಲಾಗಿದೆ ಎಂದು ಸ್ಪೀಕರ್ ತಿಳಿಸಿದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ