
ನವದೆಹಲಿ : ಕಾಂಗ್ರೆಸ್ ಹಿರಿಯ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಎಸ್. ಜೈಪಾಲ್ ರೆಡ್ಡಿ ವಿಧಿವಶರಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ನ್ಯುಮೋನಿಯಾದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ 1.30ಕ್ಕೆ ಹೈದರಾಬಾದ್ನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಹೈದರಾಬಾದ್ನ ಪ್ರತಿಷ್ಠಿತ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದಾಗಲೇ ಜೈಪಾಲ್ ರೆಡ್ಡಿ ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರು. ಐ. ಕೆ. ಗುಜ್ರಾಲ್ ಸಂಪುಟದಲ್ಲಿ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವರಾಗಿ, ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಪೆಟ್ರೋಲಿಯಂ ಮತ್ತು ನಗರಾಭಿವೃದ್ಧಿ ಸಚಿವ ಸ್ಥಾನವನ್ನು ಜೈಪಾಲ್ ರೆಡ್ಡಿ ಅಲಂಕರಿಸಿದ್ದರು. 1984ರಿಂದ 5 ಬಾರಿ ಸಂಸದರಾಗಿ ಆಯ್ಕೆಯಾಗಿದ್ದ ಅವರು 2 ಬಾರಿ ರಾಜ್ಯಸಭೆಗೂ ಆಯ್ಕೆಯಾಗಿದ್ದರು. 1998ರಲ್ಲಿ ಅತ್ಯುತ್ತಮ ಸಂಸದೀಯಪಟು ಎಂಬ ಪ್ರಶಸ್ತಿಗೂ ಪಾತ್ರರಾಗಿದ್ದರು.
ಹೈದರಾಬಾದ್ನ ಏಷ್ಯನ್ ಇನ್ಸ್ಟಿಟ್ಯೂಟ್ ಆಫ್ ಗ್ಯಾಸ್ಟ್ರಾಲಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜೈಪಾಲ್ ರೆಡ್ಡಿ ತಮ್ಮ 77ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಪತ್ನಿ, ಇಬ್ಬರು ಗಂಡುಮಕ್ಕಳು ಮತ್ತು ಓರ್ವ ಮಗಳನ್ನು ಅವರು ಅಗಲಿದ್ದಾರೆ. ಅನೇಕ ರಾಜಕೀಯ ನಾಯಕರು ಜೈಪಾಲ್ ರೆಡ್ಡಿ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ರೆಡ್ಡಿ ಅವರ ಪಾರ್ಥಿವ ಶರೀರವನ್ನು ಜ್ಯುಬಿಲಿ ಹಿಲ್ಸ್ನಲ್ಲಿರುವ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ಇರಿಸಲಾಗಿದೆ.