ಬೆಂಗಳೂರು: ನಾಳೆಯ ಅಧಿವೇಶನದಲ್ಲಿ ಸಿಎಂ ಬಿ.ಎಸ್. ಯಡಿಯೂರಪ್ಪ ಬಹುಮತ ಸಾಬೀತುಪಡಿಸಬೇಕಾದ್ದರಿಂದ ಇಂದು ಮಧ್ಯಾಹ್ನ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಸಭೆ ಬಳಿಕ ಶಾಸಕರಿಗೆ ಖಾಸಗಿ ಹೋಟೆಲ್ನಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆಯ ಅಧಿವೇಶನಕ್ಕೆ ಶಾಸಕರು ಅಲ್ಲಿಂದಲೇ ನೇರವಾಗಿ ವಿಧಾನಸೌಧಕ್ಕೆ ಬರಲಿದ್ದಾರೆ.
ಅತೃಪ್ತ ಶಾಸಕರಲ್ಲಿ ಕೆಲವರು ಕಾಂಗ್ರೆಸ್- ಜೆಡಿಎಸ್ ನಾಯಕರ ಸಂಪರ್ಕದಲ್ಲಿರುವ ಬಗ್ಗೆ ಈಗಾಗಲೇ ಸುದ್ದಿಗಳು ಹರಿದಾಡುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಎಚ್ಚೆತ್ತುಕೊಂಡಿದ್ದಾರೆ. ತಮ್ಮ ಪಕ್ಷದ ಶಾಸಕರು ಆಪರೇಷನ್ ಹಸ್ತಕ್ಕೆ ಒಳಗಾಗದೆ ಇರುವಂತೆ ಎಚ್ಚರಿಕೆ ವಹಿಸಲು ಹಾಗೂ ಯಾವ ಶಾಸಕರೂ ಗೈರಾಗದಂತೆ ನೋಡಿಕೊಳ್ಳಲು ಎಲ್ಲ ಶಾಸಕರಿಗೆ ಲಗೇಜ್ ಸಮೇತ ಇಂದು ಬರುವಂತೆ ಸೂಚಿಸಲಾಗಿದೆ. ಸಭೆ ನಡೆಯಲಿರುವ ಹೋಟೆಲ್ನಲ್ಲೇ ಅವರಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಇಂದು ಎಲ್ಲ ಬಿಜೆಪಿ ಶಾಸಕರಿಗೆ ವಿಪ್ ಜಾರಿಗೊಳಿಸುವ ಸಾಧ್ಯತೆಯೂ ಇದೆ.
ಕಲಾಪದಲ್ಲಿ ಎಲ್ಲ ಶಾಸಕರು ಹಾಜರಿರುವ ಬಗ್ಗೆ ಇಂದು ಚರ್ಚೆ ನಡೆಯಲಿದೆ. ಕಳೆದ ಅಧಿವೇಶನದಲ್ಲಿ ಒಟ್ಟಾಗಿದ್ದ ರೀತಿ ಒಗ್ಗಟ್ಟು ಪ್ರದರ್ಶನ ಮಾಡಬೇಕು. ಪಕ್ಷೇತರ ಶಾಸಕರು ಸದನಕ್ಕೆ ಹಾಜರಾಗುವುದಿಲ್ಲ. ಇದರಿಂದ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಿರುತ್ತದೆ. ಇದರಿಂದಾಗಿ ಸಹಜವಾಗಿ ಬಹುಮತ ಸಾಬೀತು ಪಡಿಸಬಹುದು. ಜೊತೆಗೆ ಹಣಕಾಸು ಮಸೂದೆ ಪಾಸ್ ಮಾಡಿಕೊಳ್ಳಬಹುದು. ಉಭಯ ಸದನಗಳಲ್ಲಿ ಹಣಕಾಸು ಮಸೂದೆ ಪಾಸ್ ಆದ್ರೆ ಸರ್ಕಾರ ಸುಭದ್ರವಾದಂತೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರ.
ನಾಳೆಯ ಸದನದಲ್ಲಿ ಬಹುಮತ ಸಾಬೀತುಪಡಿಸಿದ ನಂತರ ಮಂಗಳವಾರ ಬಿ.ಎಸ್. ಯಡಿಯೂರಪ್ಪ ನವದೆಹಲಿಗೆ ತೆರಳಲಿದ್ದಾರೆ. ಬಿಎಸ್ವೈ ಪ್ರಮಾಣವಚನ ಕಾರ್ಯಕ್ರಮ ತರಾತುರಿಯಲ್ಲಿ ನಡೆದ ಕಾರಣ ಬಿಜೆಪಿಯ ಯಾವ ರಾಷ್ಟ್ರೀಯ ನಾಯಕರೂ ಹಾಜರಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಮಂಗಳವಾರ ಖುದ್ದಾಗಿ ಹೈಕಮಾಂಡ್ ಅನ್ನು ಭೆಟಿಯಾಗಿ, ಸಂಪುಟ ವಿಸ್ತರಣೆ ಬಗ್ಗೆ ಚರ್ಚಿಸಲಿದ್ದಾರೆ.