ಕುಟುಂಬದವರ ಮಧ್ಯಪ್ರವೇಶಕ್ಕೆ ಅವಕಾಶ ನೀಡಬಾರದು-ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ

ಬೆಂಗಳೂರು, ಜು.28- ರಾಜ್ಯದ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುವ ಅಗತ್ಯವಿದ್ದು, ಹಿಂದಿನ ಪ್ರಮಾದಗಳು ಮರುಕಸಳಿಬಾರದೆಂದರೆ ನಿಮ್ಮ ಕುಟುಂಬದ ಸದಸ್ಯರನ್ನು ಆಡಳಿತದ ವಿಷಯದಲ್ಲಿ ಹಸ್ತಕ್ಷೇಪ ಮಾಡದಂತೆ ದೂರ ಇಡಬೇಕೆಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಕೇಂದ್ರ ವರಿಷ್ಠರು ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ.

ಈ ಹಿಂದೆ 2008ರಲ್ಲಿ ಬಿಜೆಪಿ ಅಧಿಕಾರದಲ್ಲಿ ಇದ್ದ ವೇಳೆ ಆಡಳಿತದಲ್ಲಿ ಕುಟುಂಬದವರ ಹಸ್ತಕ್ಷೇಪ,ಸ್ವಜನಪಕ್ಷಪಾತ, ಮಂತ್ರಿಗಿರಿಗೆ ಲಾಬಿ, ಅಧಿಕಾರಿಗಳ ವರ್ಗಾವಣೆ ವಿಷಯದಲ್ಲೂ ಮಧ್ಯಪ್ರವೇಶ ಮಾಡಿದ್ದರಿಂದಲೇ ಪಕ್ಷಕ್ಕೆ ಕೆಟ್ಟ ಹೆಸರು ಬಂತು. ಈ ಬಾರಿ ಇಂತಹ ಪ್ರಮಾದ ಪುನರಾವರ್ತನೆಯಾಗಬಾರದೆಂದರೆ ನಿಮ್ಮ ಕುಟುಂಬದ ಸದಸ್ಯರಿಗೆ ಆಡಳಿತದ ವಿಷಯದಲ್ಲಿ ಮೂಗು ತೂರಿಸಲು ಅವಕಾಶ ನೀಡಬಾರದು ಎಂದು ಖುದ್ದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ನಿರ್ದೇಶನ ನೀಡಿದ್ದಾರೆ.

ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಅಮಿತ್ ಶಾ ಅಭಿನಂದನೆ ಸಲ್ಲಿಸಿದ ವೇಳೆ ಆಡಳಿತದಲ್ಲಿ ಕುಟುಂಬದವರ ಮಧ್ಯಪ್ರವೇಶಕ್ಕೆ ಅವಕಾಶ ನೀಡಬಾರದು.ನಿಮ್ಮ ಪುತ್ರ ಹಾಗೂ ಪುತ್ರಿಯರೇ ಇರಲಿ, ಇಲ್ಲವೇ ಅಳಿಯಂದಿರು ಸೇರಿದಂತೆ ಯಾರೊಬ್ಬರನ್ನೂ ಹತ್ತಿರಕ್ಕೆ ಬಿಟ್ಟುಕೊಳ್ಳದೆ ದೂರವಿಡಬೇಕೆಂದು ಸಲಹೆ ಮಾಡಿದ್ದಾರೆ ಎನ್ನಲಾಗಿದೆ.

ಹದಿನೇಳು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಮುಖ್ಯಮಂತ್ರಿಗಳು ಹಾಗೂ ಸಚಿವರು ಎಲ್ಲಿಯೂ ತಮ್ಮ ಕುಟುಂಬದ ಸದಸ್ಯರನ್ನು ಆಡಳಿತದಲ್ಲಿ ಮೂಗು ತೂರಿಸಲು ಅವಕಾಶ ಕೊಟ್ಟಿಲ್ಲ. ಇದೇ ಮಾದರಿಯನ್ನು ನೀವು ಅಳವಡಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕುಟುಂಬದವರನ್ನು ನಿಮ್ಮ ಹತ್ತಿರಕ್ಕೆ ಸೇರಿಸಲೇಬಾರದು ಎಂಬ ಖಡಕ್ ಸೂಚನೆ ಕೊಟ್ಟಿದೆ ಎಂದು ತಿಳಿದು ಬಂದಿದೆ.

ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರರಾವ್ ಮೂಲಕ ಸೂಚನೆ ಕೊಟ್ಟಿರುವ ಅಮಿತ್ ಶಾ, ಈ ಹಿಂದೆ ಯಡಿಯೂರಪ್ಪನವರ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ದವು. ಮಕ್ಕಳು,ಸಂಬಂಧಿಕರು, ಅಳಿಯಂದಿರು ಆಡಳಿತದಲ್ಲಿ ಹಸ್ತಕ್ಷೇಪ ಮಾಡಿದ್ದರಿಂದ ಸರ್ಕಾರದ ವಿರುದ್ಧ ಬಂಡೆದ್ದು 40ಕ್ಕೂ ಹೆಚ್ಚು ಶಾಸಕರು ಮಾಜಿ ಸಚಿವ ಜನಾರ್ಧನರೆಡ್ಡಿ ಜತೆ ಹೈದರಾಬಾದ್‍ಗೆ ತೆರಳಿದ್ದರು. ಅಂತಹ ಯಾವುದೇ ಪ್ರಮಾದಗಳು ಮತ್ತೆ ಮರುಕಳುಹಿಸಬಾರದು ಎಂದು ಸಲಹೆ ಮಾಡಿದ್ದಾರೆ.

ಬಿಜೆಪಿ ನಾಯಕರು ಕೂಡ ನಿಮ್ಮ ಆಡಳಿತದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ. ನೀವು ಮುಕ್ತವಾಗಿ ಆಡಳಿತ ನಡೆಸಲು ನಮ್ಮದೇನು ಅಭ್ಯಂತರವಿಲ್ಲ. ನಮಗೆ ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡಬೇಕೆಂಬುದು ನಮ್ಮ ಒತ್ತಾಸೆ. ಶಾಸಕರು ಮತ್ತು ಸಚಿವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ಮೈತ್ರಿ ಸರ್ಕಾರ ಇಟ್ಟುಕೊಂಡು ಸಣ್ಣದೊಂದು ಭಿನ್ನಮತಕ್ಕೆ ಅವಕಾಶ ನೀಡದಂತೆ ಯಶಸ್ವಿಯಾಗಿ ಆಡಳಿತ ನಡೆಸುತ್ತಿದ್ದಾರೆ. ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ತಮ್ಮ ಕುಟುಂಬದ ಸದಸ್ಯರನ್ನು ಈಗಲೂ ಕೂಡ ಹತ್ತಿರಕ್ಕೆ ಸೇರಿಸುವುದಿಲ್ಲ. ಇದೇ ರೀತಿ ಯಡಿಯೂರಪ್ಪ ಕೂಡ ಕುಟುಂಬದವರನ್ನು ಆಡಳಿತದಲ್ಲಿ ಹತ್ತಿರಕ್ಕೆ ಬಿಟ್ಟುಕೊಳ್ಳಬಾರದು. ಇದರಿಂದ ಶಾಸಕರು ಹಾಗೂ ಕಾರ್ಯಕರ್ತರ ನಡುವೆ ಭಿನ್ನಾಭಿಪ್ರಾಯ ಮೂಡಲು ಕಾರಣವಾಗುತ್ತದೆ.

ಒಬ್ಬ ಮಗ ಸಂಸದನಾಗಿರುವುದರಿಂದ ಅವರ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸಬೇಕು. ಮತ್ತೊಬ್ಬ ಮಗ ಯುವ ಮೋರ್ಚಾ ಪ್ರಧಾನಕಾರ್ಯದರ್ಶಿಯಾಗಿದ್ದು, ಪಕ್ಷದ ಸಂಘಟನೆಯಲ್ಲಿ ತೊಡಗಿಕೊಳ್ಳಬೇಕು.ಸಚಿವ ಸಂಪುಟ ವಿಸ್ತರಣೆ, ಅಧಿಕಾರಿಗಳ ವರ್ಗಾವಣೆ ಸೇರಿದಂತೆ ಯಡಿಯೂರಪ್ಪನವರು ಮುಕ್ತವಾಗಿ ಕೆಲಸ ಮಾಡಲಿ.

ಕುಟುಂಬದವರ ಮಧ್ಯ ಪ್ರವೇಶಕ್ಕೆ ಅವಕಾಶ ಕಲ್ಪಿಸಬಾರದು. ಹೈಕಮಾಂಡ್ ಮಧ್ಯ ಪ್ರವೇಶ ಮಾಡಲು ಬಯಸುವುದಿಲ್ಲ.

ರಾಜ್ಯದ ಜನತೆ ನಿಮ್ಮ ಮೇಲೆ ಯಾವ ವಿಶ್ವಾಸ ಇಟ್ಟುಕೊಂಡಿದ್ದಾರೋ ಅದೇ ವಿಶ್ವಾಸ ಮುಂದುವರೆಯಬೇಕು. 2023ರ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಉತ್ತಮ ಕೆಲಸಗಳನ್ನು ಮಾಡಿ. ನಾವು ಯಾವುದೇ ವಿಷಯದಲ್ಲೂ ಹಸ್ತಕ್ಷೇಪ ಮಾಡುವುದಿಲ್ಲ. ಆದರೆ, ಶಾಸಕರ ವಿಶ್ವಾಸಕ್ಕೆ ಧಕ್ಕೆ ಹಾಗೂ ಜನರ ನಿರೀಕ್ಷೆಗೆ ವಿರುದ್ಧವಾಗಿ ಆಡಳಿತ ನಡೆಸಿದರೆ ಕೈ ಕೂಟ್ಟಿ ಕೂರಿವುದಿಲ್ಲ ಎಂಬ ಕಠಿಣ ಸಂದೇಶವನ್ನು ಕೇಂದ್ರದ ನಾಯಕರು ರವಾನಿಸಿದ್ದಾರೆ.

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅವರ ಮಕ್ಕಳು ಹಾಗೂ ಕುಟುಂಬದವರು ಮಧ್ಯ ಪ್ರವೇಶ ಮಾಡಿದ್ದರಿಂದ ಸರ್ಕಾರದಲ್ಲಿ ಅಸ್ಥಿರತೆ ಉಂಟಾಗಿತ್ತು. ಬಳಿಕ ಕುಟುಂಬದ ಸದಸ್ಯರೆಲ್ಲರನ್ನೂ ಮನೆಯಿಂದ ಹೊರಗೆ ಇಟ್ಟಿದ್ದರು. ಈಗ ಯಾವ ತೀರ್ಮಾನ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ