ಬೆಂಗಳೂರು,ಜು.27- ದೋಸ್ತಿ ಸರ್ಕಾರಕ್ಕೆ ಸೆಡ್ಡು ಹೊಡೆದು ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ 15 ಮಂದಿ ಭಿನ್ನಮತೀಯರು ಮಂಗಳವಾರ ನಗರಕ್ಕೆ ಹಿಂತಿರುಗುವ ಸಾಧ್ಯತೆ ಇದೆ.
ಸೋಮವಾರ ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಶ್ವಾಸಮತ ಯಾಚಿಸಲಿದ್ದಾರೆ. ವಿಶ್ವಾಸ ಮತಯಾಚನೆಯಲ್ಲಿ ಸರ್ಕಾರ ಉಳಿಯುವ ಸಾಧ್ಯತೆಗಳೇ ಹೆಚ್ಚಾಗಿದೆ.
ಬಳಿಕ ಮುಂಬೈನಲ್ಲಿರುವ ಭಿನ್ನಮತೀಯರು ಮಂಗಳವಾರ ಸಂಜೆ ಬೆಂಗಳೂರಿಗೆ ಆಗಮಿಸಲಿದ್ದು, ಬುಧವಾರ ಪತ್ರಿಕಾಗೋಷ್ಟಿಯನ್ನು ನಡೆಸಲಿದ್ದಾರೆ.
ಏಕಕಾಲದಲ್ಲಿ ಎಲ್ಲರೂ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿ ನಂತರ ಪತ್ರಿಕಾಗೋಷ್ಟಿ ನಡೆಸಲಿರುವ ಅವರು, ಇತ್ತೀಚೆಗೆ ನಡೆದಿರುವ ರಾಜಕೀಯ ಬೆಳವಣಿಗೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ. ತಾವು ಯಾವ ಕಾರಣಕ್ಕಾಗಿ ಪಕ್ಷ ಬಿಡಬೇಕಾಯಿತು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ಕಾರಣವೇನು? ಸಮ್ಮಿಶ್ರ ಸರ್ಕಾರದಲ್ಲಿ ತಮ್ಮನ್ನು ಹೇಗೆ ನಡೆಸಿಕೊಳ್ಳಲಾಯಿತು, ಒಂದೂವರೆ ವರ್ಷದಲ್ಲಿ ಆಗಿರುವ ಕಹಿ ಘಟನೆಗಳನ್ನು ಬಿಚ್ಚಿಡಲಿದ್ದಾರೆ.
ಇದರ ನಡುವೆ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಎಚ್.ವಿಶ್ವನಾಥ್ ಇತ್ತೀಚಿನ ಬೆಳವಣಿಗೆಯನ್ನು ಪುಸ್ತಕ ರೂಪದಲ್ಲಿ ಹೊರತರಲು ಚಿಂತನೆ ನಡೆಸಿದ್ದಾರೆ.