ಬೆಂಗಳೂರು, ಜು.27- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಳಗದ ನಿರೀಕ್ಷೆಯಂತೆ ಎಲ್ಲವೂ ನಡೆದಿದ್ದು, ಕೊನೆಗೂ ಕಾಂಗ್ರೆಸ್ ಪಾಲಿಗೆ ವಿಪಕ್ಷ ನಾಯಕನ ಸ್ಥಾನ ದಕ್ಕುವ ಸ್ಥಿತಿ ಬಂದಿದೆ.
ಜೆಡಿಎಸ್ ಜತೆ ಸರ್ಕಾರ ರಚನೆ ಮಾಡಿ ಪೂರ್ಣಾವಧಿ ಅಧಿಕಾರದಲ್ಲಿದ್ದರೆ ಜೆಡಿಎಸ್ ಮಾಡುವ ಎಡವಟ್ಟುಗಳಿಗೆ ಕಾಂಗ್ರೆಸ್ ಹೊಣೆಯಾಗಬೇಕಾಗುತ್ತದೆ. ಮುಂದಿನ ಚುನಾವಣೆಯಲ್ಲಿ ನಮಗೆ ಇದು ಮುಳುವಾಗಲಿದೆ ಎಂದು ಸಿದ್ದರಾಮಯ್ಯ ಅವರ ಪಾಳಯ ವಾದಿಸುತ್ತಿತ್ತು.
ಹೈಕಮಾಂಡ್ ಮುಂದೆಯೂ ಇದೇ ರೀತಿಯ ವಾದಗಳು ಮಂಡನೆಯಾಗಿದ್ದವು. ಆದರೂ ರಾಷ್ಟ್ರೀಯ ಮಟ್ಟದ ಮಹಾಘಟಬಂಧನ್ ಕಾರಣಕ್ಕಾಗಿ ಕಾಂಗ್ರೆಸ್ ಹೈಕಮಾಂಡ್ ಜೆಡಿಎಸ್ ಜತೆ ಮೈತ್ರಿ ಸರ್ಕಾರವನ್ನು ಮುಂದುವರಿಸಲು ಬಯಸಿತ್ತು. ಆದರೆ, ಕ್ಷಿಪ್ರ ರಾಜಕೀಯ ಬೆಳವಣಿಗೆಗಳಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಬಿಜೆಪಿ ಅಧಿಕಾರಕ್ಕೆ ಬಂದಿದೆ. ಕಾಂಗ್ರೆಸ್-ಜೆಡಿಎಸ್ ವಿಪಕ್ಷ ಸ್ಥಾನಕ್ಕೆ ತಳ್ಳಲ್ಪಟ್ಟಿವೆ.
2007-2013ರ ನಡುವಿನ ರಾಜಕೀಯ ಹೊಂದಾಣಿಕೆ ಮತ್ತೆ ಮುಂದುವರಿಯಲಿದೆಯೇ ಎಂಬ ಪ್ರಶ್ನೆಗಳು ಜನರನ್ನು ಕಾಡುತ್ತಿವೆ. 2007ರಲ್ಲಿ 110 ಸ್ಥಾನ ಗಳಿಸಿ ಆರು ಮಂದಿ ಪಕ್ಷೇತರರ ಸಹಕಾರದಿಂದ ಅಧಿಕಾರ ಹಿಡಿದಿದ್ದ ಬಿಜೆಪಿ ಅನಂತರ ಸುಭದ್ರ ಸರ್ಕಾರಕ್ಕಾಗಿ ಆಪರೇಷನ್ ಕಮಲಕ್ಕೆ ಕೈ ಹಾಕಿತ್ತು.
ಆರಂಭದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ವಿಪಕ್ಷ ನಾಯಕರಾಗಿದ್ದು, ಆನಂತರ ಸಿದ್ದರಾಮಯ್ಯ ಪ್ರತಿಪಕ್ಷದ ನಾಯಕರಾಗಿ ನೇಮಕವಾದರು. ಬಿಜೆಪಿ ಆಪರೇಷನ್ ಕಮಲಕ್ಕೆ ಕೈ ಹಾಕುತ್ತಿದ್ದಂತೆ ಪ್ರತಿಪಕ್ಷಗಳು ಉರಿದುಬಿದ್ದವು. 2008ರಿಂದ ಬಿಜೆಪಿ ಸರ್ಕಾರದ ಅವಧಿ ಮುಗಿಯುವವರೆಗೂ ವಿಧಾನಸಭೆಯಲ್ಲಿ ರಚನಾತ್ಮಕ ಚರ್ಚೆಗೆ ಅವಕಾಶವನ್ನೇ ಕೊಡಲಿಲ್ಲ. ಪ್ರತಿದಿನ ಧರಣಿ, ಗದ್ದಲ, ಗಲಾಟೆಯಲ್ಲಿಯೇ ಅಧಿವೇಶನ ನಡೆಯುತ್ತಿತ್ತು.
ರಾಜಕೀಯ ವಿಷಯಗಳೇ ಹೆಚ್ಚು ವಿವಾದಕ್ಕೆ ಕಾರಣವಾಗುತ್ತಿದ್ದವು. ಅಭಿವೃದ್ಧಿಯ ವಿಷಯಗಳು ಒಂದಿಂಚೂ ಚರ್ಚೆಯಾಗಲಿಲ್ಲ. ಅದೇ ಸಂದರ್ಭದಲ್ಲಿ ಜೆಡಿಎಸ್ ಕೂಡ ಪ್ರತಿಪಕ್ಷದ ಸ್ಥಾನದಲ್ಲೇ ಇತ್ತು. ಕುಮಾರಸ್ವಾಮಿ ಮತ್ತು ರೇವಣ್ಣ ಅವರು ಸರ್ಕಾರದ ವಿವಿಧ ಹಗರಣಗಳ ದಾಖಲೆಗಳನ್ನು ಬಹಿರಂಗಗೊಳಿಸುವ ಮೂಲಕ ಯಡಿಯೂರಪ್ಪ , ಸದಾನಂದಗೌಡ ಮತ್ತು ಜಗದೀಶ್ ಶೆಟ್ಟರ್ ಅವರ ಆಡಳಿತವನ್ನು ಇಕ್ಕಟ್ಟಿಗೆ ಸಿಲುಕಿಸಿದರು.
ಆಗಿನ್ನೂ ಜೆಡಿಎಸ್ ಮತ್ತು ಕಾಂಗ್ರೆಸ್ ಮಧ್ಯೆ ರಾಜಕೀಯ ಹೊಂದಾಣಿಕೆ ನಡೆಯದೆ ಇದ್ದರೂ ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ಹೋರಾಟಕ್ಕೆ ಅಘೋಷಿತ ಮೈತ್ರಿ ಏರ್ಪಟ್ಟಿತ್ತು. ಕೊನೆಗೆ ಬಿಜೆಪಿ ಸರ್ಕಾರದ ಆಡಳಿತದ ಬಗ್ಗೆ ಜನ ಸಾಕು ಸಾಕು ಎನ್ನುವಷ್ಟರ ಮಟ್ಟಿಗೆ ಎರಡೂ ಪಕ್ಷಗಳ ನಾಯಕರು ವಾಗ್ದಾಳಿ ನಡೆಸಿದರು. 2013ರ ವಿಧಾನಸಭೆ ಚುನಾವಣೆಯಲ್ಲಿ ಜನ ಸಾರಾಸಗಟಾಗಿ ಕಾಂಗ್ರೆಸ್ಗೆ ಮತ ಹಾಕಿ ಅಧಿಕಾರ ನೀಡಿದರು.
ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡಿದ ಜೆಡಿಎಸ್ಗೆ ಹೆಚ್ಚಿನ ಸ್ಥಾನಗಳೇನೂ ಬರಲಿಲ್ಲ. ಇದು ಕುಮಾರಸ್ವಾಮಿ ಅವರಿಗೆ ಬೇಸರ ಮೂಡಿಸಿ ಬಹಿರಂಗವಾಗಿ ಅಸಮಾಧಾನ ಹೊರಹಾಕುವ ಮಟ್ಟಿಗೂ ಹೋಗಿತ್ತು. ಈಗ ಮತ್ತದೇ ರೀತಿಯ ವಾತಾವರಣ ನಿರ್ಮಾಣವಾಗಿದೆ. ಸಿದ್ದರಾಮಯ್ಯ ಅವರು ನಿರೀಕ್ಷೆಯಂತೆ ಪ್ರತಿಪಕ್ಷದ ನಾಯಕರಾಗುವ ಅವಕಾಶವಿದೆ. ಜೆಡಿಎಸ್ ಪಾಳಯದಿಂದ ಕುಮಾರಸ್ವಾಮಿ ಅವರೇ ಶಾಸಕಾಂಗ ಪಕ್ಷದ ನಾಯಕರಾಗುವ ನಿರೀಕ್ಷೆಗಳಿವೆ.
ಕಳೆದ 14 ತಿಂಗಳ ಕಾಲ ಅಧಿಕೃತವಾಗಿ ಮೈತ್ರಿ ಮಾಡಿಕೊಂಡು ಆಡಳಿತ ನಡೆಸಿ ಒಂದೆ ವೇದಿಕೆ ಹಂಚಿಕೊಂಡು ಚುನಾವಣೆಯಲ್ಲಿ ಜಂಟಿ ಪ್ರಚಾರ ಮಾಡಿ ಸಾಕಷ್ಟು ಹೊಂದಾಣಿಕೆಯಲ್ಲಿ ನಡೆಯುತ್ತಿರುವ ಜೆಡಿಎಸ್-ಕಾಂಗ್ರೆಸ್ ನಾಯಕರು ಮತ್ತೆ ವಿಧಾನಸಭೆಯಲ್ಲಿ ಬಿಜೆಪಿ ವಿರುದ್ಧ ಅದೇ ದೋಸ್ತಿ ಮುಂದುವರಿಸುತ್ತಾರಾ ಎಂಬ ಪ್ರಶ್ನೆ ಉದ್ಭವಿಸಿದೆ.
ಒಂದು ವೇಳೆ ದೋಸ್ತಿ ಪಕ್ಷಗಳು ಒಗ್ಗೂಡಿದರೆ ಬಿಜೆಪಿ ಮತ್ತೆ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ. ರಾಜಕೀಯ ಏರುಪೇರುಗಳಲ್ಲಿ ಇನ್ನೆರಡು ವರ್ಷಗಳೊಳಗಾಗಿಯೇ ಮಧ್ಯಂತರ ಚುನಾವಣೆ ಎದುರಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ. ಆದರೆ, ಜೆಡಿಎಸ್ನಲ್ಲಿ ವಿರೋಧ ಪಕ್ಷದ ಸ್ಥಾನದಲ್ಲಿ ಕುಳಿತುಕೊಳ್ಳಲು ಅಸಮಾಧಾನ ಇರುವಂತೆ ಕಂಡುಬರುತ್ತಿದೆ.
ನಿನ್ನೆ ನಡೆದ ಸಭೆಯಲ್ಲಿ ಬಿಜೆಪಿಗೆ ಬಾಹ್ಯ ಬೆಂಬಲ ನೀಡುವಂತೆ ಕೆಲ ಶಾಸಕರು ಒತ್ತಾಯಿಸಿರುವುದು ರಾಜಕೀಯ ಅಚ್ಚರಿಗಳಿಗೂ ಕಾರಣವಾಗಿದೆ.