ಬೆಂಗಳೂರು, ಜು.27- ಜೀವನ ಸಂಧ್ಯಾ ಕಾಲದಲ್ಲಿ ರಾಜಕೀಯ ಪುನರ್ಜನ್ಮ ನೀಡಿದ್ದು ಮಾಜಿ ಪ್ರಧಾನಿ ದೇವೇಗೌಡರು ಎಂದು ಹೇಳಿಕೊಳ್ಳುವುದರಲ್ಲಿ ಯಾವುದೇ ಅತಿಶಯೋಕ್ತಿಯಿಲ್ಲ. ಅವರ ಪೋಟೋವನ್ನು ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತೇನೆ.
ಅವರು ನನ್ನನ್ನು ಜೆಡಿಎಸ್ ಪಕ್ಷಕ್ಕೆ ಸೇರಿಸಿಕೊಂಡು ಆ ಪಕ್ಷದಿಂದ ನಾನು ಶಾಸಕನಾಗಿ ಆಯ್ಕೆಯಾಗಿದ್ದೆ. ಅದರ ಬಗ್ಗೆ ನನಗೆ ಹೆಮ್ಮೆ ಇದೆ. ಆದರೆ ನನ್ನ ಹಿರಿತನ, ಅನುಭವ ಆಧಾರದ ಮೇಲೆ ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷ ಹುದ್ದೆ ಕೊಟ್ಟ ಮೇಲೆ ನಡೆಸಿಕೊಂಡ ರೀತಿ ನನ್ನ ಮನಸ್ಸನ್ನು ತೀವ್ರ ಘಾಸಿಗೊಳಿಸಿತು ಎಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಮುಂಬೈನಲ್ಲಿರುವ ಎಚ್.ವಿಶ್ವನಾಥ್ ಹೇಳಿದ್ದಾರೆ.
ಪಕ್ಷದ ರಾಜ್ಯಾಧ್ಯಕ್ಷನಾದರೂ ನಮ್ಮ ಪಕ್ಷ ಆಡಳಿತದಲ್ಲಿದ್ದರೂ ಕನಿಷ್ಠ ನಮಗೆ ಸೂಕ್ತ ಗೌರವ ಪಕ್ಷದಲ್ಲಿ ಸಿಗಲಿಲ್ಲ. ಅಧ್ಯಕ್ಷ ಹುದ್ದೆಗೆ ಕೂರಿಸಿ ಕಾರನ್ನು ಕೊಟ್ಟ ಪಕ್ಷದ ಮುಖಂಡರು ಚುನಾವಣೆ ಸಂದರ್ಭದಲ್ಲಿ ಓಡಾಡಲು ಕಾರಿಗೆ ಡಿಸೇಲ್ ಹಾಕಿಸಿಕೊಳ್ಳಲು ಹಣ ಕೊಡಲಿಲ್ಲ. ಚುನಾವಣೆ ಸಂದರ್ಭದಲ್ಲಿ ಓಡಾಡಲು ಕನಿಷ್ಟ 5 ಲಕ್ಷ ರೂ. ಕೊಡಲಿಲ್ಲ. ಈ ಬಗ್ಗೆ ಕುಮಾರಸ್ವಾಮಿ ಅವರನ್ನು ಮೂರು ಬಾರಿ ಕೇಳಿದರೂ ಅವರು ಕೇವಲ ಆಶ್ವಾಸನೆ ನೀಡಿದರಷ್ಟೇ ಹೊರತು ಸ್ಪಂದಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
37 ಶಾಸಕರಿದ್ದ ಜೆಡಿಎಸ್ ಪಕ್ಷದ ರಾಜ್ಯ ಅಧ್ಯಕ್ಷನಾಗಿದ್ದರೂ ಶಾಸಕರಾಗಲಿ, ಪಕ್ಷದ ಪದಾಧಿಕಾರಿಗಳಾಗಲಿ ಕನಿಷ್ಠ ಗೌರವ ಸಿಗುತ್ತಿರಲಿಲ್ಲ. ಈ ಎಲ್ಲಾ ಕಾರಣಗಳಿಂದ ಬೇಸತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದೆ ಎಂದರು.
ನಾನು ರಾಜೀನಾಮೆ ಕೊಟ್ಟ ಮೇಲೆ ಕನಿಷ್ಠ ಸೌಜನ್ಯಕ್ಕಾದರೂ ಕುಮಾರಸ್ವಾಮಿಯವರಾಗಲಿ, ಮತ್ತಿತರ ಮುಖಂಡರಾಗಲಿ ಯಾರು ಈ ಬಗ್ಗೆ ವಿಚಾರಿಸಲಿಲ್ಲ.
ಕೇವಲ ಅಧಿಕಾರ ಹಸ್ತಾಂತರದ ಬಗ್ಗೆಯೇ ಮಾತನಾಡಿದರು. ಇದರಿಂದ ನನಗೆ ಹೆಜ್ಜೆ ಹೆಜ್ಜೆಗೂ ಅವಮಾನವಾಯಿತು. ಪಕ್ಷದ ರಾಜ್ಯಾಧ್ಯಕ್ಷ ಎಂದು ಹೆಮ್ಮೆಯಿಂದ ನಾನು ಪಕ್ಷ ಸಂಘಟನೆಗೆ ಹಲವು ರೂಪು ರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವ ಮಹತ್ವಾಕಾಂಕ್ಷೆ ಕೂಡ ಹೊಂದಿದ್ದೆ. ಆದರೆ ಇದಾವುದಕ್ಕೂ ಆ ಪಕ್ಷದಿಂದ ಮನ್ನಣೆ ಸಿಗಲಿಲ್ಲ. ನಮಗೆ ವೈಯಕ್ತಿಕವಾಗಿಯೂ ಗೌರವ ಸಿಗಲಿಲ್ಲ. ಹೀಗಾಗಿ ಪಕ್ಷ ತೊರೆಯಬೇಕಾಯಿತು.
ನನ್ನ ಸಾರ್ವಜನಿಕ ಜೀವನದಲ್ಲಿ ಸಿದ್ಧಾಂತಗಳನ್ನು ಬಿಟ್ಟು ಬದುಕಿಲ್ಲ. ಸೈದ್ಧಾಂತಿಕ ನೆಲೆಯಡಿಯಲ್ಲಿಯೇ ರಾಜಕೀಯ ಜೀವನವನ್ನು ಅಳವಡಿಸಿಕೊಂಡಿದ್ದೇನೆ. ಕಾಂಗ್ರೆಸ್‍ನಿಂದ ನನಗಾದ ನೋವು ಅಪಮಾನದಿಂದ ಪಕ್ಷ ತೊರೆದೆ. ಆ ಪಕ್ಷ ತೊರೆದಾಗಲೂ ಏಕೆ ಪಕ್ಷ ಬಿಡುತ್ತೀರಾ ಎಂದು ಯಾವ ಮುಖಂಡರು ಕೇಳಲಿಲ್ಲ ಎಂದು ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದಾರೆ.