ನವದೆಹಲಿ, ಜು.27- ವಾಯು ಮಾಲಿನ್ಯ ತಡೆಗಟ್ಟಿ ಪರಿಸರ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಿರುವ ಕೇಂದ್ರ ಸರ್ಕಾರದ ಯೋಜನೆಗೆ ಸಹಕಾರ ನೀಡುವ ನಿಟ್ಟಿನಲ್ಲಿ ಸರಕುಗಳು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ) ಉನ್ನತಾಧಿಕಾರ ಮಂಡಳಿ ಇಂದು ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದೆ.
ಪರಿಸರ ಸ್ನೇಹಿ ವಿದ್ಯುತ್ ವಾಹನಗಳ ಮೇಲಿನ ಜಿಎಸ್ಟಿಯನ್ನು ಶೇ.5ರಷ್ಟು ಇಳಿಸಲು ಮಂಡಳಿ ಇಂದು ನಿರ್ಧರಿಸಿದೆ.
ವಿದ್ಯುತ್ ಚಾಲಿತ ವಾಹನಗಳ ಮೇಲೆ ಈ ಹಿಂದೆ ಶೇ.12ರಷ್ಟು ತೆರಿಗೆ ವಿಧಿಸಲಾಗಿತ್ತು. ಈಗ ಅದರಲ್ಲಿ ಶೇ.5ರಷ್ಟು ಜಿಎಸ್ಟಿ ಕಡಿತಗೊಳಿಸಲಾಗಿದ್ದು, ಆ.1ರಿಂದ ಜಾರಿಗೆ ಬರಲಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಅಧ್ಯಕ್ಷತೆಯಲ್ಲಿ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಜಿಎಸ್ಟಿ ಉನ್ನತಾಧಿಕಾರ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಪ್ರಕಟಿಸಲಾಗಿದೆ.
ವಿದ್ಯುತ್ ವಾಹನಗಳ ಚಾರ್ಜರಗಳ ಮೇಲೆ ಈ ಹಿಂದೆ ವಿಧಿಸಲಾಗಿದ್ದ ಶೇ.18ರಷ್ಟು ಜಿಎಸ್ಟಿ ತೆರಿಗೆಯನ್ನು ಸಹ ಶೇ.5ರಷ್ಟು ಇಳಿಸಲಾಗಿದೆ. ಇದರಿಂದ ವಿದ್ಯುತ್ ವಾಹನ ಖರೀದಿಗೆ ಮತ್ತಷ್ಟು ಉತ್ತೇಜನ ಲಭಿಸಿದಂತಾಗಿದೆ.
ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಸರ್ಕಾರದ ಪರಿಪೂರ್ಣ ಬಜೆಟ್ನಲ್ಲೂ ಸಹ ವಿದ್ಯುತ್ ವಾಹನಗಳ ಮೇಲಿನ ಜಿಎಸ್ಟಿಯನ್ನು ಶೇ.5ರಷ್ಟು ಇಳಿಸುವ ಬಗ್ಗೆ ಪ್ರಕಟಿಸಲಾಗಿತ್ತು.