ಬೆಂಗಳೂರು,ಜು.27- ವಿಧಾನಸಭೆಯಲ್ಲಿ ಬಹುಮತ ಸಾಬೀತಾಗಿ, ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಭ್ರಷ್ಟಾಚಾರ ನಿಗ್ರಹದಳ(ಎಸಿಬಿ)ವನ್ನು ರದ್ದುಪಡಿಸಿ ಲೋಕಾಯುಕ್ತಕ್ಕೆ ಇನ್ನಷ್ಟು ಶಕ್ತಿ ತುಂಬಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತೀರ್ಮಾನಿಸಿದ್ದಾರೆ.
ಸೋಮವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಬೇಕಾದ ಅಗ್ನಿಪರೀಕ್ಷೆಗೆ ಒಳಗಾಗಿದ್ದಾರೆ.
ಈಗಿನ ಬಲಾಬಲ ಹಾಗೂ ರಾಜೀನಾಮೆ ನೀಡಿರುವ ಶಾಸಕರು ತಮ್ಮ ನಿರ್ಧಾರದಿಂದ ಹಿಂದೆ ಸರಿಯದಿದ್ದರೆ ಬಿಜೆಪಿ ಬಹುತೇಕ ಗಂಡಾಂತರದಿಂದ ಪಾರಾಗುವ ಸಾಧ್ಯತೆಗಳು ಸ್ಪಷ್ಟವಾಗಿವೆ. ಹಾಗೊಂದು ವೇಳೆ ವಿಶ್ವಾಸ ಮತಯಾಚನೆಯಲ್ಲಿ ಗೆದ್ದರೆ ಇನ್ನು ಆರು ತಿಂಗಳ ಕಾಲ ಸರ್ಕಾರವನ್ನು ಅಲುಗಾಡಿಸಲು ಯಾರಿಂದಲೂ ಸಾಧ್ಯವಿಲ್ಲ.
ಸಚಿವ ಸಂಪುಟ ವಿಸ್ತರಣೆಯಾದ ಬಳಿಕ ಎಸಿಬಿಯನ್ನು ರದ್ದುಪಡಿಸಿ ಲೋಕಾಯುಕ್ತ ಸಂಸ್ಥೆಯನ್ನು ಹಿಂದಿನಂತೆ ಕಾರ್ಯ ನಿರ್ವಹಿಸಲು ಅನುಕೂಲವಾಗುವಂತೆ ಕೆಲವು ಕ್ರಮಗಳನ್ನು ಯಡಿಯೂರಪ್ಪ ಕೈಗೊಳ್ಳಲಿದ್ದಾರೆ.
ಚುನಾವಣಾ ಪ್ರಣಾಳಿಕೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಎಸಿಬಿಯನ್ನು ರದ್ದುಪಡಿಸುವುದಾಗಿ ಬಿಜೆಪಿ ತಿಳಿಸಿತ್ತು. ಇದಲ್ಲದೆ ಎಸಿಬಿ ಮುಖ್ಯಮಂತ್ರಿಗಳ ಮೂಗಿನಡಿ ಕೆಲಸ ನಿರ್ವಹಿಸುತ್ತಿದ್ದರಿಂದ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಕೇಳಿಬಂದಿದ್ದವು.
ಈಗ ಎಸಿಬಿಯನ್ನು ಕಿತ್ತು ಹಾಕಿ ಈ ಹಿಂದೆ ಲೋಕಾಯುಕ್ತ ಸಂಸ್ಥೆ ಯಾವ ರೀತಿ ಕೆಲಸ ನಿರ್ವಹಿಸುತ್ತಿತ್ತೋ ಅದೇ ರೀತಿ ಮುಂದುವರೆಸಲು ಮುಖ್ಯಮಂತ್ರಿ ಯಡಿಯೂರಪ್ಪ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿ ಎಸಿಬಿಯನ್ನು ರಚನೆ ಮಾಡಿದ್ದರು. ಆದರೆ ಇದಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾದ ವಿರೋಧ ವ್ಯಕ್ತವಾಗಿತ್ತು.
ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಎಂ.ಎನ್.ವೆಂಟಾಚಲಯ್ಯ, ಸಂತೋಷ್ ಹೆಗಡೆ ಅಧಿಕಾರಾವಧಿಯಲ್ಲಿ ಈ ಸಂಸ್ಥೆಯು ಯಾವ ರೀತಿ ಕೆಲಸ ಮಾಡಿತ್ತೋ ಅದೇ ರೀತಿ ಕಾರ್ಯ ನಿರ್ವಹಣೆ ಮಾಡಬೇಕೆಂಬುದು ಬಹುತೇಕರ ಒತ್ತಾಸೆಯಾಗಿತ್ತು.
ಸ್ವತಃ ಯಡಿಯೂರಪ್ಪನವರು ಕೂಡ ಅನೇಕ ಬಾರಿ ಎಸಿಬಿಗೆ ವಿರೋಧ ವ್ಯಕ್ತಪಡಿಸಿ ಲೋಕಾಯುಕ್ತ ಸಂಸ್ಥೆಯನ್ನು ಬಲವರ್ಧನೆ ಮಾಡುತ್ತೇನೆ ಎಂದು ಹೇಳಿದ್ದರು.
ಈಗ ಕೊಟ್ಟ ಮಾತು ಉಳಿಸಿಕೊಳ್ಳುವ ಹೊಣೆಗಾರಿಕೆ ಅವರ ಮೇಲಿರುವುದರಿಂದ ಎಸಿಬಿಯನ್ನು ರದ್ದುಪಡಿಸಲೇಬೇಕಾದ ಅನಿವಾರ್ಯತೆ ಇದೆ.