ಯಡಿಯೂರಪ್ಪನವರು ಸೋಮವಾರ ವಿಶ್ವಾಸ ಮತ ಯಾಚಿಸುವ ಸಾಧ್ಯತೆ-ಮತ್ತೆ ವಿಧಾನಸಭೆಯಲ್ಲಿ ಅಂಕಿ ಸಂಖ್ಯೆಗಳ ಆಟ ಆರಂಭ

ಬೆಂಗಳೂರು, ಜು.26-ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಯಡಿಯೂರಪ್ಪ ಅವರಿಗೆ ಒಂದು ವಾರದೊಳಗಾಗಿ ಬಹುಮತ ಸಾಬೀತುಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದಾರೆ. ಇದರೊಂದಿಗೆ ಮತ್ತೆ ವಿಧಾನಸಭೆಯಲ್ಲಿ ಅಂಕಿ ಸಂಖ್ಯೆಗಳ ಆಟ ಆರಂಭಗೊಂಡಿದೆ.

ಯಡಿಯೂರಪ್ಪ ಅವರು ಬಹುತೇಕ ಸೋಮವಾರವೇ ಅಧಿವೇಶನದಲ್ಲಿ ವಿಶ್ವಾಸ ಮತ ಯಾಚಿಸುವ ಸಾಧ್ಯತೆ ಇದೆ. ವಿಧಾನಸಭೆಯಲ್ಲಿ ಚುನಾಯಿತ ಸದಸ್ಯರು-224, ಒಬ್ಬರು ನಾಮನಿರ್ದೇಶಿತ ಆಂಗ್ಲೋ ಇಂಡಿಯನ್ ಸೇರಿ ಒಟ್ಟು 225 ಶಾಸಕರ ಸಂಖ್ಯಾಬಲ ಇತ್ತು.

ನಿನ್ನೆ ವಿಧಾನಸಭಾಧ್ಯಕ್ಷರು ಕಾಂಗ್ರೆಸ್‍ನ ಬಂಡಾಯ ಶಾಸಕರಾದ ರಮೇಶ್‍ಜಾರಕಿ ಹೊಳಿ, ಮಹೇಶ್‍ಕುಮಟಳ್ಳಿ ಮತ್ತು ಪಕ್ಷೇತರ ಶಾಸಕ ಆರ್.ಶಂಕರ್ ಅವರನ್ನು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹಗೊಳಿಸಿದ್ದಾರೆ. ಹೀಗಾಗಿ ಪ್ರಸ್ತುತ ವಿಧಾನಸಭೆಯ ಸಂಖ್ಯಾಬಲ 222 ಆಗಿದೆ. ಅಷ್ಟೂ ಮಂದಿ ಅಧಿವೇಶನದಲ್ಲಿ ಭಾಗವಹಿಸಿದರೆ ಬಹುಮತ ಸಾಬೀತುಪಡಿಸಲು 112 ಶಾಸಕರ ಸಂಖ್ಯಾಬಲ ಬೇಕು. ಆದರೆ ಜೆಡಿಎಸ್ ಮತ್ತು ಕಾಂಗ್ರೆಸ್‍ನ 16 ಮಂದಿ ಬಂಡಾಯ ಶಾಸಕ ರು ಮತ್ತು ಅನಾರೋಗ್ಯಕ್ಕೀಡಾಗಿರುವ ನಾಗೇಂದ್ರ ಅವರು ಭಾಗವಹಿಸುವ ಸಾಧ್ಯತೆಗಳು ಕಡಿಮೆ ಇದೆ. ಹೀಗಾಗಿ ಬಹುತೇಕ ಜೆಡಿಎಸ್-ಕಾಂಗ್ರೆಸ್, ಬಿಜೆಪಿ ಸೇರಿ ಮೂರು ಪಕ್ಷಗಳಿಂದ 205 ಮಂದಿ ಭಾಗವಹಿಸುವ ಸಾಧ್ಯತೆ ಇದೆ. ಇಷ್ಟೇ ಮಂದಿ ಸದನದಲ್ಲಿ ಹಾಜರಿದ್ದರೆ ಸರ್ಕಾರ ಬಹುಮತ ಸಾಬೀತಿಗೆ 103 ಮಂದಿ ಮ್ಯಾಜಿಕ್ ನಂಬರ್ ಸಾಕಾಗುತ್ತದೆ.

ಕಾಂಗ್ರೆಸ್‍ನ ಪ್ರತಾಪ್‍ಗೌಡ ಪಾಟೀಲ್, ಬಿ.ಸಿ.ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಭೆರತಿ ಬಸವರಾಜ್, ಮುನಿರತ್ನ, ಎಂ.ಟಿ.ಬಿ.ನಾಗರಾಜ್ ಅವರುಗಳು ರಾಜೀನಾಮೆ ನೀಡಿ ಮುಂಬೈನಲ್ಲಿದ್ದಾರೆ. ಆನಂದ್‍ಸಿಂಗ್, ಸುಧಾಕರ್ ರಾಜೀನಾಮೆ ನೀಡಿ ಅಜ್ಞಾತ ಸ್ಥಳದಲ್ಲಿದ್ದಾರೆ. ರೋಷನ್‍ಬೇಗ್ ಕೂಡ ರಾಜೀನಾಮೆ ನೀಡಿದ್ದು, ಅದಕ್ಕೂ ಮೊದಲೇ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತು ಮಾಡಲಾಗಿತ್ತು. ಶ್ರೀಮಂತಪಾಟೀಲ್ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡದೆ ಇದ್ದರೂ ಅನಾರೋಗ್ಯದ ನೆಪ ಹೇಳಿ ಮುಂಬೈನಲ್ಲಿ ಉಳಿದುಕೊಂಡು ವಿಧಾನಸಭೆ ಕಲಾಪದಲ್ಲಿ ಭಾಗವಹಿಸದೆ ವಿಪ್ ಉಲ್ಲಂಘನೆ ಮಾಡಿದ್ದಾರೆ. ಹೀಗಾಗಿ ಅವರ ವಿರುದ್ಧವೂ ಪಕ್ಷಾಂತರ ನಿಷೇಧ ಕಾಯ್ದೆಯಡಿ ಸ್ಪೀಕರ್‍ಗೆ ದೂರು ನೀಡಲಾಗಿದೆ. ಈ ಹನ್ನೊಂದು ಮಂದಿ ವಿಧಾನಸಭೆಯಲ್ಲಿ ಮುಂದೆ ನಡೆಯುವ ವಿಶ್ವಾಸಮತ ಯಾಚನೆಯಲ್ಲಿ ಭಾಗವಹಿಸುವ ಬಗ್ಗೆ ಯಾವುದೇ ಖಚಿತತೆ ಇಲ್ಲ.

2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 80 ಕ್ಷೇತ್ರದಲ್ಲಿ ಗೆದ್ದಿತ್ತು. ಇತ್ತೀಚೆಗೆ ನಡೆದ ಚಿಂಚೋಳಿ ಮತ್ತು ಕುಂದಗೋಳ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಚಿಂಚೋಳಿಯಲ್ಲಿ ಸೋತಿದ್ದರಿಂದ ಚುನಾಯಿತರ ಸದಸ್ಯರ ಬಲ 79ಕ್ಕೆ ಇಳಿದಿದೆ. ಅದರಲ್ಲಿ 11 ಮಂದಿ ರಾಜೀನಾಮೆ ನೀಡಿದ್ದಾರೆ. ಇಬ್ಬರು ಅನರ್ಹಗೊಂಡಿರುವುದರಿಂದ ಕಾಂಗ್ರೆಸ್‍ನ ಸಂಖ್ಯಾಬಲ 66ಕ್ಕೆ ಕುಸಿದಿದೆ. ನಾಮನಿರ್ದೇಶಿತ ಶಾಸಕರನ್ನು ಒಳಗೊಂಡಂತೆ ಕಾಂಗ್ರೆಸ್‍ನ ಒಟ್ಟು ಬಲಾಬಲ 67.

ಇನ್ನು ಜೆಡಿಎಸ್‍ನ 37 ಶಾಸಕರ ಪೈಕಿ ಎಚ್.ವಿಶ್ವನಾಥ್, ನಾರಾಯಣಗೌಡ, ಗೋಪಾಲಯ್ಯ ಅವರು ರಾಜೀನಾಮೆ ನೀಡಿ ಮುಂಬೈನಲ್ಲಿದ್ದು, ಅವರು ಬೆಂಗಳೂರಿಗೆ ಬರುವುದಾಗಿ ಹೇಳುತ್ತಿದ್ದಾರೆ. ಆದರೆ ವಿಶ್ವಾಸಮತಯಾಚನೆಯಲ್ಲಿ ಭಾಗವಹಿಸುತ್ತಾರೋ ಇಲ್ಲವೋ ಎಂಬುದು ಸ್ಪಷ್ಟವಾಗಿಲ್ಲ.

ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್‍ನ 34, ಕಾಂಗ್ರೆಸ್‍ನ 67 ಮಂದಿ ಶಾಸಕರನ್ನು ಹೊಂದಿದ್ದು, ನಾಮನಿರ್ದೇಶಿತ ಶಾಸಕರೊಬ್ಬರನ್ನು ಒಳಗೊಂಡಂತೆ ದೋಸ್ತಿ ಪಕ್ಷಗಳ ಸಂಖ್ಯಾಬಲ 101 ಆಗಲಿದೆ. ಇದರಲ್ಲಿ ಸ್ಪೀಕರ್ ಅವರೂ ಸೇರಿದ್ದಾರೆ.

ನಿನ್ನೆ ಸ್ಪೀಕರ್ ಮೂವರು ಶಾಸಕರ ವಿರುದ್ಧ ಹೊರಡಿಸಿರುವ ಅನರ್ಹತೆ ಆದೇಶದಿಂದ ಮುಂಬೈನಲ್ಲಿರುವ ಅತೃಪ್ತರು ಜಗ್ಗಿದಂತೆ ಕಾಣುತ್ತಿಲ್ಲ. ಹೀಗಾಗಿ ವಿಶ್ವಾಸ ಮತಯಾಚನೆಯಲ್ಲಿ ಎಷ್ಟು ಮಂದಿ ಭಾಗವಹಿಸುತ್ತಾರೆ ಅಥವಾ ಭಾಗವಹಿಸುವುದಿಲ್ಲ ಏನಾಗಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಮೂರೂ ಪಕ್ಷಗಳ ಬಲಾಬಲದ ಮೇಲೆ ಸದನದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಆಧರಿಸಿದರೆ 205 ಮಂದಿಯಾಗಲಿದ್ದು, ಬಹುಮತ ಸಾಬೀತಿಗೆ 103 ಮಂದಿ ಶಾಸಕರ ಸಂಖ್ಯೆ ಸಾಕಾಗಲಿದೆ. ಹೀಗಾಗಿ ಬಿಜೆಪಿ 106 ಮಂದಿ ಹೊಂದಿರುವುದರಿಂದ ಸುಲಭವಾಗಿ ವಿಶ್ವಾಸಮತ ಗೆಲ್ಲುವ ನಿರೀಕ್ಷೆ ಇದೆ.

ಒಮ್ಮೆ ವಿಶ್ವಾಸ ಮತ ಸಾಬೀತುಪಡಿಸಿದರೆ ಸರ್ಕಾರ ಆರು ತಿಂಗಳ ಕಾಲ ಮತ್ತೊಮ್ಮೆ ವಿಶ್ವಾಸಮತ ಯಾಚಿಸುವ ಅಗತ್ಯವಿಲ್ಲದೆ ಇರುವುದರಿಂದ ಇನ್ನೂ ಆರು ತಿಂಗಳ ಕಾಲ ಯಡಿಯೂರಪ್ಪ ನಾಯಕತ್ವದ ಸರ್ಕಾರ ಅಬಾಧಿತವಾಗುವ ಸಾಧ್ಯತೆ ಇದೆ.

ರಾಜೀನಾಮೆ ನೀಡಿ ಮುಂಬೈನಲ್ಲಿರುವವರು
1. ಪ್ರತಾಪ್‍ಗೌಡ ಪಾಟೀಲ್
2. ಬಿ.ಸಿ.ಪಾಟೀಲ್
3. ಶಿವರಾಮ್ ಹೆಬ್ಬಾರ್
4. ಎಸ್.ಟಿ.ಸೋಮಶೇಖರ್
5. ಭೆರತಿ ಬಸವರಾಜ್
6. ಮುನಿರತ್ನ
7. ಎಂ.ಟಿ.ಬಿ.ನಾಗರಾಜ್

ಕಾಂಗ್ರೆಸ್‍ನಿಂದ ದೂರ ಇರುವವರು
8. ಸುಧಾಕರ್
9. ಆನಂದ್‍ಸಿಂಗ್
10. ರೋಷನ್‍ಬೇಗ್
11. ಶ್ರೀಮಂತಪಾಟೀಲ್

ಅನರ್ಹಗೊಂಡವರು
12. ರಮೇಶ್ ಜಾರಕಿ ಹೊಳಿ
13. ಮಹೇಶ್ ಕುಮಟಳ್ಳಿ

ಜೆಡಿಎಸ್‍ನಿಂದ ರಾಜೀನಾಮೆ ನೀಡಿದವರು
14. ವಿಶ್ವನಾಥ್
15. ನಾರಾಯಣಗೌಡ
16. ಗೋಪಾಲಯ್ಯ

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ