ಬೆಂಗಳೂರು: ರಾಜೀನಾಮೆ ನೀಡಿರುವ ಅತೃಪ್ತ ಶಾಸಕರ ಪೈಕಿ ಮೂವರನ್ನು ನಿನ್ನೆ ಸ್ಪೀಕರ್ ರಮೇಶ್ ಕುಮಾರ್ ಅನರ್ಹಗೊಳಿಸಿದ್ದಾರೆ. ಆ ಆದೇಶವನ್ನು ಪ್ರಶ್ನಿಸಿ ಇಂದು ಮೂವರು ಅನರ್ಹ ಶಾಸಕರು ಸುಪ್ರೀಂಕೋರ್ಟ್ ಮೊರೆಹೋಗುವ ಸಾಧ್ಯತೆಯಿದೆ.
ಪಕ್ಷಾಂತರ ನಿಷೇಧ ಕಾಯ್ದೆಯಡಿ ಕಾಂಗ್ರೆಸ್ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ ಮತ್ತು ಆರ್. ಶಂಕರ್ ಅವರನ್ನು ಸ್ಪೀಕರ್ ಅನರ್ಹಗೊಳಿಸಿದ್ದಾರೆ. ಈ ಆದೇಶದಿಂದ ಅತೃಪ್ತ ಶಾಸಕರು ಆತಂಕಕ್ಕೀಡಾಗಿದ್ದಾರೆ. ಈ ಮೂವರು ಸದ್ಯದ ವಿಧಾನಸಭೆ ಅವಧಿ ಮುಗಿಯುವವರೆಗೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ. ಒಂದುವೇಳೆ ಮಧ್ಯಂತರ ಚುನಾವಣೆಯಾದರೆ ಮಾತ್ರ ಇವರು ಸ್ಪರ್ಧಿಸಲು ಅರ್ಹರಾಗುತ್ತಾರೆ.
ಈ ಮೂವರು ಶಾಸಕರ ಪರವಾಗಿ ಇಂದು ಮುಕುಲ್ ರೋಹ್ಟಗಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ. ಸ್ಪೀಕರ್ ರಮೇಶ್ ಕುಮಾರ್ ಆದೇಶವನ್ನು ಪ್ರಶ್ನಿಸಿ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್ ಪೀಠದ ಮುಂದೆ ಅರ್ಜಿ ಸಲ್ಲಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಉಳಿದ ಶಾಸಕರ ರಾಜೀನಾಮೆ ವಿಚಾರವಾಗಿ ಶೀಘ್ರದಲ್ಲೇ ನಿರ್ಧಾರ ಪ್ರಕಟಿಸುವುದಾಗಿ ಸ್ಪೀಕರ್ ಹೇಳಿದ್ದಾರೆ. ಇದರಿಂದ ಅತೃಪ್ತ ಶಾಸಕರಲ್ಲಿ ಆತಂಕ ಮನೆಮಾಡಿದೆ.
ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಹಳ್ಳಿ, ಉಮೇಶ್ ಜಾಧವ್, ನಾಗೇಂದ್ರ ಇವರ ಮೇಲೆ ಕಾಂಗ್ರೆಸ್ ಫೆಬ್ರವರಿಯಲ್ಲಿಯೇ ದೂರು ನೀಡಿತ್ತು. ಆದರೆ, ಉಮೇಶ್ ಜಾಧವ್, ನಾಗೇಂದ್ರ ಅವರ ಮೇಲೆ ದೂರನ್ನು ಕಾಂಗ್ರೆಸ್ ನಾಯಕರೇ ಕೈಬಿಟ್ಟಿದ್ದರಿಂದಸ್ಪೀಕರ್ ಕೂಡ ಅವರ ಮೇಲಿನ ಕ್ರಮವನ್ನು ಕೈಬಿಟ್ಟಿದ್ದರು.
ನಿನ್ನೆ ಸುದ್ದಿಗೋಷ್ಠಿಯಲ್ಲಿ ಶಾಸಕರ ಅನರ್ಹತೆಯ ವಿಷಯ ತಿಳಿಸಿದ್ದ ಸ್ಪೀಕರ್ ರಮೇಶ್ ಕುಮಾರ್, ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ನಿರ್ಧಾರ ತೆಗೆದುಕೊಳ್ಳಬಾರದು ಎಂದು ಕೂಲಂಕುಷವಾಗಿ ಅಧ್ಯಯನ ಮಾಡಿದ್ದೇನೆ. ಸಂವಿಧಾನದ ಶೆಡ್ಯೂಲ್ 10ರ ಪ್ರಕಾರ ಆರ್.ಶಂಕರ್, ರಮೇಶ್ ಜಾರಕಿಹೊಳಿ ಹಾಗೂ ಮಹೇಶ್ ಕುಮಟಹಳ್ಳಿ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿದ್ದೇನೆ ಎಂದು ತೀರ್ಪು ನೀಡಿದ್ದಾರೆ.
ಒಟ್ಟು 17 ಶಾಸಕರ ರಾಜೀನಾಮೆ ವಿಚಾರ ಸ್ಪೀಕರ್ ಕೋರ್ಟ್ ಮುಂದೆ ಇದೆ. ರಾಜ್ಯಪತ್ರದಲ್ಲಿ ರಾಣೇಬೆನ್ನೂರು ಶಾಸಕ ಶಂಕರ್ ಕೆಪಿಜೆಪಿ ಪಕ್ಷದಿಂದ ಆಟೋ ಚಿಹ್ನೆಯಡಿ ಗೆದ್ದು ಬಂದಿದ್ದಾರೆ. ಜೂನ್ 16ನೇ ತಾರೀಖು ಸಿಎಲ್ಪಿ ನಾಯಕರಾದ ಸಿದ್ದರಾಮಯ್ಯ ಅವರು ನನಗೆ ಪತ್ರ ಬರೆದು, ಕೆಪಿಜೆಪಿ ಪಕ್ಷದ ಶಾಸಕರಾಗಿರುವ ಶಂಕರ್ ಅವರು ತಮ್ಮ ಪಕ್ಷವನ್ನು ಕಾಂಗ್ರೆಸ್ನೊಂದಿಗೆ ವಿಲೀನ ಮಾಡಿದ್ದಾರೆ. ತಾವು ಮುಂದಿನ ಕ್ರಮ ಜರುಗಿಸಬೇಕು ಎಂದು ದೂರು ನೀಡಿದ್ದಾರೆ. ಈ ಸಂಬಂಧ ನಾನು ಅವರಿಂದ ಕೆಲವು ದಾಖಲಾತಿಗಳನ್ನು ಕೇಳಿದ್ದೆ. ಅವುಗಳನ್ನು ಅವರು ನನಗೆ ಒದಗಿಸಿದ್ದಾರೆ. ಶಂಕರ್ ಕಾಂಗ್ರೆಸ್ ಸದಸ್ಯರಾದ್ದರಿಂದ ಕಾಂಗ್ರೆಸ್ ಸಾಲಿನಲ್ಲಿ ಅವರಿಗೆ ಸದನದಲ್ಲಿ ಆಸನದ ವ್ಯವಸ್ಥೆ ಮಾಡಬೇಕೆಂದು ನಾನೇ ನಿರ್ದೇಶನ ನೀಡಿದ್ದ ದಾಖಲೆಯನ್ನು ಅವರು ನನಗೆ ಸಲ್ಲಿಸಿದ್ದಾರೆ. ಹೀಗಾಗಿ, ಅವರು ಅಧಿಕೃತವಾಗಿ ಕಾಂಗ್ರೆಸ್ ಸದಸ್ಯರಾಗಿದ್ದಾರೆ. ಪಕ್ಷಾಂತರ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಪಾಯವನ್ನು ಬುಡಮೇಲು ಮಾಡುತ್ತದೆ. ಅದನ್ನು ತಡೆಗಟ್ಟುವ ಕಾರಣದಿಂದಲೇ ಪಕ್ಷಾಂತರ ಕಾಯ್ದೆ ತರಲಾಗಿದೆ. 1985ರಲ್ಲಿ 10ನೇ ಶೆಡ್ಯುಲ್ ಅನ್ನು ಸೇರಿಸಲಾಗಿದೆ. ಪಕ್ಷಾಂತರ ಕಾಯ್ದೆ ಮೂಲ ಉದ್ದೇಶದಂತೆ ಶೆಡ್ಯೂಲ್ 10ರ ಪ್ರಕಾರ ಆರ್.ಶಂಕರ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುತ್ತಿದ್ದೇನೆ. ಇನ್ನು ಮುಂದೆ ಅವರು 15ನೇ ವಿಧಾನಸಭೆಯ ಅಧಿಕಾರಾವಧಿ 2023ರ ಮೇ 22, ರವರೆಗೆ ಆರ್ಟಿಕಲ್ 191 ರ ಪ್ರಕಾರ ಶಾಸಕ ಶಂಕರ್ ಅವರು ಅನರ್ಹಗೊಂಡಿರುತ್ತಾರೆ ಎಂದು ಸ್ಪೀಕರ್ ಆದೇಶಿಸಿದ್ದಾರೆ.