ಬೆಂಗಳೂರು, ಜು.26- ಕಸ ವಿಲೇವಾರಿಗೆ ಕಣ್ಣೂರಿನಲ್ಲಿ ಮಾತ್ರ ಜಾಗ ಇದೆ. ಹಾಗಾಗಿ ಇನ್ನೂ ನಾಲ್ಕು ಕಡೆ ತ್ಯಾಜ್ಯ ವಿಲೇವಾರಿ ಘಟಕ ತೆರೆಯಬೇಕಾಗಿದೆ.
ಆದ್ದರಿಂದ ಇನ್ನೂ ನಾಲ್ಕು ಪ್ರದೇಶಗಳನ್ನು ಗುರುತಿಸಿ ಮಾಹಿತಿ ನೀಡಬೇಕು ಎಂದು ಮೇಯರ್ ಗಂಗಾಂಬಿಕೆ ಇಂದಿಲ್ಲಿ ಅಧಿಕಾರಿಗಳಿಗೆ ಆದೇಶಿಸಿದರು.
ನಗರದಲ್ಲಿ ಸಮರ್ಪಕ ತ್ಯಾಜ್ಯ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಲು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್, ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ, ಪಾಲಿಕೆ ಸದಸ್ಯರು ಮತ್ತು ಆಡಳಿತ ಪಕ್ಷದ ನಾಯಕರು ಹಾಗೂ ಅಧಿಕಾರಿಗಳೊಂದಿಗೆ ಮೇಯರ್ ಸಭೆ ನಡೆಸಿದರು.
ನಗರದಲ್ಲಿ ಕಸದ ಸಮಸ್ಯೆ ಬಿಗಡಾಯಿಸುತ್ತಿದೆ. ಬೆಳ್ಳಳ್ಳಿ ಕ್ವಾರಿ ಭರ್ತಿಯಾಗುತ್ತಿರುವುದರಿಂದ ಕೂಡಲೇ ಮಿಟಗಾನಹಳ್ಳಿ ಕ್ವಾರಿಗೆ ತ್ಯಾಜ್ಯ ವಿಲೇವಾರಿ ಮಾಡಲು ಕ್ರಮ ವಹಿಸುವಂತೆ ಮೇಯರ್ ಸೂಚಿಸಿದರು.
ನಗರದಲ್ಲಿ ಕಳೆದ ಮೂರು ದಿನಗಳಿಂದ ಸಮರ್ಪಕವಾಗಿ ಕಸ ವಿಲೇವಾರಿ ಆಗಿಲ್ಲ. ಹಾಗಾಗಿ ಹಲವೆಡೆ ತ್ಯಾಜ್ಯ ರಾರಾಜಿಸುತ್ತಿದೆ. ಜನ ಹಿಡಿಶಾಪ ಹಾಕುತ್ತಿದ್ದಾರೆ. ಆದ್ದರಿಂದ ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿ ಶೀಘ್ರ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಿ ಎಂದು ಆದೇಶಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿಯೊಬ್ಬರು ಬೆಳ್ಳಳ್ಳಿ ಕ್ವಾರಿ ಭರ್ತಿಯಾಗಿರುವುದರಿಂದ ಸಮಸ್ಯೆ ಬಿಗಡಾಯಿಸಿದೆ. ಇದಕ್ಕೆ ಸಮೀಪದಲ್ಲೇ ಮಿಟಗಾನಹಳ್ಳಿ ಕ್ವಾರಿ ಇದ್ದು, ಅಲ್ಲಿ ಮಿಶ್ರ ತ್ಯಾಜ್ಯ ವಿಲೇವಾರಿ ಮಾಡಬಹುದು. ಒಂದು ವಾರದೊಳಗೆ ಎಲ್ಲ ತಯಾರಿ ಮಾಡಿಕೊಂಡು ಕಸ ವಿಲೇವಾರಿ ಮಾಡಲಾಗುವುದು ಎಂದು ತಿಳಿಸಿದರು.
ಬಲ್ಕ್ ಜನರೇಟರ್ಗಳಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ ಸಂಗ್ರಹಕ್ಕೂ ಪ್ರತ್ಯೇಕ ಟೆಂಡರ್ ಕರೆಯಲಾಗುತ್ತಿದ್ದು, ಇದಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಒಣ ಕಸ ವಿಲೇವಾರಿ ಮಾಡಲು ಈಗಾಗಲೇ ಚಿಂದಿ ಆಯುವವರಿಗೆ ಹಾಗೂ ಎನ್ಜಿಒಗಳಿಗೆ ಜವಾಬ್ದಾರಿ ನೀಡಲಾಗಿದೆ. 8 ಸಾವಿರ ಚಿಂದಿ ಆಯುವವರಿದ್ದು, ಇವರು ಒಣ ಕಸ ಸಂಗ್ರಹಿಸಿ ಸಂಸ್ಕರಣಾ ಘಟಕಗಳಿಗೆ ಕಳುಹಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಕಟ್ಟಡ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಮಾಲೀಕರು ಹಾಕುತ್ತಿದ್ದಾರೆ. ಇದರಿಂದ ಸ್ಥಳೀಯರಿಗೆ ತೀವ್ರ ಸಮಸ್ಯೆಯಾಗುತ್ತಿದೆ. ಕೂಡಲೇ ಇಂತಹ ತ್ಯಾಜ್ಯವನ್ನು ಕಣ್ಣೂರಿನಲ್ಲಿ ಗುರುತಿಸಿರುವ ಸ್ಥಳಕ್ಕೆ ವಿಲೇವಾರಿ ಮಾಡಲು ಸೂಕ್ತ ಕ್ರಮ ಕೈಗೊಳ್ಳಿ ಎಂದು ಗಂಗಾಂಬಿಕೆ ಸೂಚಿಸಿದರು.
ಪ್ರಾಣಿತ್ಯಾಜ್ಯ ವಿಲೇವಾರಿಗೆ ಟೆಂಡರ್: ನಗರದಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ಮಾಂಸದ ಮಳಿಗೆಗಳಿದ್ದು, ದಿನಾ 40 ಟನ್ ಪ್ರಾಣಿ ತ್ಯಾಜ್ಯ ಉತ್ಪತ್ತಿಯಾಗುತ್ತಿದೆ. ಭಾನುವಾರ ಹಾಗೂ ವಿಶೇಷ ದಿನಗಳಲ್ಲಿ 80 ರಿಂದ 90 ಟನ್ ಉತ್ಪತ್ತಿಯಾಗುತ್ತದೆ. ಈ ಸಂಬಂಧ 8 ವಲಯಗಳಲ್ಲಿ ಪ್ರತ್ಯೇಕ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ.
ಗುತ್ತಿಗೆದಾರರೇ ಸಂಸ್ಕರಣಾ ಘಟಕ ಹೊಂದಿರಬೇಕು. ಮುಚ್ಚಿದ ಆಟೋಗಳ ಮೂಲಕ ಅವರು ಪ್ರಾಣಿತ್ಯಾಜ್ಯವನ್ನು ಸಂಸ್ಕರಣಾ ಘಟಕಗಳಿಗೆ ಕೊಂಡೊಯ್ಯಲಿದ್ದಾರೆ ಎಂದು ಘನತ್ಯಾಜ್ಯ ವಿಭಾಗದ ಅಧಿಕಾರಿ ಮೇಯರ್ ಅವರಿಗೆ ತಿಳಿಸಿದರು.
ಇದಕ್ಕೆ ಆಯುಕ್ತ ಮಂಜುನಾಥ ಪ್ರಸಾದ್ ಪ್ರತಿಕ್ರಿಯಿಸಿ ಟೆಂಡರ್ ಜಾರಿಯಾದ ಬಳಿಕ ಪ್ರಾಣಿತ್ಯಾಜ್ಯವನ್ನು ಗುತ್ತಿಗೆದಾರರಿಗೆ ಕೊಡದ ಮಳಿಗೆಗಳ ಪರವಾನಗಿಯನ್ನು ರದ್ದುಗೊಳಿಸಿ ಎಂದು ಸೂಚಿಸಿದರು.