
ಬೆಂಗಳೂರು, ಜು.26- ಆಗಸ್ಟ್ 15 ರಂದು ಮಾಣಿಕ್ಷಾ ಪೆರೇಡ್ ಮೈದಾನದಲ್ಲಿ ಆಚರಿಸಲಾಗುವ 73ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸೂಕ್ತ ಭದ್ರತಾ ವ್ಯವಸ್ಥೆಗಾಗಿ ಸಕಲ ಸಿದ್ದತೆಯನ್ನು ಕೈಗೊಳ್ಳಲಾಗಿದೆ ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಅಲೋಕ್ ಕುಮಾರ್ ತಿಳಿಸಿದರು.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮಕ್ಕೆ ಸೂಕ್ತ ಭದ್ರತೆ ಒದಗಿಸುವ ಸಂಬಂಧ ಕರೆದಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಈ ಭಾಗದಲ್ಲಿ ಮೆಟ್ರೋ ಕಾಮಗಾರಿ ನಡೆಯುತ್ತಿರುವುದರಿಂದ ಸುಗಮ ಸಂಚಾರಕ್ಕೆ ಕ್ರಮ ಕೈಗೊಳ್ಳಬೇಕು ಜೊತೆಗೆ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಸ್ಥಳ ನಿಗದಿಪಡಿಸುವಂತೆ ಸಂಚಾರ ಪೊಲೀಸ್ ಆಯುಕ್ತರಿಗೆ ನಿರ್ದೇಶಿಸಿದರಲ್ಲದೆ, ಬಿಎಸ್ಎಫ್, ಏರ್ಫೋರ್ಸ್, ಮಹಿಳಾ ಸಿಆರ್ಪಿಎಫ್, ಕೆಎಸ್ಆರ್ಪಿ, ಸಿವಿಲ್ ಪೊಲೀಸ್, ಸಿಬ್ಬಂದಿಗಳು, ಎನ್ಸಿಸಿ ಹಾಗೂ ಶಾಲಾ ಮಕ್ಕಳು ಸೇರಿದಂತೆ ಇನ್ನಿತರ ತುಕಡಿಗಳಿಗೆ ಆಗಸ್ಟ್ 09, 10, ಮತ್ತು 13 ರಂದು ಪೂರ್ವಸಿದ್ದತಾ ಪಥಸಂಚಲನ ತಾಲೀಮನ್ನು ಮಾಣಿಕ್ಷಾ ಪೆರೇಡ್ ಮೈದಾನದಲ್ಲಿ ನಡೆಸಲಾಗುವುದು ಎಂದರು.
ಕಾರ್ಯಕ್ರಮ ನಡೆಯುವ ವೇಳೆ ಮೈದಾನದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸುವುದರೊಂದಿಗೆ ಸೂಕ್ತ ವಿದ್ಯುತ್ ವ್ಯವಸ್ಥೆ, ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ, ಅಂಬ್ಯುಲೆನ್ಸ್ ಹಾಗೂ ಅಗ್ನಿ ಶಾಮಕ ವಾಹನ ಸೌಲಭ್ಯ, ಬಸ್ ವ್ಯವಸ್ಥೆ, ಒದಗಿಸುವಂತೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಪ್ರಸಕ್ತ ವರ್ಷದ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಏರ್ಪಡಿಸುವ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ವಿಭಿನ್ನ ರೀತಿಯಲ್ಲಿ ಆಯೋಜಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತರಾದ ಮುರುಗನ್, ಅಪರಾಧ ನಿಯಂತ್ರಣಾ ವಿಭಾಗದ ಪೊಲೀಸ್ ಆಯುಕ್ತರಾದ ರವಿಕಾಂತೇಗೌಡ, ಜಂಟಿ ಪೊಲೀಸ್ ಆಯುಕ್ತರಾದ ಸುರೇಶ್ಬಾಬು, ಸಾರ್ವಜನಿಕ ಶಿಕ್ಷಣ ಇಲಾಖೆ, ಲೋಕೋಪಯೋಗಿ, ಬಿಬಿಎಂಪಿ, ಬಿಡಬ್ಲ್ಯೂಎಸ್ಎಸ್ಬಿ, ಬೆಸ್ಕಾಂ, ಅಗ್ನಿಶಾಮಕ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.