ಟ್ರಿಪೋಲಿ (ಲಿಬಿಯಾ),ಜು.26– ಮೆಡಿಟೇರಿಯನ್ ಸಮುದ್ರದ ಮೂಲಕ ಲಿಬಿಯಾದಿಂದ ಯೂರೋಪ್ಗೆ ಅಕ್ರಮವಾಗಿ ನುಸುಳಲು ಎರಡು ನೌಕೆಗಳಲ್ಲಿ ತೆರಳುತ್ತಿದ್ದ 150ಕ್ಕೂ ಹೆಚ್ಚು ವಲಸಿಗರು ಜಲಸಮಾಧಿಯಾಗಿರುವ ದುರಂತ ನಿನ್ನೆ ಸಂಭವಿಸಿದೆ.
ಅಕ್ರಮ ವಲಸಿಗರಿಗೆ ಮೆಡಿಟೇರಿಯನ್ ಸಮುದ್ರ ಮೃತ್ಯುಕೂಪವಾಗಿ ಸಂಭವಿಸಿದ್ದು, ಈ ವರ್ಷ ಸಂಭವಿಸಿದ ಅತ್ಯಂತ ಘೋರ ದುರಂತ ಇದಾಗಿದೆ.
ಲಿಬಿಯಾದ ಕರಾವಳಿ ನಗರಿ ಟ್ರಿಪೋಲಿಯಿಂದ 75 ಕಿ.ಮೀ. ದೂರವಿರುವ ಸಮುದ್ರದಲ್ಲಿ ಪ್ರತಿಕೂಲ ಹವಾಮಾನದಿಂದ ಈ ಎರಡು ದೋಣಿಗಳು ಮುಳುಗಿ 150ಕ್ಕೂ ಹೆಚ್ಚು ಅಕ್ರಮ ವಲಸಿಗರು ಜಲಸಮಾಧಿಯಾಗಿದ್ದಾರೆ ಅಥವಾ ನಾಪತ್ತೆಯಾಗಿದ್ದಾರೆ ಎಂದು ಕರಾವಳಿ ರಕ್ಷಣಾ ಪಡೆಯ ವಕ್ತಾರ ಅಯೂಬ್ಗಸ್ಸಿಮ್ ತಿಳಿಸಿದ್ದಾರೆ.
137 ವಲಸಿಗರನ್ನು ರಕ್ಷಿಸಿ ಅವರನ್ನು ಸುರಕ್ಷಿತವಾಗಿ ಲಿಬಿಯಾಗೆ ವಾಪಸ್ ಕರೆತರಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನೌಕಾಯಾನಕ್ಕೆ ಯೋಗ್ಯವಲ್ಲದ ಎರಡು ದೋಣಿಗಳಲ್ಲಿ ಸುಮಾರು 300 ಮಂದಿ ವಲಸಿಗರು ಲಿಬಿಯಾದಿಂದ ಯೂರೋಪ್ಗೆ ಖಂಡಕ್ಕೆ ಪಲಾಯನವಾಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
ಕಳೆದ ವರ್ಷ ಇದೇ ಮೆಡಿಟೇರಿಯನ್ ಸಮುದ್ರದಲ್ಲಿ ವಲಸಿಗರ ಅನೇಕ ನೌಕೆಗಳು ದುರಂತಕ್ಕೀಡಾಗಿ ನೂರಾರು ಮಂದಿ ಸಾವಿಗೀಡಾಗಿದ್ದಾರೆ. ಈ ವರ್ಷ ಲಿಬಿಯಾದಿಂದ ಐರೋಪ್ಯ ಖಂಡದ ವಿವಿಧ ದೇಶಗಳಿಗೆ 37,555 ಮಂದಿ ವಲಸಿಗರು ಸಮುದ್ರ ಮಾರ್ಗವಾಗಿ ಹಾಗೂ 8700 ಮಂದಿ ಭೂ ಮಾರ್ಗವಾಗಿ ತಲುಪಿದ್ದಾರೆ.