ಬೆಂಗಳೂರು, ಜು.26- ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುತ್ತಿರುವ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಬೆಂಗಳೂರು ನಗರದಲ್ಲಿ ಚುನಾಯಿತರಾಗಿರುವ ಬಿಜೆಪಿಯ ಶಾಸಕರ ವರ್ಚಸ್ಸು ಹಾಗೂ ಪಕ್ಷಕ್ಕೆ ನೀಡಿರುವ ಕೊಡುಗೆಯ ಕುರಿತಂತೆ ಸವಿವರವಾದ ವರದಿಯನ್ನು ಹೈಕಮಾಂಡ್ ಪಡೆದುಕೊಂಡಿದೆ.
ಈ ಬಾರಿ ಸಮರ್ಥರನ್ನು ಮತ್ತು ಪಕ್ಷಕ್ಕೆ ನಿಷ್ಠರಾಗಿ ದುಡಿದಿರುವ ಹೊಸ ಮುಖಗಳಿಗೆ ಅವಕಾಶ ಮಾಡಿಕೊಡಲು ಚಿಂತನೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನಗೊಂಡ ನಂತರ ಅಮಿತ್ ಶಾ ನೇತೃತ್ವದಲ್ಲಿ ತಂಡವೊಂದು ರಹಸ್ಯ ಸಮೀಕ್ಷೆ ನಡೆಸಿ ಈಗಾಗಲೇ ವರದಿ ನೀಡಿದ್ದು , ಸದ್ಯಕ್ಕೆ ಕನಿಷ್ಠ ಮೂವರು ಮಂತ್ರಿ ಸ್ಥಾನ ಪಡೆಯುವುದು ನಿಶ್ಚಿತ ಎಂದು ಮೂಲಗಳು ಖಚಿತಪಡಿಸಿವೆ.
ಆರ್.ಅಶೋಕ್ ಅವರು ಉಪ ಮುಖ್ಯಮಂತ್ರಿ ರೇಸ್ನಲ್ಲಿದ್ದರೆ, ಇನ್ನು ಗೋವಿಂದರಾಜನಗರದ ವಿ.ಸೋಮಣ್ಣ, ಮಲ್ಲೇಶ್ವರದ ಡಾ.ಸಿ.ಎನ್.ಅಶ್ವತ್ಥನಾರಾಯಣ ಅಥವಾ ಯಲಹಂಕದ ಎಸ್.ಆರ್.ವಿಶ್ವನಾಥ್, ಸಿ.ವಿ.ರಾಮನ್ನಗರದ ಎಸ್.ರಘು ಅವರ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿವೆ.
ಮುಂದಿನ ದಿನಗಳಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೇರುವ ಕೆಲವರಿಗೆ ಅವಕಾಶ ಮಾಡಿಕೊಡಲು ಕೂಡ ಆಲೋಚನೆ ಮಾಡಲಾಗಿದ್ದು, ಪ್ರಸ್ತುತ ಮೊದಲನೆ ಅವಧಿಯಲ್ಲಿ ಈ ಹೆಸರುಗಳು ಪ್ರಮುಖವಾಗಿ ಕೇಳಿ ಬರುತ್ತಿದೆ.
ಡಾ.ಅಶ್ವತ್ಥನಾರಾಯಣ ಅವರು ಮೂರನೆ ಬಾರಿ ಶಾಸಕರಾಗಿದ್ದಾರೆ. ಮತ್ತು ಅವರಿಗೆ ಸಂಘ ಪರಿವಾರದ ಗ್ರೀನ್ ಸಿಗ್ನಲ್ ಕೂಡ ಸಿಕ್ಕಿದೆ. ಇನ್ನು ವಿ.ಸೋಮಣ್ಣ ಅವರು ಬೆಂಗಳೂರು ಭಾಗದ ಪ್ರಭಾವಿ ನಾಯಕರಾಗಿದ್ದು, ಲಿಂಗಾಯತ ಸಮುದಾಯದಲ್ಲಿ ತಮ್ಮದೇ ಆದ ವರ್ಚಸ್ಸು ಹೊಂದಿದ್ದಾರೆ.
ಇನ್ನು ಯಲಹಂಕ ಶಾಸಕ ವಿಶ್ವನಾಥ್ ಕೂಡ ಮೂರು ಬಾರಿ ಚುನಾಯಿತರಾಗಿದ್ದು, ಒಕ್ಕಲಿಗ ಕೋಟಾದಲ್ಲಿ ಅವರನ್ನು ಪರಿಗಣಿಸಲಾಗುತ್ತಿದೆ. ಆದರೆ ಅಶ್ವತ್ಥನಾರಾಯಣ ಅವರು ಕೂಡ ಒಕ್ಕಲಿಗ ಸಮುದಾಯದವರೇ ಆಗಿರುವುದರಿಂದ ಅಳೆದು ತೂಗಿ ಹೈಕಮಾಂಡ್ ತೀರ್ಮಾನ ಕೈಗೊಳ್ಳಲಿದೆ.
ಇನ್ನು ಸಿ.ವಿ.ರಾಮನ್ನಗರ ಕ್ಷೇತ್ರದ ಶಾಸಕ ಎಸ್.ರಘು ಅವರು ಕಳೆದ 30 ವರ್ಷಗಳಿಂದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದು, ಪಾಲಿಕೆ ಸದಸ್ಯರಾಗಿ ಮೂರು ಬಾರಿ, ಶಾಸಕರಾಗಿ ನಾಲ್ಕನೆ ಬಾರಿ ಆಯ್ಕೆಯಾಗಿದ್ದು, ಪರಿಶಿಷ್ಟ ಪಂಗಡಕ್ಕೆ ಸೇರಿರುವುದರಿಂದ ಈ ಹಿಂದೆ ಯಾವುದೇ ಸ್ಥಾನಕ್ಕೆ ಲಾಬಿ ನಡೆಸದೆ ತಮ್ಮದೇ ಆದ ಪಕ್ಷಕ್ಕೆ ನಿಷ್ಠರಾಗಿ ಸೇವೆ ಸಲ್ಲಿಸಿದ್ದರು. ಇದರಿಂದಾಗಿ ಇವರ ಹಿರಿತನವನ್ನು ಕೂಡ ಪರಿಗಣಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
ಇನ್ನು ಮಹದೇವಪುರದಿಂದ ಮೂರನೆ ಬಾರಿ ಆಯ್ಕೆಯಾಗಿರುವ ಮಾಜಿ ಸಚಿವ ಅರವಿಂದ ಲಿಂಬಾವಳಿ ಮತ್ತು ಹಿರಿಯ ಮುಖಂಡ ಹಾಗೂ ಮಾಜಿ ಸಚಿವ, ರಾಜಾಜಿನಗರ ಕ್ಷೇತ್ರದ ಶಾಸಕ ಎಸ್.ಸುರೇಶ್ಕುಮಾರ್ ಅವರಿಗೆ ಬೇರೆ ಸ್ಥಾನಮಾನ ನೀಡುವ ಲೆಕ್ಕಾಚಾರಗಳು ನಡೆದಿವೆ.