
ಬೆಂಗಳೂರು, ಜು.26-ಬಿಜೆಪಿಗೆ ಸಂಖ್ಯಾಬಲ ಇಲ್ಲದ ಕಾರಣ ಸರ್ಕಾರ ರಚನೆಯ ಹಕ್ಕು ಮಂಡನೆಯಾಗಲಿ ಅಥವಾ ಪ್ರಮಾಣ ವಚನ ಸ್ವೀಕರಿಸುವುದಾಗಲಿ ಮಾಡುವಂತಿಲ್ಲ ಎಂದು ಕಾಂಗ್ರೆಸ್ ತಕರಾರು ತೆಗೆದಿದೆ.
ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ರಾಜ್ಯಪಾಲರು ಸಮ್ಮತಿಸಿದ ತಕ್ಷಣವೇ ಕಾಂಗ್ರೆಸ್ ಟ್ವಿಟ್ ಮಾಡಿದ್ದು ವಿರೋಧ ವ್ಯಕ್ತಪಡಿಸಿದೆ.
ಬಿಜೆಪಿ ಮತ್ತು ಯಡಿಯೂರಪ್ಪ ಅವರಿಗೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೂಲಭೂತ ಆಶಯಗಳು ಹಾಗೂ ಸಾಮಾನ್ಯ ಜ್ಞಾನದ ಅವಶ್ಯಕತೆ ಇದೆ. ಅಲ್ಲದೆ ಇವತ್ತು ಬಿಜೆಪಿಗೆ ಸಂಖ್ಯಾಬಲ ಇಲ್ಲ. ಹಾಗಾಗಿ ಯಾವುದೇ ಕಾರಣಕ್ಕೂ ಸರ್ಕಾರ ರಚಿಸಲು ಮುಂದಾಗಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಒಟ್ಟು 224 ಸಂಖ್ಯಾಬಲದ ವಿಧಾನಸಭೆಯಲ್ಲಿ ಬಿಜೆಪಿ 105, ಪಕ್ಷೇತರ 1 ಸೇರಿ 106 ಸಂಖ್ಯಾಬಲ ಹೊಂದಿದೆ. ಕಾಂಗ್ರೆಸ್ 79 ಶಾಸಕರನ್ನು ಹೊಂದಿದ್ದು, ಅದರಲ್ಲಿ 3 ಜನ ಅನರ್ಹಗೊಂಡಿದ್ದಾರೆ. ರಾಜೀನಾಮೆ ನೀಡಿರುವ 13 ಮಂದಿ ನೋಟಿಸ್ ಪಡೆದಿರುವ ಶ್ರೀಮಂತ ಪಾಟೀಲ್ ಒಳಗೊಂಡು ಒಟ್ಟು ಕಾಂಗ್ರೆಸ್ 76 ಸ್ಥಾನಗಳನ್ನು ಹೊಂದಿದೆ. ಜೆಡಿಎಸ್ ರಾಜೀನಾಮೆ ನೀಡಿರುವ ಶಾಸಕರನ್ನೂ ಒಳಗೊಂಡಂತೆ 37 ಸಂಖ್ಯಾಬಲ ಹೊಂದಿದೆ. ಒಟ್ಟು ಕಾಂಗ್ರೆಸ್‍ನ 76, ಜೆಡಿಎಸ್ 37 ಸೇರಿದರೆ ಮೈತ್ರಿ ಪಕ್ಷದ ಬಲಾಬಲ 113ರಷ್ಟಿದೆ. ಒಂದು ಸಭಾಧ್ಯಕ್ಷರು, ಮತ್ತೊಬ್ಬ ಬಿಎಸ್‍ಪಿ ಶಾಸಕರ ಸೇರಿದರೆ ದೋಸ್ತಿ ಪಕ್ಷಗಳ ಬಲಾಬಲ 115 ಆಗುತ್ತದೆ.
ಬಿಜೆಪಿ ಹೊಂದಿರುವುದು ಕೇವಲ 106 ಮಾತ್ರ.
3 ಮಂದಿ ಶಾಸಕರು ಅನರ್ಹಗೊಂಡ ನಂತರ ವಿಧಾನಸಭೆಯ ಸಂಖ್ಯಾಬಲ 221ರಷ್ಟಿದೆ. ಬಹುಮತ ಸಾಬೀತಿಗೆ 111 ಮಂದಿ ಸಂಖ್ಯಾಬಲ ಬೇಕು. ಬಿಜೆಪಿ 106 ಮಂದಿಯನ್ನಿಟ್ಟುಕೊಂಡು ಅದು ಹೇಗೆ ಸರ್ಕಾರ ರಚಿಸಲು ಸಾಧ್ಯ? ಪ್ರಮಾಣ ವಚನ ಹೇಗೆ ಸ್ವೀಕರಿಸಲು ಸಾಧ್ಯ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.