ನವದೆಹಲಿ, ಜು.26- ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲಿ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಸವಾಲು ಎಸೆದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಅಂತಿಮವಾಗಿ ಸಂಖ್ಯಾಬಲ ಬಹಳ ಮುಖ್ಯ. ಯಡಿಯೂರಪ್ಪ ಅವರು ಬಹುಮತ ಸಾಬೀತುಪಡಿಸಬೇಕು. ವಿಧಾನಸಭೆಯಲ್ಲಿ ಅವರು ತಮ್ಮ ಸಂಖ್ಯಾಬಲ ಪ್ರದರ್ಶಿಸಿದ ನಂತರ ಮುಖ್ಯಮಂತ್ರಿಯಾಗಿ ಮುಂದುವರೆಯಬಹುದು ಎಂದು ಹೇಳಿದರು.
ವಿಶ್ವಾಸಮತ ಸಾಬೀತಿಗೆ ನಮ್ಮ ಆಕ್ಷೇಪಣೆ ಇಲ್ಲ. ಯಡಿಯೂರಪ್ಪ ಅವರು ಯಾವ ದಾಳ ಇಟ್ಟುಕೊಂಡಿದ್ದಾರೆ ಎಂದು ನಮಗೆ ಗೊತ್ತಿಲ್ಲ. ಮೈತ್ರಿ ಪಕ್ಷದ ಸರ್ಕಾರವನ್ನಂತೂ ಕೆಳಗಿಳಿಸಿ ಆಗಿದೆ. ಮುಂದೆ ಏನು ಮಾಡುತ್ತಾರೆ ಎಂಬುದನ್ನು ನೋಡೋಣ ಎಂದರು.
ಜು.31ರೊಳಗೆ ಹಣಕಾಸು ಮಸೂದೆ ಪಾಸಾಗಬೇಕಿದೆ. ಇಲ್ಲದೆ ಹೋದರೆ ಆಡಳಿತಾತ್ಮಕ ಸಮಸ್ಯೆಗಳು ಎದುರಾಗುತ್ತವೆ. ಹಣಕಾಸು ಮಸೂದೆ ಬಗ್ಗೆ ಕಾಂಗ್ರೆಸ್ ಅಡ್ಡಿಪಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಅತೃಪ್ತ ಶಾಸಕರಿಗೆ ತಮ್ಮ ಜೊತೆಯೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವಂತೆ ಮಾಡುವುದಾಗಿ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಈಗ ಏನು ಮಾಡುತ್ತಾರೆ ಎಂಬುದನ್ನು ಕಾದುನೋಡುತ್ತೇವೆ ಎಂದರು.
ನಾನು ಪ್ರತಿಪಕ್ಷ ನಾಯಕನ ಸ್ಥಾನದ ಆಕಾಂಕ್ಷಿಯಲ್ಲ. ನಮ್ಮಲ್ಲಿ ದೊಡ್ಡ ದೊಡ್ಡ ನಾಯಕರಿದ್ದಾರೆ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಶಾಸಕಾಂಗ ಪಕ್ಷದ ನಾಯಕರು ಅದನ್ನು ನಿಭಾಯಿಸಿಕೊಳ್ಳುತ್ತಾರೆ ಎಂದು ಹೇಳಿದರು.
ವಿಧಾನಸಭಾಧ್ಯಕ್ಷ ರಮೇಶ್‍ಕುಮಾರ್ ಅವರು ಮೂರು ಜನ ಶಾಸಕರನ್ನು ಅನರ್ಹಗೊಳಿಸಿ ನಿನ್ನೆ ನೀಡಿರುವ ತೀರ್ಪಿನ ಬಗ್ಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಸ್ಪೀಕರ್ ಅವರು ಅತ್ಯಂತ ಹಿರಿಯರು ಮತ್ತು ಅನುಭವಿಗಳು. ಕಾನೂನಾತ್ಮಕವಾಗಿ ಮತ್ತು ಸಂವಿಧಾನಾತ್ಮಕವಾಗಿ ಅವರು ಎಲ್ಲವನ್ನು ಪರಿಶೀಲಿಸಿ ಕಾನೂನಿನ ಚೌಕಟ್ಟನ್ನು ಮೀರದಂತೆ ನಿರ್ಧಾರ ತೆಗೆದುಕೊಂಡಿದ್ದಾರೆ.
ಪ್ರತಿಯೊಂದು ರಾಜಕೀಯ ಪಕ್ಷಕ್ಕೂ ವಿಪ್ ನೀಡುವ ಅಧಿಕಾರ ಇದೆ. ಅದನ್ನು ಆಧರಿಸಿ ಶಾಸಕಾಂಗ ಪಕ್ಷಗಳು ದೂರು ನೀಡಿವೆ. ಸ್ಪೀಕರ್ ಅವರು ವಿಚಾರಣೆ ನಡೆಸಿ ಕ್ರಮಕೈಗೊಂಡಿದ್ದಾರೆ ಎಂದು ಹೇಳಿದರು.
ನಾನು ದೆಹಲಿಗೆ ಬಂದಿರುವುದು ಸುಪ್ರೀಂಕೋರ್ಟ್‍ನಲ್ಲಿ ನನ್ನ ಕುರಿತು ನಡೆಯುತ್ತಿರುವ ವಿಚಾರಣೆಯೊಂದರಲ್ಲಿ ಭಾಗವಹಿಸಲು, ಈ ಸಂದರ್ಭದಲ್ಲಿ ಹೈಕಮಾಂಡ್‍ನ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇಲ್ಲ ಎಂದು ಹೇಳಿದರು.