
ಬೆಂಗಳೂರು, ಜು.26-ಬಹುಮತ ಇಲ್ಲದೆ ಇದ್ದರೂ ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ಹೊರಟಿರುವುದು, ರಾಜ್ಯಪಾಲರು ಅದಕ್ಕೆ ಒಪ್ಪಿರುವುದು ಸಂಸದೀಯ ಪ್ರಜಾಪ್ರಭುತ್ವಕ್ಕೆ ಮಾರಕವಾದ ಬೆಳವಣಿಗೆಗಳು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಟ್ವೀಟರ್ನಲ್ಲಿ ವಿರೋಧ ವ್ಯಕ್ತಪಡಿಸಿರುವ ಅವರು, ಬಿಜೆಪಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. 105 ಶಾಸಕರನ್ನು ಹೊಂದಿರುವ ಬಿಜೆಪಿ ಬಹುಮತ ಸಾಬೀತುಪಡಿಸಲು ಹೇಗೆ ಸಾಧ್ಯ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಇದೇ ಸಂದರ್ಭದಲ್ಲಿ ಟ್ವೀಟರ್ ಮೂಲಕವೇ ತಮ್ಮ ವಿರೋಧ ವ್ಯಕ್ತಪಡಿಸಿದ್ದು, ಅಸ್ತಿತ್ವದಲ್ಲಿದ್ದ ಸರ್ಕಾರವನ್ನು ಅನೈತಿಕವಾಗಿ ಬೀಳಿಸುವುದು, ಬಹುಮತ ಇಲ್ಲದ ಸರ್ಕಾರವನ್ನು ಅನೈತಿಕವಾಗಿ ರಚಿಸುವುದು ಬಿಜೆಪಿಯವರ ಕಾರ್ಯವೈಖರಿ. ನೈತಿಕವಾಗಿ ಏನನ್ನೂ ಮಾಡುವುದಕ್ಕೆ ಬಿಜೆಪಿಯವರಿಗೆ ಬರುವುದೇ ಇಲ್ಲವೆ ಎಂದು ಪ್ರಶ್ನಿಸಿದ್ದಾರೆ.
ಕಳೆದ ಎರಡು ದಶಕಗಳಿಂದ ಸರ್ಕಾರವನ್ನು ಅಸ್ಥಿರಗೊಳಿಸುವುದೇ ಕರ್ನಾಟಕಕ್ಕೆ ಬಿಜೆಪಿ ನೀಡಿರುವ ಕೊಡುಗೆ ಎಂದು ಅವರು ಟೀಕಿಸಿದ್ದಾರೆ.