ಬೆಂಗಳೂರು, ಜು.26-ವಿಶ್ವಾಸಮತ ಯಾಚನೆಯಲ್ಲಿ ಸುಲಭವಾಗಿ ಗೆಲ್ಲಬಹುದಾದ ಅವಕಾಶಗಳನ್ನು ಕೈ ಚೆಲ್ಲಿದ ದೋಸ್ತಿ ಪಕ್ಷಗಳು ಬಿಜೆಪಿ ಸರ್ಕಾರ ರಚನೆಯ ವಿಶ್ವಾಸಮತ ಗೆಲ್ಲಲು ಅಷ್ಟೇ ಸಲೀಸಾದ ಹಾದಿ ಮಾಡಿಕೊಡುತ್ತಾರೆಯೇ ಎಂಬ ಅನುಮಾನ ಕಾಡಲಾರಂಭಿಸಿದೆ.
ಬಿಜೆಪಿ ಸದ್ಯಕ್ಕೆ 105 ಶಾಸಕರನ್ನು ಹೊಂದಿದ್ದು, ಪಕ್ಷೇತರ ಶಾಸಕ ನಾಗೇಶ್ ಸೇರಿದರೆ 106 ಬಲಾಬಲ ಆಗಲಿದೆ. ಜೆಡಿಎಸ್-ಕಾಂಗ್ರೆಸ್ನ ಸಂಖ್ಯಾಬಲ 101. ಇದರಲ್ಲಿ ಸ್ಪೀಕರ್ ಮತ್ತು ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿರುವ ನಾಗೇಂದ್ರ ಅವರೂ ಸೇರಿದ್ದಾರೆ.
ರಾಜೀನಾಮೆ ನೀಡಿ ಮುಂಬೈನಲ್ಲಿರುವವರನ್ನು ಹೊರತುಪಡಿಸಿದರೆ ರಾಜೀನಾಮೆ ನೀಡಿ ಮುಂಬೈನಲ್ಲಿ ಇಲ್ಲದೆ ಇರುವ ಡಾ.ಸುಧಾಕರ್, ಆನಂದ್ಸಿಂಗ್, ರೋಷನ್ಬೇಗ್ ಅವರುಗಳನ್ನು ಮನವೊಲಿಸುವ ಅವಕಾಶಗಳಿವೆ. ಮುಂಬೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶ್ರೀಮಂತ ಪಾಟೀಲ್ ಅವರನ್ನೂ ಮನವೊಲಿಸಬಹುದಾಗಿದೆ.
ಒಂದು ವೇಳೆ ಮನವೊಲಿಕೆ ಸಾಧ್ಯವಾಗಿದ್ದೇ ಆದರೆ ದೋಸ್ತಿ ಪಕ್ಷಗಳ ಸಂಖ್ಯಾಬಲ 105ಕ್ಕೆ ತಲುಪಲಿದೆ. ಅಲ್ಲಿಗೆ ಬಿಜೆಪಿ ಮತ್ತು ದೋಸ್ತಿ ಪಕ್ಷಗಳ ಬಲಾಬಲ ಸಮವಾಗಲಿದೆ.
ಪಕ್ಷೇತರ ಶಾಸಕರಾದ ನಾಗೇಶ್ ಅವರ ಪಾತ್ರ ಇಲ್ಲಿ ಮಹತ್ವದ್ದಾಗಿದ್ದು, ಕಳೆದ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ಬೆಂಬಲದಿಂದಲೇ ಗೆದ್ದಿರುವುದರಿಂದ ಅವರನ್ನೂ ಮನವೊಲಿಸಿ ದೋಸ್ತಿಗಳು ಸೆಳೆದಿದ್ದೇ ಆದರೆ ಯಡಿಯೂರಪ್ಪ ಸರ್ಕಾರ ವಿಶ್ವಾಸಮತಯಾಚನೆಯನ್ನು ಸೋಲಿಸುವ ಅವಕಾಶಗಳಿವೆ.
ಇದೇ ರೀತಿಯ ಸರ್ಕಸ್ನ್ನು ಕುಮಾರಸ್ವಾಮಿಯವರ ಸರ್ಕಾರ ಮಾಡಲು ಪ್ರಯತ್ನಿಸಿ ಕೊನೇ ಕ್ಷಣದಲ್ಲಿ ತಾಂತ್ರಿಕ ಕಾರಣಗಳಿಂದ ಕೈ ಚೆಲ್ಲಿತ್ತು. ಮುಂಬೈನಲ್ಲಿರುವ ಬಂಡಾಯಗಾರರು ಅಧಿವೇಶನಕ್ಕೆ ಬಾರದಿದ್ದರೂ ಹೊರಗಿನ ಶಾಸಕರ ಮೂಲಕವೇ ಬಹಳಷ್ಟು ರಾಜಕೀಯ ಬೆಳವಣಿಗೆಗಳಾಗುವ ಸಾಧ್ಯತೆ ಇದೆ. ಆದರೆ ದೋಸ್ತಿ ಪಕ್ಷಗಳ ನಾಯಕರು ಯಾವ ರೀತಿಯ ಹೆಜ್ಜೆಗಳನ್ನಿಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಇಂತಹ ಸನ್ನಿವೇಶ ಸೃಷ್ಟಿಯಾಗಲಿದೆ ಎಂಬುದನ್ನು ಅಂದಾಜಿಸಿರುವ ಬಿಜೆಪಿ ಜೆಡಿಎಸ್ನಿಂದ ಇಬ್ಬರು, ಕಾಂಗ್ರೆಸ್ನಿಂದ ಮೂರು ಮಂದಿ ಶಾಸಕರ ರಾಜೀನಾಮೆ ಕೊಡಿಸಲು ತಯಾರಿ ನಡೆಸಿದೆ. ಅದು ಯಶಸ್ವಿಯಾದರೆ ಬಿಜೆಪಿ ಸರ್ಕಾರ ವಿಶ್ವಾಸ ಮತ ಗಳಿಸುವಲ್ಲಿ ಯಶಸ್ವಿಯಾಗಲಿದ್ದು, ದೋಸ್ತಿ ಪಕ್ಷಗಳ ಸರ್ಕಾರ ಮರು ರಚನೆ ಕನಸು ಭಗ್ನವಾಗಲಿದೆ.