ಬೆಂಗಳೂರು: ದಿಢೀರ್ ರಾಜಕೀಯ ಬೆಳವಣಿಗೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು ರಾಜ್ಯಪಾಲ ವಜೂಭಾಯ್ ವಾಲಾ ಅವರಿಗೆ ಸರ್ಕಾರ ರಚನೆ ಮಾಡಲು ಹಕ್ಕು ಪ್ರತಿಪಾದನೆ ಮಾಡಿದ್ದಾರೆ. ಇಂದು ಸಂಜೆ 6 ರಿಂದ 6.15ರೊಳಗೆ ಪ್ರಮಾಣ ವಚನ ಸ್ವೀಕಾರ ಮಾಡಲು ರಾಜ್ಯಪಾಲರು ಅವಕಾಶ ನೀಡಿದ್ದಾರೆ.
ರಾಜಭವನದಲ್ಲಿ ನಡೆಯಲಿರುವ ಸರಳ ಸಮಾರಂಭದಲ್ಲಿ ಬಿಎಸ್‍ವೈ ಪ್ರಮಾಣ ಸ್ವೀಕಾರ ಮಾಡಲಿದ್ದು, ಏಕಾಂಗಿಯಾಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂಬ ಮಾಹಿತಿ ಲಭಿಸಿದೆ. ಈ ಮೂಲಕ ಬಿಎಸ್‍ವೈ ಅವರು 4ನೇ ಬಾರಿಗೆ ಸಿಎಂ ಆಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ. ಈ ಹಿಂದೆ ಮೂರು ಬಾರಿ ಪ್ರಮಾಣ ಸ್ವೀಕಾರ ಮಾಡಿದ್ದರು ಕೂಡ 5 ವರ್ಷ ಪೂರ್ಣಾವಧಿ ಮಾಡಿರಲಿಲ್ಲ.
ಇಂದು ಬೆಳಗ್ಗೆ ತಮ್ಮ ನಿವಾಸದ ಎದುರು ಮಾತನಾಡಿದ್ದ ಬಿಎಸ್‍ವೈ, ಈಗಾಗಲೇ ನಾನು ವಿರೋಧ ಪಕ್ಷದ ನಾಯಕನಾಗಿರುವುದರಿಂದ ಮತ್ತೊಮ್ಮೆ ಶಾಸಕಾಂಗದ ಸಭೆ ಅಗತ್ಯವಿಲ್ಲ. ಹೀಗಾಗಿ ನಾನು ಇಂದು ರಾಜ್ಯಪಾಲರನ್ನು ಭೇಟಿಯಾಗಿ ಸರ್ಕಾರ ರಚನೆ ಮಾಡಲು ಹಕ್ಕು ಮಂಡನೆ ಮಾಡಲಿದ್ದೇನೆ. ಅಲ್ಲದೆ ಇವತ್ತೇ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಮಾಡಲು ಅವಕಾಶ ಮಾಡಿಕೊಡಿ ಎಂದು ರಾಜ್ಯಪಾಲ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದರು. ಆ ಬಳಿಕ ಸಂಜಯನಗರದ ಆಂಜನೇಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.
ಮೈತ್ರಿ ಸರ್ಕಾರ ಪತನಗೊಂಡು ಇಂದಿಗೆ 4 ದಿನಗಳು ಆಗಿದ್ದು, ದಿಢೀರ್ ಬೆಳವಣಿಗೆ ಎಂಬಂತೆ ಹೈಕಮಾಂಡ್ ಬಿಎಸ್‍ವೈ ಅವರಿಗೆ ಸೂಚನೆ ನೀಡಿದೆ. ಸರ್ಕಾರ ರಚನೆ ತಡವಾದ ಹಿನ್ನೆಲೆಯಲ್ಲಿ ರಾಜ್ಯ ರಾಜಕೀಯದಲ್ಲಿ ಹಲವು ಅನುಮಾನಗಳು ಮೂಡಿತ್ತು. ಆದರೆ ಈ ಎಲ್ಲಾ ಗಾಳಿ ಸುದ್ದಿಗಳಿಗೆ ತೆರೆ ಎಳೆದಿರುವ ಹೈಕಮಾಂಡ್ ಸ್ಪಷ್ಟ ಸಂದೇಶ ರವಾನೆ ಮಾಡಿದೆ. ತುರ್ತು ಪ್ರಮಾಣ ವಚನ ಸ್ವೀಕಾರ ಹಿನ್ನೆಲೆಯಲ್ಲಿ ಕೇಂದ್ರ ನಾಯಕರು ಗೈರಾಗಲಿದ್ದಾರೆ ಎಂಬ ಮಾಹಿತಿ ಲಭಿಸಿದೆ.