ರಾಜ್ಯದ ಜನತೆಯ ನಂಬಿಕೆಯನ್ನು ಗಳಿಸಿದ ಛಲಗಾರ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜು.26- ಆಂತರಿಕ ಒಳಜಗಳಗಳು, ನಾಯಕತ್ವದಲ್ಲಿನ ಅಪನಂಬಿಕೆ, ಮುಂದೆ ಹಲ್ಲು ಕಿರಿದು ಹಿಂದಿನಿಂದ ಚೂರಿ ಹಾಕುವ ಖಾದಿಖದರಿನ ನಾಯಕರು, ಎರಡನೇ ಸಾಲಿನ ನಾಯಕರನ್ನೆಲ್ಲ ಬದಿಗೊತ್ತಿ, ಇನ್ಯಾರನ್ನೋ ಎತ್ತಿಕಟ್ಟುತ್ತಿದ್ದಾರೆಂಬ ಆರೋಪಗಳನ್ನೆಲ್ಲ ಮೆಟ್ಟಿನಿಂತು ಸ್ವಂತ ಬಲದಿಂದ ರಾಜ್ಯದ ಜನತೆಯ ನಂಬಿಕೆಯನ್ನು ಗಳಿಸಿದ ಛಲಗಾರ ಬಿ.ಎಸ್.ಯಡಿಯೂರಪ್ಪ.

ಈಗ 15ನೇ ವಿಧಾನಸಭೆ ಚುನಾವಣೆಯಲ್ಲಿ ರಾಜಕೀಯ ವಿರೋಧಿಗಳ, ಹಿತಶತ್ರುಗಳ ನಿರೀಕ್ಷೆಗೆ ವಿರುದ್ಧವಾಗಿ ಮತ್ತು ಸಮಸ್ತ ಕನ್ನಡಿಗರ ನಿರೀಕ್ಷೆಗೂ ಮೀರಿ ರಾಜ್ಯದ 29ನೇ ಮುಖ್ಯಮಂತ್ರಿಯಾಗಿ ರಾಜ್ಯದ ಚುಕ್ಕಾಣಿ ಹಿಡಿದಿದ್ದಾರೆ.

ಕಾಂಗ್ರೆಸ್‍ನ ಭದ್ರಕೋಟೆಯನ್ನು ಭೇದಿಸಿ ಪ್ರಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲಿ ಬಿಜೆಪಿಯ ಅಧಿಪತ್ಯ ಸ್ಥಾಪಿಸಲು ಯಡಿಯೂರಪ್ಪ ಯಶಸ್ವಿಯಾಗಿದ್ದು ಸಣ್ಣ ಮಾತಲ್ಲ. ಈಗ ಬಿಜೆಪಿಯ ರಾಷ್ಟ್ರ ನಾಯಕರಷ್ಟೆಯೇಕೆ ಇಡೀ ರಾಷ್ಟ್ರದ ಜನತೆ ಅಚ್ಚರಿಯಿಂದ ಕರ್ನಾಟಕದೆಡೆಗೆ ನೋಡುವಂತೆ ಮಾಡಿದ್ದರು.

ಹಿಂದೆ ಯಾವ ರೀತಿ ಇತರ ಪಕ್ಷಗಳೊಡನೆ ಅಧಿಕಾರ ಹಂಚಿಕೊಂಡರು, ಮುಂದೆ ಯಾವ ರೀತಿ ರಾಜ್ಯವನ್ನು ಆಡಳಿತ ನಡೆಸಲಿದ್ದಾರೆ ಎಂಬುದು ಒತ್ತಟ್ಟಿಗಿಟ್ಟು ನೋಡಿದರೆ, ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪನವರು ನಡೆದು ಬಂದ ಹಾದಿಯೇ ರೋಚಕತೆಯಿಂದ ಕೂಡಿದೆ.

ಹುಟ್ಟು ಹೋರಾಟಗಾರ :
ಬಿ.ಎಸ್. ಯಡಿಯೂರಪ್ಪನವರ ರಾಜಕೀಯ ಜೀವನ ಹುಟ್ಟಿಕೊಂಡಿದ್ದೇ ರೈತ ಹೋರಾಟದಿಂದ. ಯಡಿಯೂರಪ್ಪ ಸವೆಸಿದ ಹಾದಿ ಹೋರಾಟದಿಂದ ಕೂಡಿದೆ. ಸತತ ಮೂರು ದಶಕಗಳಲ್ಲಿ ಅನೇಕ ಏಳು ಬೀಳುಗಳನ್ನು ಕಂಡಿದ್ದಾರೆ. ಮಂಡ್ಯ ಜಿಲ್ಲೆಯ ಬೂಕನಕೆರೆ ಎಂಬ ಕುಗ್ರಾಮದ ಬಡ ರೈತ ಕುಟುಂಬದಲ್ಲಿ ಜನಸಿದ ಯಡಿಯೂರಪ್ಪ ದಿಢೀರ್ ನಾಯಕರಾಗಿ ಬೆಳೆದವರಲ್ಲ.

ಯಾವುದೇ ಗಾಡ್ ಫಾದರ್ ಇಲ್ಲದೇ ಸ್ವಂತ ಪರಿಶ್ರಮದ ಮೇಲೆ ಹಂತಹಂತವಾಗಿ ಬೆಳೆದು ಬಂದ ಧೀಮಂತ ನಾಯಕ. ಹಳ್ಳಿಯಿಂದಲೇ ಹೋರಾಟ ಆರಂಭಿಸಿ ರಾಜಕೀಯ ನೆಲೆಗಟ್ಟನ್ನು ಕಂಡುಕೊಂಡವರು. ಕಾರ್ಯಕರ್ತರ ಅಪನಂಬಿಕೆ, ಹಿಂದಿನಿಂದ ಚೂರಿ ಹಾಕುವ ನಾಯಕರ ಧೋರಣೆಗೆ ಬೇಸತ್ತು ಒಮ್ಮೆ ಪಕ್ಷವನ್ನೂ ತೊರೆದಿದ್ದರು.

ಸಂಘ ಪರಿವಾರದ ಶಿಸ್ತಿನ ಸಿಪಾಯಿಯಾದ ಇವರು, ಅಂದಿನಿಂದ ಇಂದಿನವರೆಗೂ ಪರಿವಾರದ ವಿಶ್ವಾಸವನ್ನು ಉಳಿಸಿಕೊಂಡು ಬಂದಿದ್ದಾರೆ. ಪಕ್ಷ ಸಂಘಟನೆಯಲ್ಲಿ ನಿಪುಣರಾದ ಯಡಿಯೂರಪ್ಪ, ಹೋರಾಟದಲ್ಲಿ ಎತ್ತಿದ ಕೈ. ಭಾಷಣಕ್ಕೆ ನಿಂತರೆ ಗುಡುಗು ಸಿಡಿಲುಗಳ ಮೇಳೈಕೆ. ಇಂತಹ ಯಡಿಯೂರಪ್ಪ ಧೃತಿಗೆಡದೆ 80ರ ದಶಕದಲ್ಲಿ ಎರಡು ಶಾಸಕರಿದ್ದ ಪಕ್ಷವನ್ನು ಹಂತಹಂತವಾಗಿ ಬೆಳೆಸುತ್ತಾ 2008ರ ವಿಧಾನಸಭೆ ಚುನಾವಣೆಯಲ್ಲಿ 110 ಶಾಸಕರನ್ನು ಗೆಲ್ಲಿಸುವಲ್ಲಿ ಇವರ ಪಾತ್ರ ಪ್ರಮುಖವಾಗಿತ್ತು. ಯಡಿಯೂರಪ್ಪನವರ ರಾಜಕೀಯ ಜೀವನ ಹುಟ್ಟಿಕೊಂಡಿದ್ದೇ ರೈತ ಹೋರಾಟದಿಂದ.

ರೈತರ ಸಾಲ ಮನ್ನಾ, ಸಾರಾಯಿ ನಿಷೇಧ. ಲಾಟರಿ ನಿಷೇಧ, ರೈತರಿಗೆ ಶೇ.4 ಬಡ್ಡಿದರದಲ್ಲಿ ಸಾಲ, ಬಿಪಿಎಲ್ ಕುಟುಂಬಗಳ ಹೆಣ್ಣುಮಕ್ಕಳ ಸಬಲೀಕರಣಕ್ಕೆ ಭಾಗ್ಯಲಕ್ಷ್ಮಿ ಯೋಜನೆ, ಉಚಿತ ಬೈಸಿಕಲ್ ವಿತರಣೆ ಯೋಜನೆ, ನಿರುದ್ಯೋಗ ನಿವಾರಣೆಗೆ ಸುವರ್ಣ ಕಾಯಕ ಉದ್ಯೋಗ ತರಬೇತಿಯೋಜನೆ, ಹಿರಿಯ ನಾಗರಿಕರ ಸಾಮಾಜಿಕ ಭದ್ರತೆಗೆ ಸಂಧ್ಯಾ ಸುರಕ್ಷಾ ಯೋಜನೆ, ಮೊದಲಾದ ಕ್ರಾಂತಿಕಾರಿ ಕಾರ್ಯಕ್ರಮಗಳನ್ನು ಬಜೆಟ್ ನಲ್ಲಿ ಅಳವಡಿಸಿ ಅನುಷ್ಠಾನಗೊಳಿಸಿದ ಹೆಗ್ಗಳಿಕೆ.

ಕೌಟುಂಬಿಕ ಹಿನ್ನೆಲೆ:
ಬಿ.ಎಸ್.ಯಡಿಯೂರಪ್ಪ ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಬೂಕನಕೆರೆ ಗ್ರಾಮದ ಬಡ ರೈತ ಕುಟುಂಬದ ಸಿದ್ಧಲಿಂಗಪ್ಪ ಪುಟ್ಟಮ್ಮ ದಂಪತಿಗಳಿಗೆ 1943ರಲ್ಲಿ ಜನಿಸಿದರು. ತಾಯಿ ಪುಟ್ಟಮ್ಮ ಅವರನ್ನು ತಮ್ಮ ನಾಲ್ಕನೇ ವಯಸ್ಸಿನಲ್ಲಿಯೇ ಕಳೆದುಕೊಂಡ ಯಡಿಯೂರಪ್ಪ ತಂದೆಯ ಮಮತೆಯಲ್ಲಿ ಬೆಳೆದವರು.

ಬಿ.ಎ. ಪದವಿಯನ್ನು ಮಂಡ್ಯದಲ್ಲಿ ಪೂರೈಸಿದರು. ಕೆಲಸ ಅರಸಿ ಶಿಕಾರಿಪುರಕ್ಕೆ ಬಂದು ವೀರಭದ್ರ ಶಾಸ್ತ್ರೀ ಅವರ ರೈಸ್ ಮಿಲ್ ನಲ್ಲಿ ಗುಮಾಸ್ತನ ಕೆಲಸಕ್ಕೆ ಸೇರಿಕೊಂಡರು. ಕೊನೆಗೆ ಶಾಸ್ತ್ರೀ ಅವರ ಪುತ್ರಿ ಮೈತ್ರಾದೇವಿ ಅವರನ್ನು ವರಿಸಿ ಮಾವನ ಮನೆಯಲ್ಲಿ ನೆಲೆಸಿದರು.

ಯಡಿಯೂರಪ್ಪ ಅವರಿಗೆ ಇಬ್ಬರು ಪುತ್ರರು (ರಾಘವೇಂದ್ರ, ವಿಜಯೇಂದ್ರ), ಹಾಗೂ ಮೂವರು ಪುತ್ರಿಯರು (ಅರುಣಾದೇವಿ, ಪದ್ಮಾವತಿ ಮತ್ತು ಉಮಾದೇವಿ). 2004ರಲ್ಲಿ ಪತ್ನಿ ಮೈತ್ರಾದೇವಿಯವರು ಆಕಸ್ಮಿಕವಾಗಿ ನೀರಿನ ತೊಟ್ಟಿಯಲ್ಲಿ ಬಿದ್ದು ತೀರಿಕೊಂಡರು.

ಯಡಿಯೂರಪ್ಪ ಅಲಂಕರಿಸಿದ ಹುದ್ದೆಗಳು:
1975 : ಶಿಕಾರಿಪುರ ಪುರಸಭೆ ಸದಸ್ಯರಾಗಿ ಆಯ್ಕೆ, 1977ರಲ್ಲಿ ಅಧ್ಯಕ್ಷ.
1980 : ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ.
1983 : ಮಾಜಿ ಸಚಿವ ವೆಂಕಟಪ್ಪ ಅವರನ್ನು ಸೋಲಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶ
1985 : 88 ವರೆಗೆ ಬಿಜೆಪಿ ಜಿಲ್ಲಾಧ್ಯಕ್ಷ, 1988 ರಲ್ಲಿ ರಾಜ್ಯಾಧ್ಯಕ್ಷ,
1992 ರಲ್ಲಿ ರಾಷ್ಟ್ರೀಯ ಕಾರ್ಯದರ್ಶಿ ಸ್ಥಾನ ನಿರ್ವಹಣೆ
1994 : ವಿಧಾನಸಭೆ ಪ್ರತಿಪಕ್ಷದ ನಾಯಕ
1999 : ಮತ್ತೆ ರಾಜ್ಯಾಧ್ಯಕ್ಷ, 2000 ರಲ್ಲಿ ಮೇಲ್ಮನೆ ಸದಸ್ಯ
2004 : ಐದನೇ ಬಾರಿಗೆ ವಿಧಾನಸಭೆ ಪ್ರವೇಶ, ಇನ್ನೊಮ್ಮೆ ಪ್ರತಿಪಕ್ಷದ ನಾಯಕ
2006 : ಸಮ್ಮಿಶ್ರ ಸರ್ಕಾರ ರಚನೆ, ಉಪಮುಖ್ಯಮಂತ್ರಿ, ಹಣಕಾಸು ಮತ್ತು ಅಬಕಾರಿ ಖಾತೆಗಳ ನಿರ್ವಹಣೆ
2007 : ನವೆಂಬರ್ 12 ರಿಂದ 17ರ ವರೆಗೆ 7 ದಿನ ಮಾತ್ರ ಮುಖ್ಯಮಂತ್ರಿಯಾಗಿ ಪದವಿ ಅಲಂಕರಿಸಿದ್ದರು.
2008 : ಮೇ 30ರ ಶುಕ್ರವಾರ 25ನೇ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ನಂತರ ಸದಾನಂದ ಗೌಡರಿಗೆ ಸಿಎಂ ಪಟ್ಟ ಒಲಿದಿದ್ದು, ಬಂಡಾಯವೆದ್ದು ಜಗದೀಶ್ ಶೆಟ್ಟರ್ ರನ್ನು ಕುರ್ಚಿಯಲ್ಲಿ ಕೂರಿಸಿದ್ದು ಸಾಧನೆಗಿಂತ ವೈಫಲ್ಯ ಎನ್ನಬಹುದು, ಬಿಜೆಪಿಯಿಂದ ಹೊರ ಬಿದ್ದ ಮೇಲೆ ಕರ್ನಾಟಕ ಜನತಾ ಪಕ್ಷ ಸ್ಥಾಪನೆ, ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸುವುದಾಗಿ ಘೋಷಣೆ ಮಾಡಿದರು. ಕೆಜೆಪಿ ತಕ್ಕಮಟ್ಟಿನ ಸಾಧನೆ ಮಾಡಿದರೂ ಆಂತರಿಕ ಒತ್ತಡದಿಂದ ರಾಷ್ಟ್ರ ರಾಜಕೀಯದ ಕನಸಿನಿಂದ ತಾವೇ ಬೆಳೆಸಿದ ಪಕ್ಷವನ್ನು ತೊರೆದರು.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ