ಬೆಂಗಳೂರು, ಜು.26- ಸಂಜೆ ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖ ಅಧಿಕಾರಿಗಳ ಜತೆ ಮಾತುಕತೆ ನಡೆಸಿ ಪರಿಸ್ಥಿತಿಯ ಸಮಾಲೋಚನೆ ನಡೆಸಿದ್ದಾರೆ.
ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಪೊಲೀಸ್ ಮಹಾನಿರ್ದೇಶಕರಾದ ನೀಲಮಣಿ ಎನ್.ರಾಜು, ನಗರ ಪೊಲೀಸ್ ಆಯುಕ್ತ ಅಲೋಕ್ಕುಮಾರ್ ಸೇರಿದಂತೆ ಮತ್ತಿತರ ಅಧಿಕಾರಿಗಳ ಜತೆ ಸಮಾಲೋಚನೆ ಸಭೆ ನಡೆಸಿದರು.
ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಭದ್ರತೆ, ಕಾನೂನು ಮತ್ತು ಸುವ್ಯವಸ್ಥೆ ಸೇರಿದಂತೆ ನಾನಾ ವಿಷಯಗಳ ಕುರಿತು ಚರ್ಚಿಸಲಾಗಿದೆ.
ಇದಕ್ಕೂ ಮುನ್ನ ಯಡಿಯೂರಪ್ಪನವರ ಡಾಲರ್ಸ್ಕಾಲೋನಿ ನಿವಾಸಕ್ಕೆ ಆಗಮಿಸಿದ ಅಲೋಕ್ಕುಮಾರ್, ಕೈಗೊಳ್ಳಬೇಕಾದ ಭದ್ರತೆ ಸೇರಿದಂತೆ ಮತ್ತಿತರ ವಿಷಯಗಳ ಬಗ್ಗೆ ಚರ್ಚಿಸಿದರು.
ಯಡಿಯೂರಪ್ಪ ನಿವಾಸಕ್ಕೆ ಹೆಚ್ಚಿನ ಭದ್ರತೆಯನ್ನು ಒದಗಿಸಲಾಗಿದ್ದು, ಪ್ರತಿಯೊಬ್ಬರನ್ನೂ ಬಿಗಿ ತಪಾಸಣೆ ನಡೆಸಿ ಒಳ ಬಿಡಲಾಗುತ್ತಿದೆ.
ಮನೆ ಮುಂಭಾಗದಲ್ಲಿ ಲೋಹ ಪರಿಶೋಧಕ ಅಳವಡಿಸಲಾಗಿದೆ. ಬೆಳಗಿನಿಂದಲೇ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸ್ಥಳದಲ್ಲೇ ಮೊಕ್ಕಾಂಹೂಡಿ ಭದ್ರತೆ ಕೈಗೊಂಡಿದ್ದಾರೆ.
ಸಂಜೆ ರಾಜಭವನದಲ್ಲಿ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ.